ಬೆಂಗಳೂರು: ಹಾಫ್ ಹೆಲ್ಮೆಟ್, ಮಾರ್ಪಡಿಸಿದ ಸೈಲೆನ್ಸರ್, ಅನಧಿಕೃತ ಹಾರ್ನ್ ಗೆ ನಿರ್ಬಂಧ ಹೇರುವುದು, ಎಲೆಕ್ಟ್ರಿಕ್ ವಾಹನಗಳಿಗೂ ಹೊಸ ನಿಯಮ ರೂಪಿಸುವ ಬಗ್ಗೆ ಮಹತ್ವದ ಚರ್ಚೆ ನಡೆಸಲಾಗಿದೆ.
ಶಬ್ದ ಮಾಲಿನ್ಯ ಹಾಗೂ ರಸ್ತೆ ಸುರಕ್ಷತೆಗೆ ಕಾರಣವಾಗುವ ಅನಧಿಕೃತ ಹಾರ್ನ್ ಗಳು, ಮಾರ್ಪಡಿಸಿದ ಸೈಲೆನ್ಸರ್ ಗಳು ಹಾಗೂ ಅತಿಯಾದ ಬೆಳಕು ನೀಡುವ ಎಲ್ಇಡಿ ದೀಪಗಳ ಮಾರಾಟ ಮತ್ತು ಬಳಕೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣ, ರಸ್ತೆ ಸುರಕ್ಷತೆ ಹೆಚ್ಚಿಸುವುದು ಹಾಗೂ ಸಂಚಾರಿ ನಿಯಮಗಳ ಉಲ್ಲಂಘನೆಗೆ ಪರಿಣಾಮಕಾರಿ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿಕಾಸಸೌಧದಲ್ಲಿ ಗೃಹ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಜಂಟಿ ವಿಮರ್ಶಾ ಸಭೆ ನಡೆಸಲಾಯಿತು.
ಈ ಕೆಳಗಿನ ಯೋಜನೆಗಳು ಮತ್ತು ಕ್ರಮಗಳ ಕುರಿತು ಚರ್ಚಿಸಲಾಯಿತು:
ವಿವಿಧ ಸಂಚಾರಿ ಉಲ್ಲಂಘನೆಗಳಿಗೆ ಅಂಕಗಳನ್ನು ನಿಗದಿಪಡಿಸಿ, ನಿರ್ದಿಷ್ಟ ಮಿತಿಯನ್ನು ತಲುಪಿದಾಗ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸುವ ಅಂಕ ಆಧಾರಿತ ಚಾಲನಾ ಪರವಾನಗಿ ವ್ಯವಸ್ಥೆ ಜಾರಿಗೆ ತರುವ ಕುರಿತು ಚರ್ಚೆ.
ಚಾಲನಾ ಪರವಾನಗಿ ಅಮಾನತು ಹಾಗೂ ಸಂಚಾರಿ ಉಲ್ಲಂಘನೆಗಳ ಮಾಹಿತಿಯ ಸಮಗ್ರ ನಿರ್ವಹಣೆಗಾಗಿ ಸಾರಿಗೆ ಇಲಾಖೆಯ ಸಾರಥಿ ವ್ಯವಸ್ಥೆಯನ್ನು ಬೆಂಗಳೂರು ಸಂಚಾರ ಪೊಲೀಸರ ಇ-ಚಲನ್ ವ್ಯವಸ್ಥೆಯೊಂದಿಗೆ ನೇರವಾಗಿ ಸಂಯೋಜಿಸುವ ಕುರಿತು ಪರಾಮರ್ಶೆ.
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಹಾಗೂ ಸಾರ್ವಜನಿಕ ಸುರಕ್ಷತೆಗೆ ತೊಂದರೆ ಉಂಟುಮಾಡುವ ಸಂಚಾರಿ ಉಲ್ಲಂಘನೆಗಳಿಗೆ ವಿಧಿಸಲಾಗುತ್ತಿರುವ ದಂಡದ ಮೊತ್ತ ಹೆಚ್ಚಿಸುವುದನ್ನು ಪರಿಶೀಲನೆ.
ಐದು ಅಥವಾ ಅದಕ್ಕಿಂತ ಹೆಚ್ಚು ಸಂಚಾರಿ ಉಲ್ಲಂಘನೆಗಳನ್ನು ಮಾಡಿರುವವರನ್ನು ಗುರುತಿಸಿ, ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು, ಬಾಕಿ ಇರುವ ದಂಡ ವಸೂಲಿ ಮಾಡುವುದು ಹಾಗೂ ಅಗತ್ಯವಿರುವಲ್ಲಿ ವಾಹನಗಳನ್ನು ತಡೆಹಿಡಿಯುವುದು ಅಥವಾ ಕಪ್ಪುಪಟ್ಟಿಗೆ ಸೇರಿಸುವುದು.
ಪದೇಪದೇ ನಿಯಮ ಉಲ್ಲಂಘಿಸುವ ಚಾಲಕರಿಗೆ ಕಡ್ಡಾಯ ರಸ್ತೆ ಸುರಕ್ಷತಾ ತರಬೇತಿ ಮತ್ತು ಅರಿವು ಕಾರ್ಯಕ್ರಮ ರೂಪಿಸುವುದು.
ಅರೆ ಹೆಲ್ಮೆಟ್ಗಳ ಉತ್ಪಾದನೆ ಹಾಗೂ ಮಾರಾಟದ ಮೇಲೆಯೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು. ರಸ್ತೆ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿರದ ಅರೆ ಹೆಲ್ಮೆಟ್ಗಳ ಉತ್ಪಾದನೆಯನ್ನು ನಿಷೇಧಿಸುವುದು. ಇಂತಹ ಹೆಲ್ಮೆಟ್ಗಳನ್ನು ತಯಾರಿಸುವ ಉತ್ಪಾದಕರು ಹಾಗೂ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳುವುದು.
ಶಬ್ದ ಮಾಲಿನ್ಯ ಹಾಗೂ ರಸ್ತೆ ಸುರಕ್ಷತೆಗೆ ಕಾರಣವಾಗುವ ಅನಧಿಕೃತ ಹಾರ್ನ್ಗಳು, ಮಾರ್ಪಡಿಸಿದ ಸೈಲೆನ್ಸರ್ಗಳು ಹಾಗೂ ಅತಿಯಾದ ಬೆಳಕು ನೀಡುವ ಎಲ್ಇಡಿ ದೀಪಗಳ ಮಾರಾಟ ಮತ್ತು ಬಳಕೆಯ ವಿರುದ್ಧ ಕ್ರಮ.
ಕಡಿಮೆ ವೇಗದ ಬ್ಯಾಟರಿ ಚಾಲಿತ ವಿದ್ಯುತ್ ದ್ವಿಚಕ್ರ ವಾಹನಗಳಿಗೂ ಅಗತ್ಯ ಸಂಚಾರಿ ನಿಯಮಗಳನ್ನು ಅನ್ವಯಿಸುವುದು, ವಾಹನಗಳ ಗುರುತಿಸುವಿಕೆ ಹಾಗೂ ಚಾಲಕರ ಹೊಣೆಗಾರಿಕೆಯನ್ನು ಖಚಿತಪಡಿಸುವುದು ಸೇರಿದಂತೆ ಸೂಕ್ತ ನಿಯಂತ್ರಣ ಕ್ರಮಗಳನ್ನು ಜಾರಿಗೆ ತರುವುದು.
ವಿವಿಧ ಸಾರಿಗೆ ಸಂಸ್ಥೆಗಳು ಹಾಗೂ ಸಂಚಾರ ಸೇವಾ ಸಂಸ್ಥೆಗಳು ವಿಧಿಸುವ ದರಗಳಲ್ಲಿ “ಒಂದು ನಗರ–ಒಂದು ದರ” ನೀತಿ ಜಾರಿಗೆ ತರುವುದು. ದರ ಏರಿಳಿತವನ್ನು ನಿಯಂತ್ರಿಸುವುದು, ವಿವಿಧ ಸೇವಾ ಸಂಸ್ಥೆಗಳ ನಡುವೆ ನ್ಯಾಯಯುತ ಸ್ಪರ್ಧೆಗೆ ಅವಕಾಶ ಕಲ್ಪಿಸುವುದು ಹಾಗೂ ಅನಗತ್ಯ ವಾಹನ ಸಂಚಾರವನ್ನು ಕಡಿಮೆ ಮಾಡುವುದು.
ಸಂಚಾರ ದಟ್ಟಣೆ ಕಡಿಮೆ ಮಾಡಲು ಕಾರ್ ಹಂಚಿಕೆ ಮತ್ತು ಪ್ರಯಾಣ ಹಂಚಿಕೆ ವ್ಯವಸ್ಥೆಗೆ ರಾಜ್ಯ ಮಟ್ಟದಲ್ಲಿ ಸೂಕ್ತ ನೀತಿ ರೂಪಿಸುವುದು. ಅಪ್ಲಿಕೇಶನ್ ಆಧಾರಿತ ಕಾರ್ ಹಂಚಿಕೆ ಸೇವೆಗಳಿಗೆ ಅಗತ್ಯ ನೀತಿ ರೂಪಿಸುವುದು, ಪಾರ್ಕ್–ಆಂಡ್–ರೈಡ್ ಕೇಂದ್ರಗಳನ್ನು ಅಭಿವೃದ್ಧಿಪಡಿಸುವುದು.
ಎಲ್ಲ ಅರ್ಹ ವಾಹನಗಳಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಕಡ್ಡಾಯಗೊಳಿಸುವುದು ಹಾಗೂ ಪ್ರಮಾಣಪತ್ರ ಪಡೆಯದ ವಾಹನಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು. ಬಾಕಿ ಇರುವ ಸಂಚಾರಿ ದಂಡ ಪಾವತಿಸದಿದ್ದಲ್ಲಿ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ನೀಡದಿರುವುದು ಹಾಗೂ ಸಾರಿಗೆ ಮತ್ತು ಸಂಚಾರಿ ಪೊಲೀಸ್ ಇಲಾಖೆಗಳ ಜಂಟಿ ಕಾರ್ಯಾಚರಣೆ ಕೈಗೊಳ್ಳುವುದು.
ಹಳೆಯ, ಹೆಚ್ಚಿನ ಮಾಲಿನ್ಯ ಉಂಟುಮಾಡುವ ಹಾಗೂ ಯಾಂತ್ರಿಕವಾಗಿ ಅನರ್ಹವಾಗಿರುವ ವಾಹನಗಳನ್ನು ಹಂತ ಹಂತವಾಗಿ ರಸ್ತೆಗಳಿಂದ ತೆರವುಗೊಳಿಸಲು ವಾಹನ ಸ್ಕ್ರಾಪ್ ನೀತಿ, ತೆರಿಗೆ ರಿಯಾಯಿತಿ ಸೇರಿದಂತೆ ಲಭ್ಯವಿರುವ ಪ್ರೋತ್ಸಾಹಕ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದು.
ಮೆಟ್ರೊ ಸೇವೆ ಬಳಸುವ ಪ್ರಯಾಣಿಕರಿಗೆ ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕವನ್ನು ಸುಲಭಗೊಳಿಸುವ ಉದ್ದೇಶದಿಂದ ಹಂಚಿಕೆ ಆಟೋ ಸೇವೆಗಳಿಗೆ ಸೂಕ್ತ ಮಾರ್ಗ, ನಿಗದಿತ ದರ ಹಾಗೂ ಪರವಾನಗಿ ವ್ಯವಸ್ಥೆ ರೂಪಿಸುವುದು.
ನಗರದ ಪ್ರಮುಖ ರಸ್ತೆಗಳ ಮೇಲೆ ಬಿಎಂಟಿಸಿ ವಿದ್ಯುತ್ ಬಸ್ಗಳು ಕೆಟ್ಟು ನಿಂತು ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಹಿನ್ನೆಲೆಯಲ್ಲಿ, ಅಂತಹ ವಾಹನಗಳನ್ನು ತ್ವರಿತವಾಗಿ ತೆರವುಗೊಳಿಸಲು ವಿಶೇಷ ತಾಂತ್ರಿಕ ತಂಡ ಹಾಗೂ ತುರ್ತು ಸ್ಪಂದನಾ ವ್ಯವಸ್ಥೆ ರೂಪಿಸುವುದು.
ಹೊರ ವರ್ತುಲ ರಸ್ತೆಯ ತಂತ್ರಜ್ಞಾನ ವಲಯಗಳಲ್ಲಿ ಸಂಚಾರ ನಿರ್ವಹಣೆ ಸುಧಾರಿಸುವ ನಿಟ್ಟಿನಲ್ಲಿ ಬಿಎಂಟಿಸಿ ಸೇವೆ ವಿಸ್ತರಣೆ, ಮೆಟ್ರೊ ನಿಲ್ದಾಣಗಳಿಂದ ತಂತ್ರಜ್ಞಾನ ಉದ್ಯಾನಗಳಿಗೆ ಪೂರಕ ಬಸ್ ಸೇವೆ, ಗರಿಷ್ಠ ಸಂಚಾರದ ಅವಧಿಯಲ್ಲಿ ಬಸ್ಗಳ ಸಂಖ್ಯೆಯನ್ನು ಹೆಚ್ಚಿಸುವುದು ಹಾಗೂ ಸಂಸ್ಥೆಗಳ ಹಂಚಿಕೆ ಸಾರಿಗೆ ವ್ಯವಸ್ಥೆಗೆ ಉತ್ತೇಜನ ನೀಡುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಗೃಹ ಮತ್ತು ಸಾರಿಗೆ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವ ಮೂಲಕ ಸಂಚಾರಿ ನಿಯಮಗಳ ಪರಿಣಾಮಕಾರಿ ಅನುಷ್ಠಾನ, ರಸ್ತೆ ಸುರಕ್ಷತೆ ಬಲಪಡಿಸುವುದು ಹಾಗೂ ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಯಿತು.
ಸಭೆಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಸಾರಿಗೆ ಸಚಿವ ಬೈರತಿ ಸುರೇಶ್ ಉಪಸ್ಥಿತರಿದ್ದರು.

