ಬೆಂಗಳೂರು- ವನ್ಯಜೀವಿ ಧಾಮಗಳಲ್ಲಿ ಪ್ರಾಣಿಗಳ ಶಾಂತಿ ಮತ್ತು ಸುರಕ್ಷತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ಆದೇಶದ ಬೆನ್ನಲ್ಲೇ, ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಬಂಡೀಪುರ, ಕೆ.ಗುಡಿ ಹಾಗೂ ಪಿ.ಜಿ.ಪಾಳ್ಯ ವನ್ಯಜೀವಿ ಸಫಾರಿಗಳಲ್ಲಿ ಇನ್ಮುಂದೆ ಮೊಬೈಲ್ ಫೋನ್ ಬಳಕೆಯನ್ನು ಅರಣ್ಯ ಇಲಾಖೆ ಸಂಪೂರ್ಣವಾಗಿ ನಿಷೇಧಿಸಿದೆ.
ಸ್ವೀಕಾರ ಪಕ್ಷದ ವಿವರಣೆ
ಅಕ್ಟೋಬರ್ 10, ಜಾರಿಗೆ ಬಂದಿರುವ ಈ ನೂತನ ನಿಯಮದಂತೆ, ಸಫಾರಿಗೆ ತೆರಳುವ ಪ್ರವಾಸಿಗರು ಮಾತ್ರವಲ್ಲದೆ ವಾಹನ ಚಾಲಕರು ಹಾಗೂ ಗೈಡ್ಗಳಿಗೂ (ಮಾರ್ಗದರ್ಶಕರು) ಮೊಬೈಲ್ ಬಳಕೆ ನಿಷೇಧಿಸಲಾಗಿದೆ.
ಹುಲಿ ಸಂರಕ್ಷಿತ ಪ್ರದೇಶಗಳ ಕೋರ್ ಭಾಗಗಳಲ್ಲಿ ಪರಿಸರ ಪ್ರವಾಸೋದ್ಯಮದ ಹೆಸರಿನಲ್ಲಿ ಶಬ್ದ ಮಾಲಿನ್ಯ, ಮೊಬೈಲ್ ರಿಂಗ್ಟೋನ್ ಹಾಗೂ ಪ್ರವಾಸಿಗರು ಫೋನ್ ಬಳಸಿ ಮಾಡಿಕೊಳ್ಳುವ ಗೊಂದಲಗಳಿಂದ ಪ್ರಾಣಿಗಳಿಗೆ ತೊಂದರೆಯಾಗುತ್ತಿರುವುದನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿತ್ತು. 2025ರ ನವೆಂಬರ್ 17ರಂದು ಸುಪ್ರೀಂ ಕೋರ್ಟ್ ನೀಡಿದ ಆದೇಶದ ಪ್ಯಾರಾ 48.5ರ ನಿರ್ದೇಶನದಂತೆ ಅರಣ್ಯ ಇಲಾಖೆ ಈ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಹಿಂದಿನ ಘಟನೆಗಳನ್ನು ಗಮನಿಸಿದರೆ, ಸಫಾರಿ ಸಮಯದಲ್ಲಿ ಪ್ರವಾಸಿಗರು ಮೊಬೈಲ್ನಲ್ಲಿ ಗಟ್ಟಿಯಾಗಿ ಮಾತನಾಡುವುದು, ಸೆಲ್ಫಿ ಹಾಗೂ ವೀಡಿಯೋ ಚಿತ್ರೀಕರಣಕ್ಕಾಗಿ ಪ್ರಾಣಿಗಳನ್ನು ಹಿಂಬಾಲಿಸುವುದು ಅಥವಾ ಕಿರಿಕಿರಿ ಉಂಟುಮಾಡುವುದು, ಹಾಗೂ ಫೋನ್ ಕರೆಗಳ ಶಬ್ದಕ್ಕೆ ವನ್ಯಜೀವಿಗಳು ಬೆದರಿ ಆಕ್ರಮಣಕಾರಿಯಾಗುವುದು ಕಂಡುಬಂದಿತ್ತು. ಇಂತಹ ಘಟನೆಗಳಿಗೆ ಮುಕ್ತಿ ನೀಡಲು ಈ ಕಟ್ಟುನಿಟ್ಟಿನ ನಿರ್ಧಾರ ತಳೆಯಲಾಗಿದೆ.
