ಬೆಂಗಳೂರು: ದಸರಾ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಡಿನಾದ್ಯಂತ ಸಡಗರ-ಸಂಭ್ರಮ ಮಣೆ ಮಾಡಿದೆ. ಅದರಲ್ಲಿಯೂ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ, ಜಂಬೂಸವಾರಿ ಕಣ್ತಂಬಿಕೊಳ್ಳಲು ಜನರು ಕಾತರದಿಂದ ಕಾಯುತ್ತಿದ್ದಾರೆ. ಈ ಸಡಗರದ ಕ್ಷಣವನ್ನು ಇನ್ನಷ್ಟು ಸಂಭ್ರಮಿಸುವ ನಿಟ್ಟಿನಲ್ಲಿ ಕೆ.ಎಸ್.ಆರ್.ಟಿ.ಸಿ ರಾಜ್ಯದ ವಿವಿಧ ಸ್ಥಳಗಳಿಗೆ ದಸರಾ ವಿಶೇಷ ಬಸ್ ಸೌಲಬ್ಯ ಕಲ್ಪಿಸಿದೆ.
ಪ್ರಯಾಣಿಕರ ಮತ್ತು ಪ್ರವಾಸಿಗರ ಅನುಕೂಲಕ್ಕಾಗಿ ಕೆ.ಎಸ್.ಆರ್.ಟಿ.ಸಿ ಬೆಂಗಳೂರಿನಿಂದ ರಾಜ್ಯ ಹಾಗೂ ಅಂತರರಾಜ್ಯದ ವಿವಿಧ ಸ್ಥಳಗಳಿಗೆ 3,000ಕ್ಕೂ ಹೆಚ್ಚು ವಿಶೇಷ ಬಸ್ಗಳು ಸಂಚರಿಸಲಿವೆ. ಪ್ರಮುಖವಾಗಿ ಮೈಸೂರು ದಸರಾಅ ಹಿನ್ನೆಲೆಯಲ್ಲಿ ಮೈಸೂರಿಗೆ ಪ್ರತ್ಯೇಕವಾಗಿ 700 ಬಸ್ ಗಳು ಸಂಚರಿದ್ಸಲಿವೆ.
ಅಕ್ಟೋಬರ್ 16 ರಿಂದ 20ವರೆಗೂ 5 ದಿನಗಳ ಕಾಲ ಬೆಂಗಳೂರಿನಿಂದ ರಾಜ್ಯ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಗೆ 3,000ಕ್ಕೂ ಅಧಿಕ ವಿಶೇಷ ಬಸ್ಗಳು ಸಂಚರಿಸಲಿವೆ.
ಹಬ್ಬದ ರಜೆ ಮುಗಿಸಿ ವಾಪಸ್ಸಾಗುವ ಪ್ರಯಾಣಿಕರಿಗಾಗಿ ದಿನಾಂಕ ಅಕ್ಟೋಬರ್ 20, 21 ರಂದು ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ವಿಶೇಷ ಬಸ್ಗಳ ಕಾರ್ಯಾಚರಣೆ ಇರಲಿದೆ.
ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್), ಮೈಸೂರು ರಸ್ತೆ ಬಸ್ ನಿಲ್ದಾಣ (ಸ್ಯಾಟಲೈಟ್) ಹಾಗೂ ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣಗಳಿಂದ ಬಸ್ ಗಳು ಹೊರಡಲಿವೆ.
ಪ್ರಯಾಣಿಕರ ದಟ್ಟಣೆಯನ್ನು ತಪ್ಪಿಸಲು ಮುಂಗಡ ಬುಕಿಂಗ್ ಮಾಡಲಾದ ಬಸ್ಗಳನ್ನು ವಿಜಯನಗರ TTMC, ಯಶವಂತಪುರ TTMC, ಜಯನಗರ TTMC, ಬನಶಂಕರಿ TTMC, ಬಸವೇಶ್ವರನಗರ ಬಸ್ ನಿಲ್ದಾಣ, ದೊಮ್ಮಲೂರು ಬಸ್ ನಿಲ್ದಾಣಗಳಿಂದ ಕಾರ್ಯಾಚರಿಸಲಾಗುತ್ತದೆ.
ಮೈಸೂರು ದಸರಾಗೆ 700 ಬಸ್:
ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರಿಗೆ ಪ್ರತ್ಯೇಕವಾಗಿ 300 ಹೆಚ್ಚುವರಿ ಬಸ್ಗಳು ಸಂಚರಿಸಲಿವೆ. ಮೈಸೂರಿನಿಂದ ಸುತ್ತಮುತ್ತಲಿನ ಪ್ರೇಕ್ಷಣೀಯ/ಧಾರ್ಮಿಕ ಸ್ಥಳಗಳಾದ ಚಾಮುಂಡಿಬೆಟ್ಟ, ಕೆ.ಆರ್.ಎಸ್/ಬೃಂದಾವನ, ಶ್ರೀರಂಗಪಟ್ಟಣ, ನಂಜನಗೂಡು, ಮಡಿಕೇರಿ, ಮಂಡ್ಯ, ಮಳವಳ್ಳಿ, ಎಚ್.ಡಿ.ಕೋಟೆ, ಚಾಮರಾಜನಗರ, ಹುಣಸೂರು, ಕೆ.ಆರ್.ನಗರ, ಗುಂಡ್ಲುಪೇಟೆ ಮುಂತಾದ ಕಡೆಗಳಿಗೆ ಸಂಪರ್ಕ ಕಲ್ಪಿಸಲು 400 ಬಸ್ಗಳನ್ನು ಮೀಸಲಿಡಲಾಗಿದೆ. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ನೇರವಾಗಿ ‘ಫ್ಲೈ ಬಸ್’ ಹವಾನಿಯಂತ್ರಿತ ಸೇವೆ ಲಭ್ಯವಿರಲಿದೆ.
ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ ವಿಶೇಷ ಬಸ್ ಸೌಲಭ್ಯ:
ರಾಜ್ಯದ ಪ್ರಮುಖ ನಗರಗಳು ಹಾಗೂ ಧಾರ್ಮಿಕ ಕ್ಷೇತ್ರಗಳಾದ ಮಂಗಳೂರು, ಉಡುಪಿ, ಕುಂದಾಪುರ, ಪುತ್ತೂರು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ದಾವಣಗೆರೆ, ಗೋಕರ್ಣ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಕಾರವಾರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಮುಂತಾದ ಸ್ಥಳಗಳು.
ನೆರೆರಾಜ್ಯಗಳ ನಗರಗಳಾದ ಹೈದರಾಬಾದ್, ವಿಜಯವಾಡ, ನೆಲ್ಲೂರು, ಚೆನ್ನೈ, ಊಟಿ, ಕೊಡೈಕೆನಾಲ್, ಸೇಲಂ, ತಿರುಚಿರಾಪಳ್ಳಿ, ಕುಂಭಕೋಣಂ, ಕೊಯಮತ್ತೂರು, ಮಧುರೈ, ಪಣಜಿ, ಮಂತ್ರಾಲಯ, ಪುಣೆ, ಎರ್ನಾಕುಲಂ, ಪಾಲ್ಘಾಟ್ ಸೇರಿದಂತೆ ಹಲವು ಪ್ರಮುಖ ಸ್ಥಳಗಳಿಗೆ ವಿಶೇಷ ಬಸ್ಗಳು ಓಡಾಡಲಿವೆ.
ರಿಯಾಯಿತಿ ಲಭ್ಯ:
ಒಂದೇ ಟಿಕೆಟ್ನಲ್ಲಿ 4 ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿದರೆ ಮೂಲ ಪ್ರಯಾಣ ದರದಲ್ಲಿ ಶೇ. 5 ರಷ್ಟು ರಿಯಾಯಿತಿ ದೊರೆಯಲಿದೆ.
ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್ಗಳನ್ನು ಒಟ್ಟಿಗೆ ಬುಕ್ ಮಾಡಿದರೆ, ವಾಪಸ್ ಬರುವ ಪ್ರಯಾಣ ದರದಲ್ಲಿ ಶೇ. 10 ರಷ್ಟು ರಿಯಾಯಿತಿ ನೀಡಲಾಗುತ್ತದೆ.
ಪ್ರಯಾಣಿಕರು ಕೆ.ಎಸ್.ಆರ್.ಟಿ.ಸಿ ಅಧಿಕೃತ ವೆಬ್ಸೈಟ್ www.ksrtc.karnataka.gov.in ಅಥವಾ ಮೊಬೈಲ್ ಆ್ಯಪ್ ಮೂಲಕ ಸುಲಭವಾಗಿ ಇ-ಟಿಕೆಟ್ ಬುಕ್ ಮಾಡಬಹುದು.

