ಗಂಗಾವತಿ: ಸಾಲದ ಹೊರೆ ತೀರಿಸಲು ಹಾಗೂ ವಿಮೆ ಹಣ ಪಡೆಯುವ ಉದ್ದೇಶದಿಂದ ಪತ್ನಿಯೇ ತನ್ನ ಪತಿಯನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನಲ್ಲಿ ನಡೆದಿರುವ ಈ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.
ಪತಿ ಮೃತಪಟ್ಟರೆ ಸಾಲ ಮನ್ನಾ ಆಗಬಹುದು ಮತ್ತು ವಿಮೆ ಹಣ ಕೈ ಸೇರಬಹುದು ಎಂಬ ಉದ್ದೇಶದಿಂದ ಪತ್ನಿ ಈ ಕೃತ್ಯ ಎಸಗಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ವ್ಯಕ್ತಿಯ ಪತ್ನಿ ಸೇರಿದಂತೆ ಸಂಬಂಧಪಟ್ಟವರ ವಿಚಾರಣೆ ನಡೆಸಲಾಗಿದ್ದು, ಕೊಲೆಯ ಹಿಂದಿನ ನಿಜವಾದ ಕಾರಣ ಹಾಗೂ ಇತರ ವಿವರಗಳು ತನಿಖೆಯಿಂದ ಸ್ಪಷ್ಟವಾಗಬೇಕಿದೆ.
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಮುಷ್ಟೂರು ಕ್ಯಾಂಪ್ ನಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರಾಘವೇಂದ್ರ(45) ಕೊಲೆಯಾದ ವ್ಯಕ್ತಿ. ಪತ್ನಿ ಉಮಾ, ಸಂಬಂಧಿ ಶಿವಾಜಿ ಮತ್ತು ಕಲೀಲ್ ಸಾಬ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ರಾಘವೇಂದ್ರ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ. ಈತನನ್ನು ಕೊಲೆ ಮಾಡಿದರೆ ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಪಡೆದ ಸಾಲ ಮನ್ನಾ ಆಗುತ್ತದೆ. ವಿಮೆಯಿಂದ ಹಣ ಬರುತ್ತದೆ ಎನ್ನುವ ಕಾರಣಕ್ಕೆ ಉಮಾ ಕೊಲೆಗೆ ಸಂಚು ರೂಪಿಸಿದ್ದಾಳೆ. ಸೆಪ್ಟೆಂಬರ್ 7ರಂದು ಗಂಗಾವತಿಗೆ ಆಗಮಿಸಿದ್ದ ಉಮಾ ವಿಮೆಯ ಹಣ ಮತ್ತು ಸಾಲ ಮನ್ನಾ ಆಗುವ ಬಗ್ಗೆ ಮಾಹಿತಿ ಕಲೆ ಹಾಕಿದ್ದಾಳೆ. ಅದೇ ದಿನ ರಾತ್ರಿ ಮುಸ್ಟೂರು ಕ್ಯಾಂಪ್ ನಿಂದ ಹೆಬ್ಬಾಳಕ್ಕೆ ಹೋಗುವ ಮಾರ್ಗದಲ್ಲಿ ಕಟ್ಟಿಗೆಯಿಂದ ಹೊಡೆದು ರಾಘವೇಂದ್ರನನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಓರ್ವ ಅಭ್ಯರ್ಥಿಯಿಂದ ನಾಮಪತ್ರ ವಾಪಸ್: ಕಣದಲ್ಲಿ 13 ಅಭ್ಯರ್ಥಿಗಳು
ಕೊಪ್ಪಳ: ಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಒಂದು ಸ್ಥಾನ ಆಯ್ಕೆಯ ಚುನಾವಣೆ ಇದೇ ಅಕ್ಟೋಬರ್ 23 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಮತದಾನ ನಡೆಯಲಿದ್ದು, ಅಂತಿಮವಾಗಿ ಚುನಾವಣಾ ಕಣದಲ್ಲಿ 13 ಅಭ್ಯರ್ಥಿಗಳು ಉಳಿದಿದ್ದಾರೆ ಎಂದು ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಜಹೀರಾ ನಸೀಮ್ ಅವರು ತಿಳಿಸಿದ್ದಾರೆ.
ನಾಮಪತ್ರ ಹಿಂಪಡೆಯಲು ಶುಕ್ರವಾರ ಕೊನೆ ದಿನವಾಗಿದ್ದರಿಂದ ಪಕ್ಷೇತರ ಅಭ್ಯರ್ಥಿ ನಬಿರಸೂಲ್ ತಂದೆ ದಸ್ತಗೀರಸಾಬ್ ಜಕಾತಿ ಎಂಬುವರು ನಾಮಪತ್ರ ವಾಪಸ್ ಪಡೆದಿದ್ದಾರೆ. ಬುಧವಾರ ನಡೆದ ನಾಮಪತ್ರ ಪರಿಶೀಲನೆಯಲ್ಲಿ 14 ಅಭ್ಯರ್ಥಿಗಳ ನಾಮೊತ್ರ ಕ್ರಮಬದ್ಧವಾಗಿದ್ದವು. ಇದೀಗ ಓರ್ವ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆದಿದ್ದರಿಂದ ಅಂತಿಮ ಚುನಾವಣಾ ಕಣದಲ್ಲಿ 13 ಅಭ್ಯರ್ಥಿಗಳು ಮಾತ್ರ ಉಳಿದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶರಣಪ್ಪ ಮಟ್ಟೂರ ತಂದೆ ಹಣಮಂತಪ್ಪ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶಶೀಲ್ ಜಿ. ನಮೋಶಿ ತಂದೆ ಗಂಗಾಧರ ನಮೋಶಿ, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸಾಯಬಣ್ಣಾ ತಂದೆ ನಾಗೀಂದ್ರ, ಜನತಾ ದಳ(ಸಂಯುಕ್ತ) ಪಕ್ಷದ ಅಭ್ಯರ್ಥಿ ಶಂಕರೆಡ್ಡಿ ಪಾಟೀಲ ತಂದೆ ಲಿಂಗನಗೌಡ ಪಾಟೀಲ, ಪಕ್ಷೇತರ ಅಭ್ಯರ್ಥಿಗಳಾದ ಕವಿರಾಜ ತಂದೆ ನಾಗಣ್ಣ, ತುಳಸಪ್ಪ ದಾಸರ ತಂದೆ ಕರಿಯಪ್ಪ ದಾಸರ, ಮಹಬೂಬ್ ತಂದೆ ಮೊಹಮ್ಮದ ಖಾಜಾ ಹುಸೇನ್ ವಂಟೇಲಿ, ರಾಜಕುಮಾರ ತಂದೆ ಮಾಣಿಕಪ್ಪ, ರಾಜು ತಂದೆ ದೇವಪ್ಪ, ಶರಣಬಸಪ್ಪ ತಂದೆ ಪೀರಪ್ಪ, ಶಶಿಧರ ತಂದೆ ಬಸವರಾಜ, ಶಿವಶಂಕರ ತಂದೆ ಅಣ್ಣಪ್ಪ ಹಾಗೂ ಡಾ.ಸುರೇಶ ತಂದೆ ದಾವೀದಪ್ಪ ಅಂತಿಮ ಕಣದಲ್ಲಿ ಉಳಿದ ಅಭ್ಯರ್ಥಿಗಳಾಗಿದ್ದಾರೆ.