ಮೂಲಭೂತ ಮಾರ್ಗಸೂಚಿಗಳು
ನೂತನ ಮಾರ್ಗಸೂಚಿಗಳು:
ಮೊಬೈಲ್ ನಿಷೇಧ ಹಾಗೂ ಏರ್ಪ್ಲೇನ್ ಮೋಡ್: ಪ್ರವಾಸಿಗರು, ಚಾಲಕರು ಮತ್ತು ಗೈಡ್ಗಳು ಸಫಾರಿಗೂ ಮುನ್ನ ತಮ್ಮ ಮೊಬೈಲ್ಗಳನ್ನು ನಿಗದಿತ ಸ್ಥಳದಲ್ಲಿ ಇಡಬೇಕು ಅಥವಾ ವಾಹನಗಳಲ್ಲಿ ಫೋನ್ ಸಂಪೂರ್ಣವಾಗಿ ‘Airplane Mode’ನಲ್ಲಿರುವುದನ್ನು ಅಧಿಕಾರಿಗಳು ಖಚಿತಪಡಿಸಿಕೊಳ್ಳಲಿದ್ದಾರೆ.
ಸುರಕ್ಷತೆಗೆ ವೈರ್ಲೆಸ್ ವ್ಯವಸ್ಥೆ: ತುರ್ತು ಸಂಪರ್ಕ ಹಾಗೂ ಪ್ರವಾಸಿಗರ ಭದ್ರತೆಗಾಗಿ ಪ್ರತಿಯೊಂದು ಸಫಾರಿ ವಾಹನದಲ್ಲೂ ಕಡ್ಡಾಯವಾಗಿ ವಾಕಿ-ಟಾಕಿ (Mobile Wireless Set) ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಕ್ಯಾಮೆರಾ ಬಳಕೆಗೆ ಅವಕಾಶ: ಮೊಬೈಲ್ ಫೋನ್ ಬ್ಯಾನ್ ಆಗಿದ್ದರೂ, ವನ್ಯಜೀವಿಗಳ ಛಾಯಾಗ್ರಹಣಕ್ಕಾಗಿ ನಿಯಮಾನುಸಾರ ಕ್ಯಾಮೆರಾಗಳನ್ನು ಬಳಸಲು ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ. ಬುಕಿಂಗ್ ತಂತ್ರಾಂಶದ ಮೂಲಕವೂ ಈ ಬಗ್ಗೆ ಮಾಹಿತಿ ನೀಡಲಾಗುವುದು.
ಎಚ್ಚರಿಕೆ ಫಲಕಗಳ ಅಳವಡಿಕೆ: ಸಫಾರಿ ವಾಹನಗಳು ಹಾಗೂ ಆರಂಭಿಕ ಕೌಂಟರ್ಗಳಲ್ಲಿ ಮೊಬೈಲ್ ನಿಷೇಧದ ಬಗ್ಗೆ ಸ್ಪಷ್ಟ ಸೂಚನಾ ಫಲಕಗಳನ್ನು ಹಾಕಲು ಇಲಾಖೆ ಸೂಚಿಸಿದೆ.
ಅರಣ್ಯ ಇಲಾಖೆಯ ಈ ಕ್ರಮದಿಂದ ವನ್ಯಜೀವಿಗಳ ನೈಸರ್ಗಿಕ ಆವಾಸಸ್ಥಾನಕ್ಕೆ ಉಂಟಾಗುತ್ತಿದ್ದ ಧಕ್ಕೆ ತಪ್ಪಲಿದ್ದು, ಪ್ರವಾಸಿಗರೂ ಕೂಡ ಮೊಬೈಲ್ ಕಿರಿಕಿರಿ ಇಲ್ಲದೆ ಪ್ರಕೃತಿ ಮತ್ತು ವನ್ಯಜೀವಿಗಳನ್ನು ಹತ್ತಿರದಿಂದ ಆನಂದಿಸಲು ಸಾಧ್ಯವಾಗಲಿದೆ.

