ಬಾಲಿವುಡ್‌ನ ಗ್ಲಾಮರಸ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ತಮ್ಮ ಸೌಂದರ್ಯ, ನಮ್ಯತೆ (Flexibility) ಹಾಗೂ ಅದ್ಭುತ ಫಿಟ್‌ನೆಸ್‌ಗೆ ಹೆಸರುವಾಸಿ. ಪ್ರತಿಯೊಬ್ಬರಿಗೂ ನಿತ್ಯ ಒಂದೇ ರೀತಿಯ ವ್ಯಾಯಾಮ ಮಾಡುವುದು ಬೇಸರ ತರಿಸುವುದು ಸಹಜ. ಆದರೆ, ಜಾಕ್ವೆಲಿನ್ ತಮ್ಮ ಫಿಟ್‌ನೆಸ್ ದಿನಚರಿಯಲ್ಲಿ ಬೇಸರ ಮೂಡದಂತೆ ದಿನಕ್ಕೊಂದು ವಿಭಿನ್ನ ಹಾಗೂ ಶಕ್ತಿ ನೀಡುವ ಅಭ್ಯಾಸಗಳನ್ನು ಅಳವಡಿಸಿಕೊಂಡಿದ್ದಾರೆ. ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ನಟಿ, ತಮ್ಮ ಇಡೀ ವಾರದ ಫಿಟ್‌ನೆಸ್ ಶೆಡ್ಯೂಲ್ ಅನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ವಾರದ ಆರಂಭ ಅಂದರೆ ಸೋಮವಾರ, ಅತ್ಯಂತ ಕಠಿಣವಾದ ಲೋವರ್-ಬಾಡಿ (Lower-body) ವರ್ಕೌಟ್‌ನೊಂದಿಗೆ ತಮ್ಮ ದಿನಚರಿ ಪ್ರಾರಂಭಿಸುವ ಜಾಕ್ವೆಲಿನ್, ತೊಡೆ ಹಾಗೂ ಕಾಲುಗಳ ಸ್ನಾಯುಗಳ ಬಲವರ್ಧನೆಗೆ ಹೆಚ್ಚಿನ ಗಮನ ನೀಡುತ್ತಾರೆ. ಮಂಗಳವಾರ ಬೆಳಿಗ್ಗೆ ತಮ್ಮ ಫಿಟ್‌ನೆಸ್ ಟ್ರೈನರ್ ಮತ್ತು ಸ್ನೇಹಿತರೊಂದಿಗೆ ಮುಂಬೈನ ಪ್ರಸಿದ್ಧ ಮರೀನ್ ಡ್ರೈವ್‌ನಲ್ಲಿ ಔಟ್‌ಡೋರ್ ರನ್ನಿಂಗ್ ಹಾಗೂ ಸ್ಟ್ರೆಚಿಂಗ್ ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಬುಧವಾರ ಒಳಾಂಗಣ ಕ್ರೀಡೆಯಾದ ‘ಪ್ಯಾಡೆಲ್’ (Padel) ಆಡುವ ಮೂಲಕ ಹೊಸ ರೀತಿಯ ಶಕ್ತಿ ಕಂಡುಕೊಂಡರೆ, ಗುರುವಾರ ಪ್ರಸಿದ್ಧ ಪೈಲೇಟ್ಸ್ (Pilates) ಅಭ್ಯಾಸದ ಮೂಲಕ ತಮ್ಮ ಕೋರ್ ಸ್ಟ್ರೆಂತ್ (Core strength) ಹೆಚ್ಚಿಸಿಕೊಳ್ಳುತ್ತಾರೆ.
ವಾರದ ಕೊನೆಯ ದಿನಗಳಲ್ಲಿ, ಅಂದರೆ ಶುಕ್ರವಾರ ಅಪ್ಪರ್-ಬಾಡಿ (Upper-body) ಸ್ಟ್ರೆಂತ್ ಟ್ರೈನಿಂಗ್ ನಡೆಸಿ ದೇಹದ ಸಮತೋಲನ ಕಾಯ್ದುಕೊಳ್ಳುತ್ತಾರೆ. ವಾರಾಂತ್ಯದ ಶನಿವಾರ ಅತ್ಯಂತ ಉತ್ಸಾಹದಿಂದ ಡ್ಯಾನ್ಸ್ ಕ್ಲಾಸ್‌ನಲ್ಲಿ ಪಾಲ್ಗೊಂಡು ಕ್ಯಾಲೋರಿ ಕರಗಿಸಿದರೆ, ಭಾನುವಾರ ಮನೆಯಲ್ಲೇ ಸರಳ ವ್ಯಾಯಾಮಗಳನ್ನು ಮಾಡುತ್ತಾರೆ. ಅಷ್ಟೇ ಅಲ್ಲದೆ, ಭಾನುವಾರ ತಮ್ಮ ಪ್ರೀತಿಯ ಸಾಕುಪ್ರಾಣಿಗಳೊಂದಿಗೆ ಮನೆಯಲ್ಲೇ ಓಡಾಡುತ್ತಾ ಮೋಜಿನ ಸಮಯ ಕಳೆಯುವುದಾಗಿಯೂ ತಿಳಿಸಿದ್ದಾರೆ. ಈ ವೈವಿಧ್ಯಮಯ ವರ್ಕೌಟ್‌ಗಳ ಜೊತೆಗೆ ನಟಿ ಕಠಿಣವಾದ ಪೋಲ್ ಏರಿಯಲ್ (Pole Aerial) ವರ್ಕೌಟ್ ಸಹ ಮಾಡಲಿದ್ದು, ಇದು ಅವರ ದೇಹಕ್ಕೆ ಅದ್ಭುತ ನಮ್ಯತೆ ನೀಡಲು ನೆರವಾಗುತ್ತದೆ.

