ಚಿಕ್ಕಮಗಳೂರು: ಶಿಕಾರಿಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಗುಂಡು ತಗುಲಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕಡೇಮನೆ ಗ್ರಾಮದಲ್ಲಿ ನಡೆದಿದೆ.
ಮೃತನನ್ನು ಗ್ರಾಮದ ಚೇತನ್ (26) ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ ಏಳು ಮಂದಿ ಸ್ನೇಹಿತರು ಕಾಡಿಗೆ ಶಿಕಾರಿಗೆ ಹೋಗಿದ್ದರು. ಈ ವೇಳೆ ಕತ್ತಲಿನಲ್ಲಿ ಆಕಸ್ಮಿಕವಾಗಿ ಗುಂಡು ಹಾರಿದ್ದು ಅದು ಚೇತನ್ ಗೆ ತಗುಲಿದೆ. ಕೂಡಲೇ ಆತನ ಸ್ನೇಹಿತರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ, ಆದರೆ ಮಾರ್ಗಮಧ್ಯೆಯೇ ಚೇತನ್ ಮೃತಪಟ್ಟಿದ್ದಾರೆ.
ಚೇತನ್ ರನ್ನು ಆಸ್ಪತ್ರೆಗೆ ಕರೆತಂದ ಮೂವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಿದ ಮೂವರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ಸಂಬಂಧ ಬಾಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳೆ ಸಮೀಕ್ಷೆ ವಿವರ ಪರಿಶೀಲನೆಗೆ ಅಕ್ಟೋಬರ್ 5 ಕೊನೆಯ ದಿನ: ಆಕ್ಷೇಪಣೆ ಸಲ್ಲಿಸಲು ಅವಕಾಶ
ಪ್ರಸ್ತಕ ಸಾಲಿನ ಮುಂಗಾರು ಬೆಳೆ ಸಮೀಕ್ಷೆ ಕಾರ್ಯವು ಅಕ್ಟೋಬರ್ 5 ರಂದು ಮುಕ್ತಾಯಗೊಳ್ಳಲಿದ್ದು, ರೈತರು ತಮ್ಮ ಜಮೀನಿನ ಬೆಳೆ ವಿವರಗಳನ್ನು ಪರಿಶೀಲಿಸಿ, ವ್ಯತ್ಯಾಸಗಳಿದ್ದಲ್ಲಿ ತಕ್ಷಣವೇ ಆಕ್ಷೇಪಣೆ ಸಲ್ಲಿಸುವಂತೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಆಗಸ್ಟ್ 15 ರಿಂದ ಆರಂಭವಾಗಿರುವ ಬೆಳೆ ಸಮೀಕ್ಷೆಯ ವಿವರಗಳು ಸರಿಯಾಗಿ ದಾಖಲಾಗಿವೆಯೇ ಎಂಬುದನ್ನು ರೈತರು ಕಡ್ಡಾಯವಾಗಿ ಪರಿಶೀಲಿಸಿಕೊಳ್ಳಬೇಕು. ರೈತರು ತಮ್ಮ ಮೊಬೈಲ್ನಲ್ಲಿ ‘ಬೆಳೆ ದರ್ಶಕ’ ಆಪ್ ಡೌನ್ಲೋಡ್ ಮಾಡಿಕೊಂಡು, ಬೆಳೆ ಸಮೀಕ್ಷೆಯ ವಿವರಗಳನ್ನು ವೀಕ್ಷಿಸಬಹುದಾಗಿದೆ.
ಆಕ್ಷೇಪಣೆ ಸಲ್ಲಿಕೆಗೆ ಅವಕಾಶ:
ಬೆಳೆ ಸಮೀಕ್ಷೆಯಲ್ಲಿ ದಾಖಲಾಗಿರುವ ಬೆಳೆ, ವಿಸ್ತೀರ್ಣ ಅಥವಾ ಇತರ ಯಾವುದೇ ವಿವರಗಳಲ್ಲಿ ವ್ಯತ್ಯಾಸ ಅಥವಾ ತಪ್ಪುಗಳು ಕಂಡುಬAದಲ್ಲಿ, ರೈತರು ಇದೇ ‘ಬೆಳೆ ದರ್ಶಕ’ ಆಪ್ ಮೂಲಕವೇ ನೇರವಾಗಿ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಸರ್ಕಾರಿ ಸೌಲಭ್ಯಗಳಿಗೆ ಬೆಳೆ ಸಮೀಕ್ಷೆ ಆಧಾರ:
ಬೆಳೆ ಸಮೀಕ್ಷೆಯಲ್ಲಿ ನಿಖರವಾಗಿ ದಾಖಲಾದ ಬೆಳೆ ವಿವರಗಳೇ ಮುಂದಿನ ದಿನಗಳಲ್ಲಿ ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ ಹಾಗೂ ಸರ್ಕಾರದ ವಿವಿಧ ಕೃಷಿ/ತೋಟಗಾರಿಕೆ ಯೋಜನೆಗಳ ಸೌಲಭ್ಯ ಪಡೆಯಲು ಪ್ರಮುಖ ಆಧಾರವಾಗಿರುತ್ತವೆ. ಹಾಗಾಗಿ ರೈತರು ಅಕ್ಟೋಬರ್ 5 ರೊಳಗಾಗಿ ತಮ್ಮ ಬೆಳೆ ವಿವರಗಳನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಅಥವಾ ಬಳ್ಳಾರಿಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯನ್ನು (ದೂರವಾಣಿ: 08392-294126) ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಹಕಾರ ಸಂಘಗಳ ಸಮಾಪನೆಗೊಳಿಸಲು ಆಕ್ಷೇಪಣೆ ಸಲ್ಲಿಸಲು 07 ದಿನಗಳ ಕಾಲಾವಕಾಶ
ಧಾರವಾಡ ಜಿಲ್ಲೆಯಲ್ಲಿ ಮಾರ್ಚ 31, 2026 ಕ್ಕೆ ಇದ್ದಂತೆ ಒಟ್ಟು 179 ಸಮಾಪನೆಗೊಂಡ ಸಹಕಾರ ಸಂಘಗಳು ಇರುತ್ತವೆ. ಇವುಗಳ ಪೈಕಿ 76 ಸಮಾಪನೆಗೊಂಡ ಸಹಕಾರ ಸಂಘಗಳ ನೋಂದಣಿ ರದ್ಧತಿಗೆ ಕ್ರಮವಿಡಲಾಗುತ್ತಿದೆ. 76 ಸಮಾಪನೆಗೊಂಡ ಸಹಕಾರ ಸಂಘಗಳ ಪಟ್ಟಿಯನ್ನು ಸಹಕಾರ ಸಂಘಗಳ ಉಪ ನಿಬಂಧಕರು ಧಾರವಾಡ ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಧಾರವಾಡ ಇವರ ಕಚೇರಿಗಳ ನೋಟಿಸ್ ಬೋರ್ಡ ಮೇಲೆ ಪ್ರಕಟಿಸಲಾಗಿದೆ.
ಕಾರಣ ಸದರಿ ಸಹಕಾರ ಸಂಘಗಳಿಂದ ತಮಗೆ ಬರಬೇಕಾದ ಆಥವಾ ಕೊಡಬೇಕಾದ ಯಾವುದೇ ಮೊತ್ತಗಳು ಅದಕ್ಕೆ ಸಂಬಂಧಪಟ್ಟ ಸೂಕ್ತ ದಾಖಲಾತಿಗಳನ್ನು ದಿನಪತ್ರಿಕೆಯಲ್ಲಿ ಪ್ರಕಟಿಸಿದ 07 ದಿನಗಳೊಳಗಾಗಿ ಆಕ್ಷೇಪಣೆ ಸಲ್ಲಿಸಬೇಕು.
ಒಂದು ವೇಳೆ ಆಕ್ಷೇಪಣೆಗಳು ಅಥವಾ ನಿಖರವಾದ ದಾಖಲಾತಿಗಳನ್ನು ಹಾಜರುಪಡಿಸದೇ ಇದ್ದ ಪಕ್ಷದಲ್ಲಿ ಲಭ್ಯವಿದ್ದ ದಾಖಲಾತಿಗಳ ಆಧಾರದ ಮೇಲೆ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ರ ಕಲಂ 74 ಮತ್ತು 75 ರ ಮೇರೆಗೆ ಹಾಗೂ ಸಹಕಾರ ಸಂಘಗಳ ನಿಬಂಧಕರು ಕರ್ನಾಟಕ ರಾಜ್ಯ ಬೆಂಗಳೂರು ರವರ ಸುತ್ತೋಲೆ ಸಂಖ್ಯೆ.227ರನ್ವಯ ಸದರಿ ಸಹಕಾರ ಸಂಘಗಳ ನೊಂದಣಿ ರದ್ದತಿಗೆ ಕ್ರಮವಹಿಸಲಾಗುವುದು ಎಂದು ಸಹಕಾರ ಸಂಘಗಳ ಉಪ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

