HomeKarnatakaಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ ಎಂದು ಸುಳ್ಳು ಭರವಸೆ ನೀಡಿದ ವಾಟರ್ ಪ್ಯೂರಿಫೈಯರ್ ಕಂಪನಿಗೆ ದಂಡ

ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ ಎಂದು ಸುಳ್ಳು ಭರವಸೆ ನೀಡಿದ ವಾಟರ್ ಪ್ಯೂರಿಫೈಯರ್ ಕಂಪನಿಗೆ ದಂಡ

ಶಿವಮೊಗ್ಗ: ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ ಎಂದು ಸುಳ್ಳು ಭರವಸೆ ನೀಡಿ ವಾಟರ್ ಪ್ಯೂರಿಫೈಯರ್ ಮಾರಾಟ ಮಾಡಿ, ಹಣ ವಾಪಸ್ ನೀಡದೆ ಸೇವಾ ನ್ಯೂನ್ಯತೆ ಎಸಗಿದ್ದ ‘ಎನಾಜಿಕ್ ಇಂಟರ್‌ನ್ಯಾಷನಲ್’ ಕಂಪನಿ ಮತ್ತು ಅದರ ಡಿಸ್ಟ್ರಿಬ್ಯೂಟರ್‌ಗಳಿಗೆ ಗ್ರಾಹಕರಿಗೆ ಸೂಕ್ತ ಪರಿಹಾರ ನೀಡುವಂತೆ ಶಿವಮೊಗ್ಗದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಮಹತ್ವದ ಆದೇಶ ನೀಡಿದೆ.

ಪ್ರಕರಣದ ಹಿನ್ನೆಲೆ:

ಶಿವಮೊಗ್ಗದ ಸ್ವಾಮಿ ವಿವೇಕಾನಂದ ಬಡಾವಣೆಯ ನಿವಾಸಿ ಶಿವಕುಮಾರ ಹಂಪಳ್ಳಿ ಎಂಬುವರು ದಿನಾಂಕ 12/06/2024 ರಂದು ಎನಾಜಿಕ್ ಇಂಟರ್‌ನ್ಯಾಷನಲ್ ಕಂಪನಿಯ ಡಿಸ್ಟ್ರಿಬ್ಯೂಟರ್‌‌ಗಳಾದ ಬಸವಣ್ಣ (ಶಿವಮೊಗ್ಗ) ಹಾಗೂ ಕೆ. ಅರುಣ್ ಕುಮಾರ್ (ಮೈಸೂರು) ಅವರ ಮೂಲಕ ರೂ. 2,77,000/- ನೀಡಿ ವಾಟರ್ ಪ್ಯೂರಿಫೈಯರ್ ಖರೀದಿಸಿದ್ದರು. “ಈ ಯಂತ್ರದ ನೀರನ್ನು ಒಂದು ತಿಂಗಳು ಉಪಯೋಗಿಸಿದರೆ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ, ಇಲ್ಲದಿದ್ದರೆ ಯಂತ್ರವನ್ನು ವಾಪಸ್ ಪಡೆದು ಹಣ ಹಿಂದಿರುಗಿಸಲಾಗುವುದು” ಎಂದು ಭರವಸೆ ನೀಡಲಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ, ದೂರುದಾರರು ನೀರು ಬಳಸಿದ ನಂತರ ವೈದ್ಯಕೀಯ ತಪಾಸಣೆ ಮಾಡಿಸಿದಾಗ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗದೆ ಹೆಚ್ಚಾಗಿತ್ತು. ಈ ಬಗ್ಗೆ ಎದುರುದಾರರನ್ನು ಸಂಪರ್ಕಿಸಿದಾಗ, ಅವರು ಯಂತ್ರ ವಾಪಸ್ ಪಡೆದು ಪೂರ್ತಿ ಹಣ ನೀಡುವ ಬದಲು ಕೇವಲ ರೂ. 12,350/- ಮಾತ್ರ ಜಮಾ ಮಾಡಿದ್ದರು. ಉಳಿದ ಹಣಕ್ಕಾಗಿ ಹಲವು ಬಾರಿ ಮನವಿ ಮಾಡಿದರೂ ಹಾಗೂ ನೋಟೀಸ್ ನೀಡಿದರೂ ಸ್ಪಂದಿಸದ ಕಾರಣ, ದೂರುದಾರರು ಗ್ರಾಹಕ ಆಯೋಗದ ಮೆಟ್ಟಿಲೇರಿದ್ದರು.

