HomeKarnatakaನನ್ನ ಆಸ್ತಿ ಬಗ್ಗೆ ಕೇಳಲು ಕುಮಾರಸ್ವಾಮಿ ಐಟಿ ಅಧಿಕಾರಿಯೇ? ಅವರು ಮಾತ್ರ ಆಸ್ತಿ ಖರೀದಿಸಬಹುದಾ: ಡಿ.ಕೆ....

ನನ್ನ ಆಸ್ತಿ ಬಗ್ಗೆ ಕೇಳಲು ಕುಮಾರಸ್ವಾಮಿ ಐಟಿ ಅಧಿಕಾರಿಯೇ? ಅವರು ಮಾತ್ರ ಆಸ್ತಿ ಖರೀದಿಸಬಹುದಾ: ಡಿ.ಕೆ. ಶಿವಕುಮಾರ್ ಗುಡುಗು

ನವದೆಹಲಿ: ಹೆಚ್.ಡಿ. ಕುಮಾರಸ್ವಾಮಿ ಹತಾಶರಾಗಿದ್ದಾರೆ. ನನ್ನ ಆಸ್ತಿ ವಿಚಾರವಾಗಿ ಮಾತನಾಡಿದ್ದಾರೆ. ರೈತನ ಮಗ, ಉದ್ಯಮಿಯಾದ ನನಗೆ ಆಸ್ತಿ ಇರಬಾರದೇ? ನನ್ನ ಮಕ್ಕಳು ಆಸ್ತಿ ಕೊಂಡುಕೊಳ್ಳಬಾರದೇ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನಿನಲ್ಲಿ ಇರುವ ಅವಕಾಶದಲ್ಲೇ ನಾನು ಆಸ್ತಿ ಮಾಡಿದ್ದೇ‌ನೆ, ತಪ್ಪೇನಿದೆ? ಕುಮಾರಸ್ವಾಮಿ ಅವರು ಏನಾದರೂ ಆದಾಯ ತೆರಿಗೆ ಅಧಿಕಾರಿಯೇ? ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಿ. ಇವರುಗಳು ಮಾತ್ರ ಯಾವುದೋ ಊರಿನಿಂದ ಬಂದು ಇಲ್ಲೆಲ್ಲಾ ಆಸ್ತಿಗಳನ್ನು ತೆಗೆದುಕೊಳ್ಳಬಹುದಾ? ಬಿಎಂಐಸಿಎಪಿಎ, ನೈಸ್ ರಸ್ತೆ ಯೋಜನೆಯೊಳಗೆ ಇವರ ಆಸ್ತಿ ಇಲ್ಲವೇ? ಆಸ್ತಿಗಳನ್ನು ಯಾರ್ಯಾರು ತೆಗೆದುಕೊಂಡಿದ್ದಾರೆ? ಯಾಕೆ ಇವರ ಆಸ್ತಿಗಳೆಲ್ಲಾ ವ್ಯಾಪ್ತಿಯಲ್ಲಿ, ಬಿಡದಿ ಟೌನ್‌ಶಿಪ್ ಯೋಜನೆಯೊಳಗೆ ಹೇಗೆ ಆಸ್ತಿ ಬಂದಿತು ಎಂದು ಪ್ರಶ್ನಿಸಿದ್ದಾರೆ.

ಕುಮಾರಸ್ವಾಮಿ ಹತಾಶರಾಗಿದ್ದಾರೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾನು ಕಾನೂನು ಚೌಕಟ್ಟಿನಲ್ಲಿ ಆಸ್ತಿ ಸಂಪಾದಿಸಿದ್ದೇನೆ. ಕುಮಾರಸ್ವಾಮಿ ಅವರು ಹತಾಶರಾಗಿ ಈ ರೀತಿ ಮಾತನಾಡುತ್ತಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಬಿರುಕು, ತಾ ಮುಂದು ನಾ ಮುಂದು ಎಂಬ ಪೈಪೋಟಿಯಿಂದ ಕುಮಾರಸ್ವಾಮಿ ಅವರು ಹತಾಶರಾಗಿದ್ದಾರೆ. ಅವರಿಗೆ ಇದನ್ನು ತಡೆದುಕೊಳ್ಳಲು ಆಗುತ್ತಿಲ್ಲ. ಅವರು ಇಷ್ಟು ದಿನ ಏಕೆ ಸುಮ್ಮನಿದ್ದರು? ಅವರ ತಂದೆ ದೇವೇಗೌಡರೇ ಆ ಯೋಜನೆಗೆ ಸಹಿ ಹಾಕಿದ್ದರು. ಜೊತೆಗೆ ಇವರೂ ಸಹ ಮುಖ್ಯಮಂತ್ರಿಯಾಗಿದ್ದರು. ಅಲ್ಲದೇ ಗಾಂಧಿ ಎನ್ನುವವರೊಬ್ಬರಿಗೆ ಇವರೇ ಪ್ರಯತ್ನಿಸಿ ಟೆಂಡರ್ ಕೊಡಿಸಿದರು. ಈ ವಿಚಾರವಾಗಿ ನ್ಯಾಯಾಲಯವು ಛೀಮಾರಿ ಹಾಕಿತ್ತು. ಬೇನಾಮಿ ಹೆಸರಿನಲ್ಲಿ ಅಲ್ಲಲ್ಲಿ ಸಾಕಷ್ಟು ವ್ಯವಹಾರಗಳು ನಡೆದವು. ಅವರಂತೆ ನಾನು ಹೆಸರುಗಳನ್ನು ತೆಗೆದುಕೊಳ್ಳಲು ಹೋಗುವುದಿಲ್ಲ ಎಂದು ಹೇಳಿದ್ದಾರೆ.

ನನ್ನ ಆಸ್ತಿ ವಿಚಾರವಾಗಿ ಮಾತನಾಡಿದ್ದಾರೆ. ರೈತನ ಮಗ, ಉದ್ಯಮಿಯಾದ ನನಗೆ ಆಸ್ತಿ ಇರಬಾರದೇ? ನನ್ನ ಮಕ್ಕಳು ಆಸ್ತಿ ಕೊಂಡುಕೊಳ್ಳಬಾರದೇ? ಕಾನೂನಿನಲ್ಲಿ ಇರುವ ಅವಕಾಶದಲ್ಲೇ ನಾನು ಆಸ್ತಿ ಮಾಡಿದ್ದೇ‌ನೆ, ತಪ್ಪೇನಿದೆ? ಬಿಎಂಐಸಿಎಪಿಎ, ನೈಸ್ ರಸ್ತೆ ಯೋಜನೆಯೊಳಗೆ ಇವರ ಆಸ್ತಿ ಇಲ್ಲವೇ ಎಂದಿದ್ದಾರೆ.

ಕುಮಾರಸ್ವಾಮಿ ಅವರು ಏನಾದರೂ ಮಾಡಿಕೊಳ್ಳಲಿ, ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನಗೆ ಆಸ್ತಿ ಇದೆ, ನನ್ನ ಮಕ್ಕಳಿಗೆ ಇನ್ನೂ ತೆಗೆದುಕೊಳ್ಳುವ ಶಕ್ತಿ ಇದ್ದರೆ ತೆಗೆದುಕೊಳ್ಳುತ್ತಾರೆ. ಕಾನೂನಿನಲ್ಲಿ ಅವಕಾಶ ಇದೆ, ಖರೀದಿ ಮಾಡುವ ಸಾಮರ್ಥ್ಯವಿದೆ, ಬದುಕುತ್ತಾರೆ ಎಂದರು.

ಕದ್ದು ಏನನ್ನೂ ಮಾಡಿಕೊಂಡಿಲ್ಲ

ನನಗೆ ಉದ್ದಿಮೆ ಮಾಡಲು ಎಲ್ಲಾ ರೀತಿಯ ಹಕ್ಕು, ಅವಕಾಶವಿದೆ. ನನ್ನ ಮಕ್ಕಳಿಗೂ ಸಾಮರ್ಥ್ಯವಿದೆ. ಇನ್ನೂ ಖರೀದಿ ಮಾಡುವ ಸಾಮರ್ಥ್ಯವಿದೆ. ನಾನು ಕದ್ದುಮುಚ್ಚಿ ಮಾಡುವ ಅವಶ್ಯಕತೆಯಿಲ್ಲ. ನನ್ನ ಆಸ್ತಿಯನ್ನು ಈಗಾಗಲೇ ಘೋಷಣೆ ಮಾಡಿಕೊಂಡಿದ್ದೇನೆ. ಕುಮಾರಸ್ವಾಮಿ ಅವರದ್ದು ಏನೇನಿದೆ ಎಂದು ನಾನು ಈಗ ಮಾತನಾಡಲು ಹೋಗುವುದಿಲ್ಲ. ನನಗೆ ಈ ವಿಚಾರಗಳನ್ನು ಯಾರೋ ಹೇಳಿದರು. ಕುಮಾರಸ್ವಾಮಿ ಅವರು ಎಲ್ಲಾ ಎತ್ತಿಕೊಂಡು ಹೋಗಿ ಸಂಸ್ಥೆಗಳಿಗೆಲ್ಲಾ ಈಗಾಗಲೇ ಕೊಟ್ಟಿದ್ದಾರಲ್ಲವೇ? ಇನ್ನೆಷ್ಟು ಬಾರಿ ಕೊಡುತ್ತಾರೆ? ಅವರಿಗೆ ಲಾರಿ ಬೇಕಾದರೆ ಕಳುಹಿಸಿಕೊಡೋಣ ಎಂದರು.

ಗೊಡ್ಡು ಬೆದರಿಕೆಗೆಲ್ಲಾ ಡಿ.ಕೆ. ಶಿವಕುಮಾರ್ ಹೆದರುವುದಿಲ್ಲ

2007 ರಲ್ಲಿ ಅವರಿಗೆ ಅಧಿಕಾರವಿತ್ತಲ್ಲವೇ, ಇವರೇ ಹರಾಜಿನಲ್ಲಿ ನಿಖಿಲ್ ಗಾಂಧಿಗೆ ಕೊಟ್ಟಿದ್ದರಲ್ಲವೇ, ಯಾಕೆ ಮಾಡಲು ಆಗಿಲ್ಲ? ಅಧಿಕಾರದಲ್ಲಿದ್ದಾಗ ಟೋಲ್ ರದ್ದು ಮಾಡದವರು ಈಗ ದೇಶಾದ್ಯಂತ ಟೋಲ್ ಬಂದ್ ಮಾಡಿಸಲು ಪ್ರಧಾನಿ ಮೋದಿಯವರಿಗೆ ಹೇಳಲಿ. ಈ ಗೊಡ್ಡು ಬೆದರಿಕೆಗೆಲ್ಲಾ ಡಿ.ಕೆ. ಶಿವಕುಮಾರ್ ಹೆದರುವುದಿಲ್ಲ. ಈ ನಾಟಕ, ಡ್ರಾಮಾ, ಫಿಲಾಸಫಿ, ಬ್ಲ್ಯಾಕ್‌ಮೇಲ್ ಎಲ್ಲಾ ಬೇಕಾದಷ್ಟು ನೋಡಿದ್ದೇನೆ. ಇವುಗಳಿಗೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ಮಾಡುವ ಕೆಲಸ ಮಾಡೋಣ. ನಮ್ಮ ಸರ್ಕಾರದ ಜನಪ್ರಿಯತೆಯನ್ನು ಅವರಿಗೆ ತಡೆದುಕೊಳ್ಳಲಾಗುತ್ತಿಲ್ಲ. ಅಸೂಯೆಗೆ ಮದ್ದಿಲ್ಲ ಎಂದು ಹಿಂದೆಯೂ ಹೇಳಿದ್ದೇನೆ, ಈಗಲೂ ಹೇಳುತ್ತಿದ್ದೇನೆ, ನಾಳೆಯೂ ಹೇಳುತ್ತೇನೆ ಎಂದರು.

 ಬ್ಲ್ಯಾಕ್‌ಮೇಲ್ ಹಾಗೂ ಫೋನ್ ಟ್ಯಾಪಿಂಗ್ ತಂತ್ರಕ್ಕೆ ಹೆದರುವುದಿಲ್ಲ

ಪಾರ್ಟ್ 1, 2, 3, 4 ಸ್ಟಿಂಗ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಅವರ ಹತ್ತಿರ ಇರುವುದೆಲ್ಲ ಗೊತ್ತಿದೆ. ಚೆನ್ನಿಗಪ್ಪನ ಕಾಲದಿಂದಲೂ ಗೊತ್ತಿದೆ. ಬಾಲಗಂಗಾಧರನಾಥ ಸ್ವಾಮೀಜಿ, ನಿರ್ಮಲಾನಂದನಾಥ ಸ್ವಾಮೀಜಿ ಅವರ ಫೋನ್ ಅನ್ನೇ ಟ್ಯಾಪ್ ಮಾಡಿಸಿದವರು, ಅವರನ್ನೇ ಬಿಟ್ಟಿಲ್ಲ, ಇನ್ನು ನನ್ನನ್ನು ಬಿಡುತ್ತಾರೆಯೇ? ಹಾಗೆಂದು ಭಾವಿಸಿದರೆ ನಮ್ಮಂಥ ಮುಟ್ಟಾಳರು ಯಾರೂ ಇಲ್ಲ. ಅವರು ಮುಖ್ಯಮಂತ್ರಿಯಾಗಿದ್ದಾಗ ನಾನು ಹೆದರಲಿಲ್ಲ, ಈಗ ಹೆದರುತ್ತೇನೆಯೇ? ನನ್ನನ್ನು ದೊಡ್ಡ ಬೆದರಿಕೆ ಹಾಕಿ ಹೆದರಿಸುವ ಅಥವಾ ಬ್ಲ್ಯಾಕ್‌ಮೇಲ್ ಮಾಡುವ ಜಾಯಮಾನ ನನ್ನದಲ್ಲ ಎಂದರು.

ಸ್ವಂತ ಅಪ್ಪ, ಅಣ್ಣ-ತಮ್ಮಂದಿರನ್ನೇ ಜೀರ್ಣಿಸಿಕೊಳ್ಳದವರು ನಮ್ಮನ್ನು ಬಿಡುತ್ತಾರೆಯೇ?

ಸ್ವಂತ ಅಪ್ಪನನ್ನೇ, ಅಣ್ಣ-ತಮ್ಮಂದಿರನ್ನೇ ಜೀರ್ಣಿಸಿಕೊಳ್ಳಲಾಗದವರು ನಮ್ಮನ್ನು ಬಿಡುತ್ತಾರೆಯೇ? ನಾವೇನೂ ಅವರಿಂದ ಒಳ್ಳೆಯದನ್ನು ನಿರೀಕ್ಷಿಸಿಲ್ಲ. ನಮ್ಮ ಸರ್ಕಾರದ ಜನಪ್ರಿಯತೆಯನ್ನು ತಡೆದುಕೊಳ್ಳಲು ಆಗದೆ ‘ಅಸೂಯೆ’ಯಿಂದ ಹೀಗೆ ಮಾಡುತ್ತಿದ್ದಾರೆ. ಅವರಿಗೆ ಸಂಸ್ಕಾರವೂ ಇಲ್ಲ, ಸಂಸ್ಕೃತಿಯೂ ಇಲ್ಲ ಎಂದು ಟೀಕಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular