ಶಿವಮೊಗ್ಗ : ದಸರಾ ಹಬ್ಬದ ಹಿನ್ನಲೆಯಲ್ಲಿ ಸಾರ್ವಜನಿಕರು ಮೃಗಾಲಯ ವೀಕ್ಷಣೆಗೆ ಹಾಗೂ ಶಾಲಾ/ಕಾಲೇಜು ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಕಾರಣ ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಪ್ರಕೃತಿ ಶಿಕ್ಷಣ ನೀಡುವ ಸಲುವಾಗಿ ಹುಲಿ-ಸಿಂಹಧಾಮದಲ್ಲಿನ ಮೃಗಾಲಯ ಹಾಗೂ ಸಫಾರಿ ವೀಕ್ಷಣೆಯನ್ನು ದಿನಾಂಕ:13.10.2026 ಹಾಗೂ 20.10.2026 ರ ಮಂಗಳವಾರವೂ ಸಹ ತೆರೆದಿರುತ್ತದೆ.
ಪ್ರವಾಸಿಗರು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳುವಂತೆ ತ್ಯಾವರೆಕೊಪ್ಪ ಹುಲಿ-ಸಿಂಹಧಾಮದ ಕಾರ್ಯ ನಿರ್ವಾಹಕ ನಿರ್ದೇಶಕರು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಸಕ್ರೆಬೈಲು ಆನೆ ಬಿಡಾರಕ್ಕೆ ಪಶುವೈದ್ಯರ ನೇಮಕ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ, ಅ.17ಕ್ಕೆ ನೇರ ಸಂದರ್ಶನ
ಶಿವಮೊಗ್ಗ : ಶಿವಮೊಗ್ಗ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿರುವ ಪ್ರಸಿದ್ಧ ಸಕ್ರೆಬೈಲು ಆನೆ ಬಿಡಾರದ ಆನೆಗಳ ಆರೈಕೆ, ಚಿಕಿತ್ಸೆ ಹಾಗೂ ವನ್ಯಜೀವಿ ರಕ್ಷಣಾ ಕಾರ್ಯಗಳಿಗಾಗಿ ಹೊರಗುತ್ತಿಗೆ ಆಧಾರದಲ್ಲಿ ಪಶುವೈದ್ಯರೊಬ್ಬರನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು ಅಕ್ಟೋಬರ್ 16 ರವರೆಗೆ ವಿಸ್ತರಿಸಲಾಗಿದೆ.
ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಿಸಿರುವಂತೆ, ಈ ಹುದ್ದೆಯು ತುರ್ತು ಸಂದರ್ಭಗಳಲ್ಲಿ ವನ್ಯಪ್ರಾಣಿಗಳಿಗೆ ಚಿಕಿತ್ಸೆ ನೀಡುವುದು, ಮರಣೋತ್ತರ ಪರೀಕ್ಷೆ ನಡೆಸುವುದು ಹಾಗೂ ಮಾನವ-ವನ್ಯಪ್ರಾಣಿ ಸಂಘರ್ಷದ ಸಂದರ್ಭದಲ್ಲಿ ತ್ವರಿತವಾಗಿ ಸ್ಪಂದಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ.
ಅರ್ಜಿದಾರರು ಬ್ಯಾಚಲರ್ ಆಫ್ ವೆಟರ್ನರಿ ಸೈನ್ಸ್ & ಅನಿಮಲ್ ಹಸ್ಬ್ಯಂಡರಿ (B.V.Sc & A.H) ಪದವಿ ಪಡೆದಿರಬೇಕು. ವನ್ಯಜೀವಿ ವಿಷಯದಲ್ಲಿ ಸ್ನಾತಕೋತ್ತರ ಪಶುವೈದ್ಯಕೀಯ ಪದವಿ (ಪೋಸ್ಟ್ ಗ್ರಾಜ್ಯುಯೇಷನ್) ಪಡೆದವರಿಗೆ ಹಾಗೂ ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳ ವನ್ಯಜೀವಿ ಕ್ಷೇತ್ರ ಅಥವಾ ಮೃಗಾಲಯಗಳಲ್ಲಿ ಕೆಲಸ ನಿರ್ವಹಿಸಿದ ಅನುಭವ ಇರುವವರಿಗೆ ಮೊದಲ ಆದ್ಯತೆ ನೀಡಲಾಗುವುದು.
ಆಸಕ್ತರು ತಮ್ಮ ಸ್ವಯಂ ವಿವರಗಳ ಜೊತೆಗೆ ಅಗತ್ಯ ದಾಖಲಾತಿಗಳೊಂದಿಗೆ ಅ.17 ರಂದು ಬೆಳಿಗ್ಗೆ 10 ಗಂಟೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ,ವನ್ಯಜೀವಿ ವಿಭಾಗ ಶಿವಮೊಗ್ಗ ಇಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬೇಕು.
ಅರ್ಜಿ ನಮೂನೆಯನ್ನು ಶಿವಮೊಗ್ಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಿಂದ ಅಥವಾ https://sakrebailuelephantcamp.org/ ವೆಬ್‌ಸೈಟ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ: 08182-222983, ಸಿ.ಬಿ.ಗುರುರಾಜ್ , ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ 9481461553, ಅಂಥೋಣಿ ರೇಗೊ, ವಲಯ ಅರಣ್ಯಾಧಿಕಾರಿ: 9632848453 ಇವರನ್ನು ಸಂಪರ್ಕಿಸಬಹುದೆಂದು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ‘ವಿಪತ್ತು ನಿರ್ವಹಣಾ ತಜ್ಞರ’ ನೇಮಕ: ಅರ್ಜಿ ಆಹ್ವಾನ
ಶಿವಮೊಗ್ಗ : ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಪ್ರಕೃತಿ ವಿಕೋಪ ವಿಪತ್ತು ನಿರ್ವಹಣಾ ತಜ್ಞರ (ಡಿಸಾಸ್ಟರ್ ಮ್ಯಾನೇಜ್ಮೆಂಟ್ ಎಕ್ಸ್ ಪರ್ಟ್) ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ಒಬ್ಬರನ್ನು ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ನೇಮಕಗೊಳ್ಳುವ ಅಭ್ಯರ್ಥಿಗೆ ಮಾಸಿಕ ರೂ. 53,240/- ಗಳ ಗೌರವ ಸಂಭಾವನೆ ನಿಗದಿಪಡಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ತಮ್ಮ ವಿವರವಾದ ಅರ್ಜಿಯನ್ನು ಸಲ್ಲಿಸಲು 2026ರ ಅಕ್ಟೋಬರ್ 21 ಕೊನೆಯ ದಿನಾಂಕವಾಗಿರುತ್ತದೆ. ಹುದ್ದೆಯ ಅರ್ಹತೆ, ವಯೋಮಿತಿ, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಹೆಚ್ಚಿನ ವಿವರಗಳಿಗಾಗಿ ಕಚೇರಿ ವೇಳೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಚೇರಿಯನ್ನು ನೇರವಾಗಿ ಸಂಪರ್ಕಿಸಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ತಿಳಿಸಿದ್ದಾರೆ.