ಆಯೋಗದ ತೀರ್ಪು:

ದೂರುದಾರರು ಮತ್ತು ಎದುರುದಾರರು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿದ ಜಿಲ್ಲಾ ಗ್ರಾಹಕ ಆಯೋಗವು, ಕಂಪನಿಯು ನೀಡಿರುವ ಭರವಸೆಯಂತೆ ನಡೆದುಕೊಳ್ಳದೆ ಸೇವಾ ನ್ಯೂನ್ಯತೆ ಎಸಗಿದೆ ಎಂದು ತೀರ್ಮಾನಿಸಿದೆ.

ಆಯೋಗದ ಅಧ್ಯಕ್ಷ ಟಿ.ಶಿವಣ್ಣ ಹಾಗೂ ಸದಸ್ಯ ಬಿ.ಡಿ.ಯೋಗಾನಂದ ಭಾಂಡ್ಯ ಅವರಿದ್ದ ಪೀಠವು ಈ ಕೆಳಗಿನಂತೆ ಆದೇಶಿಸಿದೆ:

ಎದುರುದಾರರು ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ದೂರುದಾರರಿಗೆ ರೂ. 2,64,650/- ಗಳನ್ನು ಆದೇಶವಾದ 45 ದಿನಗಳ ಒಳಗೆ ವಾಪಸ್ ನೀಡಬೇಕು. ತಪ್ಪಿದ್ದಲ್ಲಿ ಶೇ. 9 ರ ಬಡ್ಡಿಯೊಂದಿಗೆ ಪಾವತಿಸಬೇಕು.

ಮಾನಸಿಕ ವೇದನೆಗಾಗಿ ರೂ. 30,000/- ಹಾಗೂ ದೂರಿನ ಖರ್ಚುವೆಚ್ಚಕ್ಕಾಗಿ ರೂ. 10,000 ಗಳನ್ನು ಆದೇಶವಾದ 45 ದಿನಗಳ ಒಳಗೆ ಪಾವತಿಸತಕ್ಕದ್ದು. ತಪ್ಪಿದ್ದಲ್ಲಿ ಶೇ. 10 ರ ಬಡ್ಡಿಯನ್ನು ಸೇರಿಸಿ ಪೂರ್ಣ ಹಣ ಪಾವತಿಸುವವರೆಗೆ ನೀಡಬೇಕು ಎಂದು ಆದೇಶಿಸಿದೆ.

ಮುಜರಾಯಿ ದೇವಾಲಯಗಳ ವ್ಯವಸ್ಥಾಪನಾ ಸಮಿತಿ ರಚನೆಗೆ ಅರ್ಜಿ ಆಹ್ವಾನ

ಶಿವಮೊಗ್ಗ: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಕಾಯ್ದೆ ಅಧಿನಿಯಮ 1997 ರ ಕಲಂ 25 ರನ್ವಯ ಜಿಲ್ಲೆಯ “ಬಿ” ಮತ್ತು ‘ಸಿ’ ಪ್ರವರ್ಗ ಮುಜರಾಯಿ ದೇವಾಲಯಗಳ ವ್ಯವಸ್ಥಾಪನಾ ಸಮಿತಿಯನ್ನು ಮುಂದಿನ 3 ವರ್ಷಗಳ ಅವಧಿಗೆ ರಚಿಸಲು ಆಸಕ್ತ ಭಕ್ತಾಧಿಗಳು, ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.

 ಅರ್ಜಿ ಸಲ್ಲಿಸಲು ಅ.28 ರಂದು ಕೊನೆಯ ದಿನವಾಗಿದ್ದು, ಎಲ್ಲಾ ತಾಲ್ಲೂಕು ತಹಶೀಲ್ದಾರ್ ಕಚೇರಿಗಳಲ್ಲಿ ಅರ್ಜಿ ಲಭ್ಯವಿದ್ದು, ಭರ್ತಿ ಮಾಡಿದ ಅರ್ಜಿಗಳನ್ನು ನೇರವಾಗಿ ತಾಲ್ಲೂಕು ಕಚೇರಿಗೆ ಸಲ್ಲಿಸಬಹುದು.

 ಅರ್ಜಿದಾರನಿಗೆ ಕನಿಷ್ಠ 25 ವರ್ಷ ವಯಸ್ಸಾಗಿರಬೇಕು. ಯಾವುದೇ ಒಂದು ಅಧಿಸೂಚಿತ ಸಂಸ್ಥೆಯ/ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಮಾತ್ರ ಸದಸ್ಯತ್ವವನ್ನು ಕೋರಿ ಅರ್ಜಿಯನ್ನು ನಿಗದಿತ ನಮೂನೆ-1 (ಬಿ) (22 ನೇ ನಿಯಮ) ರಲ್ಲಿ ಭರ್ತಿ ಮಾಡಬೇಕು.

 ನಿಗದಿಪಡಿಸಿದ ದಿನಾಂಕದ ನಂತರ ಸ್ವೀಕೃತವಾಗುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular