ಬೆಂಗಳೂರು-ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಕಾನೂನುಬಾಹಿರವಾಗಿ ಹಸ್ತಕ್ಷೇಪ ಮಾಡುತ್ತಿದ್ದು, ಹಾಗೂ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ನಾಯಕರು ಗೌರವಾನ್ವಿತ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.
ಬಿಜೆಪಿ–ಜೆಡಿಎಸ್ ಒಳಗೊಂಡ ಎನ್ ಡಿಎ ನಾಯಕರು ಅನರ್ಹ ಮತದಾರರ ಸೇರ್ಪಡೆಯನ್ನು ತಡೆಯಲು ಮತ್ತು ಮತದಾರರ ಪಟ್ಟಿಯ ಪಾವಿತ್ರ್ಯತೆಯನ್ನು ಕಾಪಾಡಲು ಆಕ್ಷೇಪಣೆ ಸಲ್ಲಿಸುವುದು ಕಾನೂನುಬದ್ಧ ಸಾಂವಿಧಾನಿಕ ಹಕ್ಕಾಗಿದೆ.
ಮತದಾರರ ನೋಂದಣಿ ನಿಯಮಗಳು, 1960’ರ ನಿಯಮ 13(2) ಹಾಗೂ ಭಾರತೀಯ ಚುನಾವಣಾ ಆಯೋಗದ ನಿರ್ದೇಶನಗಳ ಪ್ರಕಾರ ನಮೂನೆ-7 (Form-7) ರ ಮೂಲಕ ಆಕ್ಷೇಪಣೆಗಳನ್ನು ಹಾಗೂ ಸಾಮೂಹಿಕ ಅರ್ಜಿಗಳನ್ನು ಸಲ್ಲಿಸಲು ಮುಕ್ತ ಅವಕಾಶವಿದೆ. ಬೂತ್ ಮಟ್ಟದ ಏಜೆಂಟರು (BLA) ಮತ್ತು ಮತದಾರರು ಈ ಹಕ್ಕನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ನಿಯೋಗವು ಪತ್ರದಲ್ಲಿ ವಿವರಿಸಿದೆ.
ರಾಜ್ಯ ಸರ್ಕಾರದ ಕ್ರಮಗಳು
ಆಕ್ಷೇಪಣೆ ಸಲ್ಲಿಸುವ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರನ್ನು ಗುರಿಯಾಗಿಸಿಕೊಂಡು ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರುತ್ತಿದೆ.
‘ಜನತಾ ಪ್ರಾತಿನಿಧ್ಯ ಕಾಯ್ದೆ, 1950’ರ ಸೆಕ್ಷನ್ 31ರ ಅಡಿಯ ಅಪರಾಧಗಳು ‘ಎಫ್‌ಐಆರ್ ದಾಖಲಿಸಲು ಅವಕಾಶವಿಲ್ಲದ’ (Non-cognizable) ಸ್ವರೂಪದ್ದಾಗಿದ್ದರೂ, ಅದನ್ನು ಬದಿಗೊತ್ತಿ ‘ಭಾರತೀಯ ನ್ಯಾಯ ಸಂಹಿತೆ’ (BNS) ಅಡಿಯಲ್ಲಿ ವಂಚನೆ, ನಕಲಿ ದಾಖಲೆ ಸೃಷ್ಟಿ ಹಾಗೂ ಬೆದರಿಕೆಯಂತಹ ಗಂಭೀರ ಅಪರಾಧಗಳಡಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ.
ಈಗಾಗಲೇ ಭಾಲ್ಕಿ (ಬೀದರ್), ಮಾರ್ಕೆಟ್ ಏರಿಯಾ (ಬೆಳಗಾವಿ), ವ್ಯಾಲಿಕಾವಲ್ (ಬೆಂಗಳೂರು), ಬಳ್ಳಾರಿ ಮತ್ತು ಮೈಸೂರಿನ ನರಸಿಂಹರಾಜ ಕ್ಷೇತ್ರಗಳಲ್ಲಿ ಆರು ಎಫ್‌ಐಆರ್‌ಗಳು ದಾಖಲಾಗಿವೆ ಎಂದು ಎನ್‌ಡಿಎ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 1, 2026 ರಂದು ಮುಖ್ಯಮಂತ್ರಿ ಮತ್ತು ಸಚಿವರು ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಆವರಣದಲ್ಲಿ ಕಾನೂನುಬಾಹಿರವಾಗಿ ಪ್ರತಿಭಟನೆ ನಡೆಸಿದ್ದು, ಚುನಾವಣಾ ಯಂತ್ರಾಂಗದ ಮೇಲೆ ಅನಗತ್ಯ ಪ್ರಭಾವ ಬೀರಿದೆ. ಈ ರಾಜಕೀಯ ಒತ್ತಡದ ಪರಿಣಾಮವಾಗಿಯೇ ಅಂದೇ (01.10.2026) ಸೆಕ್ಷನ್ 31ರ ಅಡಿಯಲ್ಲಿ ಕ್ರಮ ಕೈಗೊಳ್ಳುವ ಕುರಿತು ಸುತ್ತೋಲೆ ಹೊರಡಿಸಲಾಗಿದ್ದು, ಇದು ಆಕ್ಷೇಪಣೆ ಸಲ್ಲಿಸುವವರಲ್ಲಿ ಭಯ ವಾತಾವರಣವನ್ನು ನಿರ್ಮಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆಯೋಗದ ಸ್ವತಂತ್ರತೆ ಕೆರಳಿಕೆ
ಸ್ವತಂತ್ರ ಮತ್ತು ನಿಷ್ಪಕ್ಷಪಾತ ಸಂಸ್ಥೆಯಾದ ಚುನಾವಣಾ ಆಯೋಗದ ಕಾರ್ಯನಿರ್ವಹಣೆಯಲ್ಲಿ ಸರ್ಕಾರದ ಈ ಹಸ್ತಕ್ಷೇಪವನ್ನು ತಕ್ಷಣವೇ ತಡೆಯಬೇಕು ಮತ್ತು ಎಸ್‌ಐಆರ್ ಪ್ರಕ್ರಿಯೆಯು ಯಾವುದೇ ಭಯವಿಲ್ಲದೆ ನ್ಯಾಯಸಮ್ಮತವಾಗಿ ನಡೆಯಲು ಸೂಕ್ತ ನಿರ್ದೇಶನ ನೀಡಬೇಕೆಂದು ಬಿಜೆಪಿ-ಜಡ್‌ಡಿಎಸ್ ನಾಯಕರು ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ.
ಇದೇ ವೇಳೆ, ಚುನಾವಣಾ ಆಯೋಗವು 2026ರ ಜನವರಿ 16ರಂದು ಹೊರಡಿಸಿರುವ ಸಂವಹನ ಹಾಗೂ ಮತದಾರರ ಪಟ್ಟಿಗಳ ಕೈಪಿಡಿ–2023ರ ಮಾರ್ಗಸೂಚಿಗಳನ್ನು ಉಲ್ಲೇಖಿಸಿರುವ NDA, ERO/AEROಗಳಿಗೆ ಸಲ್ಲಿಸಬಹುದಾದ Form-7 ಅರ್ಜಿಗಳ ಸಂಖ್ಯೆಗೆ ಮಿತಿ ಇಲ್ಲ ಎಂದು ಹೇಳಿದೆ. ಬೂತ್ ಮಟ್ಟದ ಏಜೆಂಟ್‌ಗಳು ಸಹ ಹಲವು Form-7 ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇತ್ತೀಚೆಗೆ Form-7 ಅರ್ಜಿಗಳ ವಿಚಾರದಲ್ಲಿಯೂ ಚುನಾವಣಾ ಆಯೋಗ ಹಾಗೂ ರಾಜ್ಯ ಸರ್ಕಾರದ ನಿಲುವುಗಳ ಬಗ್ಗೆ ರಾಜಕೀಯ ಆರೋಪ–ಪ್ರತ್ಯಾರೋಪ ತೀವ್ರಗೊಂಡಿದೆ. Form-7 ಮೂಲಕ ಮತದಾರರ ಹೆಸರುಗಳನ್ನು ನೇರವಾಗಿ ಅಳಿಸಲಾಗುವುದಿಲ್ಲ; ಪ್ರತಿ ಆಕ್ಷೇಪಣೆಯನ್ನೂ ಚುನಾವಣಾ ಅಧಿಕಾರಿಗಳು ಪರಿಶೀಲಿಸಿ ಕಾನೂನುಬದ್ಧ ಪ್ರಕ್ರಿಯೆಯಂತೆ ತೀರ್ಮಾನಿಸಬೇಕು ಎಂಬುದು ಚುನಾವಣಾ ಪ್ರಕ್ರಿಯೆಯ ಮೂಲಭೂತ ಅಂಶವಾಗಿದೆ.
ಮತದಾರರ ಹೆಸರುಗಳ ಬಗ್ಗೆ ವಿವಾದ
ಈ ಹಿನ್ನೆಲೆಯಲ್ಲಿ, SIR ಚುನಾವಣಾ ಆಯೋಗದ ಸ್ವತಂತ್ರ ಪ್ರಕ್ರಿಯೆಯಾಗಿದ್ದು, ರಾಜ್ಯ ಸರ್ಕಾರ ಅಥವಾ ರಾಜಕೀಯ ಪಕ್ಷಗಳು ಅದರಲ್ಲಿ ಯಾವುದೇ ರೀತಿಯ ಒತ್ತಡ ಅಥವಾ ಹಸ್ತಕ್ಷೇಪ ಮಾಡಬಾರದು ಎಂದು NDA ರಾಜ್ಯಪಾಲರ ಗಮನಕ್ಕೆ ತಂದಿದೆ. ಪೊಲೀಸ್ ಪ್ರಕರಣಗಳ ಮೂಲಕ ಮತದಾರರು, ಪಕ್ಷದ ಕಾರ್ಯಕರ್ತರು ಅಥವಾ Form-7 ಅರ್ಜಿದಾರರಲ್ಲಿ ಭೀತಿ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಮತ್ತು SIR ಪ್ರಕ್ರಿಯೆಯ ನಿಷ್ಪಕ್ಷಪಾತತೆ ಹಾಗೂ ವಿಶ್ವಾಸಾರ್ಹತೆಯನ್ನು ಕಾಪಾಡಬೇಕು ಎಂದು ಒಕ್ಕೂಟ ಮನವಿ ಮಾಡಿದೆ.
SIR ಪ್ರಕ್ರಿಯೆ ಈಗ ಮತದಾರರ ಪಟ್ಟಿ ಪರಿಷ್ಕರಣೆಯ ಆಡಳಿತಾತ್ಮಕ ಹಂತದಿಂದ ರಾಜಕೀಯ ಮತ್ತು ಕಾನೂನು ಸಂಘರ್ಷದ ಕೇಂದ್ರಬಿಂದುವಾಗಿ ಮಾರ್ಪಟ್ಟಿದ್ದು, NDAಯ ರಾಜ್ಯಪಾಲರ ದೂರು ಈ ವಿವಾದಕ್ಕೆ ಮತ್ತಷ್ಟು ತೀವ್ರತೆ ನೀಡಿದೆ.

