ಬೆಂಗಳೂರು: 177 ಬರಪೀಡಿತ ತಾಲ್ಲೂಕುಗಳಲ್ಲಿ ಸುಮಾರು 47.09 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದ್ದು, ಆರ್ಥಿಕ ನಷ್ಟ ₹46,324.5 ಕೋಟಿಗೆ ತಲುಪಿದೆ. ನಿರಂತರ ಮೌಲ್ಯಮಾಪನದ ಪ್ರಕಾರ 2026ರ ಖಾರಿಫ್ ಅವಧಿಯಲ್ಲಿ ಒಟ್ಟಾರೆ ಬೆಳೆಹಾನಿ 55 ಲಕ್ಷ ಹೆಕ್ಟೇರ್ ಗಿಂತ ಹೆಚ್ಚಾಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಭೀಕರವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪ್ರತ್ಯೇಕವಾಗಿ ಪತ್ರ ಬರೆದಿರುವ ಡಿಸಿಎಂ ಡಾ.ಜಿ. ಪರಮೇಶ್ವರ್ ಕರ್ನಾಟಕಕ್ಕೆ ತುರ್ತು ನೆರವು ಒದಗಿಸುವಂತೆ ಕೋರಿದ್ದಾರೆ.
ರಾಜ್ಯ ಸರ್ಕಾರವು ಈಗಾಗಲೇ 101 ಬರಪೀಡಿತ ತಾಲ್ಲೂಕುಗಳಿಗೆ ₹3,705.30 ಕೋಟಿ ಹಣಕಾಸು ನೆರವು ಕೋರಿ ಖಾರಿಫ್–2026 ಬರ ಪರಿಹಾರ ಮೆಮೊರಾಂಡಮ್ ಅನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಮುಂದಿನ ವೈಜ್ಞಾನಿಕ ಮೌಲ್ಯಮಾಪನದ ಬಳಿಕ ಹೆಚ್ಚುವರಿಯಾಗಿ 76 ತಾಲ್ಲೂಕುಗಳನ್ನು ಎರಡನೇ ಹಂತದಲ್ಲಿ ಬರಪೀಡಿತವೆಂದು ಘೋಷಿಸಲಾಗಿದ್ದು, ಇದರೊಂದಿಗೆ ರಾಜ್ಯದಲ್ಲಿ ಬರಪೀಡಿತ ತಾಲ್ಲೂಕುಗಳ ಸಂಖ್ಯೆ 177ಕ್ಕೆ ಏರಿಕೆಯಾಗಿದೆ. ಇನ್ನೂ 40 ತಾಲ್ಲೂಕುಗಳಲ್ಲಿ ಗ್ರೌಂಡ್ ಟ್ರೂಥಿಂಗ್ ನಡೆಯುತ್ತಿದೆ. ನಿರಂತರ ಮೌಲ್ಯಮಾಪನದ ಆಧಾರದ ಮೇಲೆ ಮುಂಗಾರು ಅಂತ್ಯದ ವೇಳೆಗೆ ಬರಪೀಡಿತ ತಾಲ್ಲೂಕುಗಳ ಸಂಖ್ಯೆ 220 ದಾಟುವ ಸಾಧ್ಯತೆ ಇದೆ.
ಹೊಸದಾಗಿ ಘೋಷಿಸಲಾದ 76 ಬರಪೀಡಿತ ತಾಲ್ಲೂಕುಗಳಲ್ಲಿ ನಡೆಸಿದ ಬೆಳೆಹಾನಿ ಮೌಲ್ಯಮಾಪನದಲ್ಲಿ 26.08 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಹಾಗೂ 1.49 ಲಕ್ಷ ಹೆಕ್ಟೇರ್ ತೋಟಗಾರಿಕಾ ಬೆಳೆ ಹಾನಿಯಾಗಿರುವುದು ಕಂಡುಬಂದಿದೆ. ಹಾನಿಯ ಪ್ರಮಾಣ ಶೇ.33ರಿಂದ ಶೇ.100ರವರೆಗೆ ಇದ್ದು, ಈ ಬರಪೀಡಿತ ಪ್ರದೇಶಗಳಲ್ಲಿ ಬಹುಪಾಲು ಶೇ.50ಕ್ಕಿಂತ ಹೆಚ್ಚು ಬೆಳೆಹಾನಿ ದಾಖಲಾಗಿದೆ.
ಒಟ್ಟಾರೆ 27.57 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ದಾಖಲಾಗಿದ್ದು, ಬೆಳೆ ಬೆಳೆಯುವ ವೆಚ್ಚದ ಆಧಾರದ ಮೇಲೆ ₹27,576.2 ಕೋಟಿ ನಷ್ಟ ಅಂದಾಜಿಸಲಾಗಿದೆ. ಪ್ರಸ್ತುತ SDRF ಮಾನದಂಡಗಳ ಪ್ರಕಾರ ಇನ್‌ಪುಟ್ ಸಬ್ಸಿಡಿಗೆ ₹2,981.34 ಕೋಟಿ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.
ಒಟ್ಟಾರೆ 177 ಬರಪೀಡಿತ ತಾಲ್ಲೂಕುಗಳಲ್ಲಿ ಸುಮಾರು 47.09 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದ್ದು, ಆರ್ಥಿಕ ನಷ್ಟ ₹46,324.5 ಕೋಟಿಗೆ ತಲುಪಿದೆ. ನಿರಂತರ ಮೌಲ್ಯಮಾಪನದ ಪ್ರಕಾರ 2026ರ ಖಾರಿಫ್ ಅವಧಿಯಲ್ಲಿ ಒಟ್ಟಾರೆ ಬೆಳೆಹಾನಿ 55 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚಾಗುವ ಸಾಧ್ಯತೆ ಇದೆ.
ಈ ಎರಡು ಹಂತಗಳ ಬರ ಘೋಷಣೆಯ ಮೂಲಕ ಎನ್‌ಡಿಆರ್‌ಎಫ್ ನಿಯಮಗಳಡಿ ₹7142.64 ಕೋಟಿಗಳನ್ನು ಕೊಡಬೇಕೆಂದು ಮನವಿ ಸಲ್ಲಿಸಲಾಗಿದೆ. ಇದರಲ್ಲಿ ₹4998.6 ಕೋಟಿಗಳು ಇನ್‌ಪುಟ್ ಸಬ್ಸಿಡಿಗಾಗಿ ಮತ್ತು ₹2144.04 ಕೋಟಿಗಳನ್ನು ಮೇವು ಮತ್ತು ಕುಡಿಯುವ ನೀರು ಮುಂತಾದವುಗಳಿಗಾಗಿ ಕೇಳಲಾಗಿದೆ.
ರೈತರಿಗೆ ನೀಡಲಾಗುವ ಪರಿಹಾರವು ಇಂದಿನ ಕೃಷಿ ವೆಚ್ಚ ಹಾಗೂ ಅವರು ಅನುಭವಿಸಿರುವ ನೈಜ ನಷ್ಟಕ್ಕೆ ಅನುಗುಣವಾಗಿರಬೇಕು. ಈ ಹಿನ್ನೆಲೆಯಲ್ಲಿ, ವಿಶೇಷವಾಗಿ ರೈತರಿಗೆ ನೀಡುವ ಇನ್‌ಪುಟ್ ಸಬ್ಸಿಡಿ ಸೇರಿದಂತೆ SDRF/NDRF ಪರಿಹಾರ ಮಾನದಂಡಗಳನ್ನು ಪರಿಷ್ಕರಿಸುವಂತೆ ಕೇಂದ್ರ ಗೃಹ ಸಚಿವರಿಗೆ ಮನವಿ ಮಾಡಿದ್ದೇನೆ ಎಂದು DCM ಪರಮೇಶ್ವರ್ ತಿಳಿಸಿದ್ದಾರೆ..
ಅದೇ ರೀತಿ, ಕೇಂದ್ರದ ಬರ ಮೌಲ್ಯಮಾಪನ ಪ್ರಕ್ರಿಯೆಯನ್ನು ತ್ವರಿತಗೊಳಿಸಿ, ಕರ್ನಾಟಕಕ್ಕೆ ಅಗತ್ಯ ನೆರವನ್ನು ಶೀಘ್ರ ಬಿಡುಗಡೆ ಮಾಡುವಂತೆ ಕೇಂದ್ರ ಕೃಷಿ ಸಚಿವರನ್ನು ಕೋರಿದ್ದೇನೆ.
ನಮ್ಮ ರೈತರಿಗೆ ಈ ಸಂಕಷ್ಟದ ಸಮಯದಲ್ಲಿ ಸಮಯೋಚಿತ ಹಾಗೂ ಸಮರ್ಪಕ ನೆರವು ಅಗತ್ಯವಾಗಿದೆ. ರೈತರ ಜೊತೆ ನಿಲ್ಲಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕಿದೆ ಎಂದು ಪತ್ರದಲ್ಲಿ ಪರಮೇಶ್ವರ್ ತಿಳಿಸಿದ್ದಾರೆ.

