HomeKarnatakaಬರ ಪರಿಹಾರದಲ್ಲಿ ಸರ್ಕಾರದ ಲೋಪ ; ಜನತಾ ನ್ಯಾಯಾಲಯಕ್ಕೆ ಹೋಗುತ್ತೇವೆ ಎಂದ ಆರ್. ಅಶೋಕ್

ಬರ ಪರಿಹಾರದಲ್ಲಿ ಸರ್ಕಾರದ ಲೋಪ ; ಜನತಾ ನ್ಯಾಯಾಲಯಕ್ಕೆ ಹೋಗುತ್ತೇವೆ ಎಂದ ಆರ್. ಅಶೋಕ್

ಬೆಂಗಳೂರು : ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರವಾಗಿದ್ದರೂ ರೈತರ ನೆರವಿಗೆ ರಾಜ್ಯ ಸರ್ಕಾರ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಸರ್ಕಾರದ ಖಜಾನೆ ಖಾಲಿಯಾಗಿದ್ದು, ರಾಜ್ಯವನ್ನು ಸಾಲದ ಸುಳಿಗೆ ದೂಡಲಾಗಿದೆ.ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.

ಬರ ಪರಿಹಾರದಲ್ಲಿ ಸರ್ಕಾರದ ಲೋಪ

ವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರದಿಂದ ರೈತರು ತತ್ತರಿಸುತ್ತಿದ್ದಾರೆ. ಕೆರೆಗಳು, ಕಾಲುವೆಗಳು ಹಾಗೂ ಬೋರ್‌ವೆಲ್‌ಗಳು ಬತ್ತಿದ್ದು, ವಿದ್ಯುತ್ ಕೊರತೆಯಿಂದ ನೀರಾವರಿಗೂ ಸಮಸ್ಯೆಯಾಗಿದೆ ಎಂದು ಹೇಳಿದರು.

ರೈತರಿಗೆ ನೀಡಲಾಗುತ್ತಿರುವ ₹2,500 ಬರ ಪರಿಹಾರದ ಮೊತ್ತದ ಬಗ್ಗೆ ವ್ಯಂಗ್ಯವಾಡಿದ ಅಶೋಕ್, “ಈ ಹಣ ಎತ್ತುಗಳಿಗೆ ಲಾಳ ಹಾಕಲು, ಮೂಗುದಾರ ಹಾಕಲು ಕೂಡ ಸಾಕಾಗುವುದಿಲ್ಲ” . ತಮ್ಮ ಪಕ್ಷದ ಬೇಡಿಕೆಯಂತೆ ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯದಲ್ಲಿ ಮಳೆ ಕೊರತೆ ಮುಂದುವರಿದಿದ್ದು, ರೈತರ ಸಂಕಷ್ಟ ಹೆಚ್ಚಾಗಿದೆ. ಈಗಾಗಲೇ ಸಾವಿರಾರು ರೈತರ ಆತ್ಮಹತ್ಯೆ ನಡೆದಿದೆ ಎಂದು ಆರೋಪಿಸಿದ ಅವರು, ಮೈಕ್ರೋಫೈನಾನ್ಸ್ ಸಂಸ್ಥೆಗಳು ಮತ್ತು ಬ್ಯಾಂಕ್‌ಗಳ ಸಾಲದ ಒತ್ತಡದ ಮೇಲೂ ಸರ್ಕಾರ ನಿಗಾ ವಹಿಸಬೇಕು ಎಂದು ವಿಧಾನಸಭೆಯಲ್ಲೇ ಎಚ್ಚರಿಸಿದ್ದಾಗಿ ಹೇಳಿದರು.

ಬರ ಪರಿಹಾರ ವಿಚಾರದಲ್ಲಿ ರಾಜ್ಯ ಸರ್ಕಾರ ಪ್ರತಿಪಕ್ಷಗಳೊಂದಿಗೆ ಸಮಾಲೋಚನೆ ನಡೆಸದೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದೆ ಎಂದು ಅಶೋಕ್ ಆಕ್ಷೇಪಿಸಿದರು. ಕಸ್ತೂರಿರಂಗನ್ ವರದಿ ವಿಚಾರದಲ್ಲಿ ಸರ್ವಪಕ್ಷ ಸಭೆ ನಡೆಸಿ ಚರ್ಚಿಸಿದ್ದ ಸರ್ಕಾರ, ಬರದ ವಿಚಾರದಲ್ಲಿ ಮಾತ್ರ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.

ಸರ್ವಪಕ್ಷ ನಿಯೋಗದ ವಿಚಾರ

ಬರ ಪರಿಸ್ಥಿತಿ ಕುರಿತು ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲು ಸರ್ವಪಕ್ಷ ನಿಯೋಗ ಕರೆದೊಯ್ಯುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಮತ್ತು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಪತ್ರ ಬರೆದಿರುವುದನ್ನೂ ಅಶೋಕ್ ಉಲ್ಲೇಖಿಸಿದರು. “ಕಸ್ತೂರಿರಂಗನ್ ವಿಚಾರದಲ್ಲಿ ನಮ್ಮನ್ನು ಕೇಳಿದಿರಿ. ಆದರೆ ಬರದ ವಿಚಾರದಲ್ಲಿ ನಮ್ಮನ್ನು ಕೇಳದೆ ಕೇಂದ್ರದ ಬಳಿ ಹೋಗಲು ಮುಂದಾಗಿದ್ದೀರಿ” ಎಂದು ಪ್ರಶ್ನಿಸಿದರು.

“ನಾವು ರಾಜಕಾರಣ ಮಾಡಬಾರದು, ನೀವು ಮಾತ್ರ ರಾಜಕಾರಣ ಮಾಡಬೇಕೆ? ಸರ್ಕಾರ ರಾಜಕಾರಣ ಮಾಡಿದರೆ ನಾವು ಕೂಡ ರಾಜಕಾರಣ ಮಾಡುತ್ತೇವೆ.

ಸರ್ಕಾರದ ಬರ ನಿರ್ವಹಣೆಯಲ್ಲಿನ ಲೋಪಗಳನ್ನು ಜನತಾ ನ್ಯಾಯಾಲಯದ ಮುಂದೆ ತೆಗೆದುಕೊಂಡು ಹೋಗುವುದಾಗಿ ಘೋಷಿಸಿದರು.

ಕೇಂದ್ರ ಸರ್ಕಾರದ ಬಳಿ ಸರ್ವಪಕ್ಷ ನಿಯೋಗದೊಂದಿಗೆ ಹೋಗುವ ವಿಚಾರದಲ್ಲಿ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಹಾಗೂ ಪ್ರಹ್ಲಾದ್ ಜೋಶಿ ಅವರೊಂದಿಗೆ ಚರ್ಚಿಸಿ, ಎನ್‌ಡಿಎ ಸಭೆಯಲ್ಲಿ ಈ ಬಗ್ಗೆ ಅಧಿಕೃತವಾಗಿ ತೀರ್ಮಾನಿಸಲಾಗುವುದು ಎಂದರು. ತಮ್ಮ ವೈಯಕ್ತಿಕ ನಿಲುವು ಸದ್ಯಕ್ಕೆ ನಿಯೋಗದೊಂದಿಗೆ ತೆರಳುವುದಕ್ಕೆ ವಿರೋಧವಾಗಿದೆ ಎಂದು ತಿಳಿಸಿದರು.

ರಾಜ್ಯದ ಹಣಕಾಸಿನ ಸ್ಥಿತಿ

ರಾಜ್ಯದ ಹಣಕಾಸಿನ ಪರಿಸ್ಥಿತಿಯ ಬಗ್ಗೆಯೂ ಸರ್ಕಾರ ಶ್ವೇತಪತ್ರ ಹೊರಡಿಸಬೇಕು.ಮುಖ್ಯಮಂತ್ರಿ ಅಧಿಕಾರಕ್ಕೆ ಬಂದ ಬಳಿಕದ ಹಣಕಾಸಿನ ಸ್ಥಿತಿ, ಮಾಡಿರುವ ಸಾಲ ಹಾಗೂ ಮುಂದಿನ ಸಾಲದ ಯೋಜನೆಗಳ ಬಗ್ಗೆ ಜನರಿಗೆ ಸರ್ಕಾರ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.

ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಯಾಗದೆ ಇರುವುದನ್ನೂ ಪ್ರಸ್ತಾಪಿಸಿದ ಅವರು, ವಿವಿಧ ಕಾಮಗಾರಿಗಳಿಗೆ ಬಾಕಿ ಇರುವ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ರೈತರಿಗೆ ರಾಗಿ ಖರೀದಿ ಬಾಕಿ ಸೇರಿದಂತೆ ವಿವಿಧ ಬಾಕಿ ಮೊತ್ತಗಳನ್ನು ಪಾವತಿಸದೆ ಸರ್ಕಾರ ಹಣಕಾಸಿನ ಸಂಕಷ್ಟದಲ್ಲಿದೆ ಎಂದು ಆರೋಪಿಸಿದರು.

“ರೈತರಿಗೆ ₹25 ಸಾವಿರ ಪರಿಹಾರ ನೀಡಬೇಕು, ಕುಡಿಯುವ ನೀರಿನ ಕಾಮಗಾರಿಗಳಿಗೆ ಅಗತ್ಯ ಹಣ ಬಿಡುಗಡೆ ಮಾಡಬೇಕು. ಕೇಂದ್ರದ ಕಡೆ ಮಾತ್ರ ನೋಡದೆ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯನ್ನು ನಿರ್ವಹಿಸಬೇಕು” ಎಂದು ಅಶೋಕ್ ಒತ್ತಾಯಿಸಿದರು.

ಕೇಂದ್ರಕ್ಕೆ ಸರ್ವಪಕ್ಷ ನಿಯೋಗದ ಪ್ರಯತ್ನ

ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ಯಲುಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮಗೆ ಹಾಗೂ ಛಲವಾದಿ ನಾರಾಯಣಸ್ವಾಮಿ ಅವರಿಗೆ ಬರೆದಿರುವ ಪತ್ರವನ್ನು ಪ್ರಸ್ತಾಪಿಸಿದ ಅಶೋಕ್, ಬರದ ವಿಚಾರದಲ್ಲಿ ನಮ್ಮನ್ನು ಸಂಪರ್ಕಿಸದೆ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ ಕೇಂದ್ರಕ್ಕೆ ಹೋಗುವ ನಿಯೋಗದಲ್ಲಿ ಭಾಗವಹಿಸುವುದಿಲ್ಲ. ಈ ಕುರಿತು ಹೆಚ್.ಡಿ. ಕುಮಾರಸ್ವಾಮಿ ಹಾಗೂ ಪ್ರಲ್ಹಾದ್ ಜೋಶಿ ಅವರೊಂದಿಗೆ ಚರ್ಚಿಸಿ ಎನ್‌ಡಿಎ ಕೂಟದಿಂದ ಅಧಿಕೃತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಸರ್ವಪಕ್ಷಗಳನ್ನು ವಿಶ್ವಾಸಕ್ಕೆ ಪಡೆದ ಸರ್ಕಾರ, ಬರದ ವಿಚಾರದಲ್ಲಿ ರಾಜಕಾರಣ ಮಾಡುತ್ತಿದೆ. ಸರ್ಕಾರದ ಈ ಮೋಸದ ವಿರುದ್ಧ ನಾವು ‘ಜನತಾ ನ್ಯಾಯಾಲಯ’ಕ್ಕೆ ಹೋಗಿ ಹೋರಾಟ ನಡೆಸುತ್ತೇವೆ ಎಂದರು.

ಗ್ಯಾರಂಟಿ ಅನುಷ್ಠಾನ ಸಮಿತಿಗಳಿಗೆ ಹಾಗೂ ಕಾಂಗ್ರೆಸ್ ಸಂಸ್ಥೆಗಳಿಗೆ ಕೋಟಿ ಕೋಟಿ ಅನುದಾನ ನೀಡಲಾಗುತ್ತಿದೆ. ಆದರೆ ರೈತರು ಹಾಗೂ ಗುತ್ತಿಗೆದಾರರ ₹38,000 ಕೋಟಿ ಬಾಕಿ ಹಣ ಬಿಡುಗಡೆ ಮಾಡಲು ಹಣವಿಲ್ಲ. ಕೃಷಿ ಮತ್ತು ಹಣಕಾಸು ಇಲಾಖೆಗಳು ಖಜಾನೆ ಖಾಲಿಯಾಗಿದೆ ಎಂದು ಪತ್ರ ಬರೆಯುತ್ತಿವೆ ಎಂದು ಆರೋಪಿಸಿದರು.

ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಲೂಟಿ ಮಾಡಿ ಸಾಲದ ಸುಳಿಗೆ ಸಿಲುಕಿಸಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಜೋಡಿ ಸರ್ಕಾರದಿಂದಾಗಿ ರಾಜ್ಯದ ಸಾಲದ ಪ್ರಮಾಣ ಶೇ. 52ಕ್ಕೆ ಏರಿಕೆಯಾಗಿದೆ. ಕಾಂಗ್ರೆಸ್ ಮುಖ್ಯಮಂತ್ರಿಗಳ ಅವಧಿಯಲ್ಲೇ ₹5.66 ಲಕ್ಷ ಕೋಟಿಗೂ ಅಧಿಕ ಸಾಲ ಮಾಡಲಾಗಿದೆ ಎಂದು ಅಂಕಿ-ಅಂಶಗಳ ಸಮೇತ ವಾಗ್ದಾಳಿ ನಡೆಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular