ಬೆಂಗಳೂರು: ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಮಳೆಯ ಅಬ್ಬರ ಮುಂದುವರಿದಿದೆ. ಬೆಂಗಳೂರು, ಚಾಮರಾಜನಗರ, ದಾವಣಗೆರೆ, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚಿನೊಂದಿಗೆ ಮಳೆಯಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಭಾರಿ ಮಳೆಗೆ ಜಲಾಶಯಗಳು ತುಂಬಿ ಕೋಡಿ ಬಿದ್ದಿದ್ದು, ಕೆಲವು ಮನೆಗಳಿಗೆ ನೀರು ನುಗ್ಗಿದೆ. ತಾತ್ಕಾಲಿಕ ಸೇತುವೆ ಕೊಚ್ಚಿಹೋಗಿದ್ದು, ಎರಡು ಕುರಿ ಮತ್ತು 20 ಕೋಳಿಗಳು ನೀರಿನಲ್ಲಿ ಕೊಚ್ಚಿಹೋಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸೆಪ್ಟೆಂಬರ್ 30ರಂದು ರಾಜ್ಯದ 14 ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗಂಟೆಗೆ 30ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೂ ಇದ್ದು, ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಬೆಂಗಳೂರಿನಲ್ಲಿ ಬೆಳಗ್ಗೆಯಿಂದ ಮಳೆ
ಬೆಂಗಳೂರಿನಲ್ಲಿ ಬುಧವಾರ ಬೆಳಗ್ಗೆ 5 ಗಂಟೆಯಿಂದಲೇ ಮಳೆ ಆರಂಭವಾಗಿದೆ. ಮಲ್ಲೇಶ್ವರಂ, ಶೇಷಾದ್ರಿಪುರಂ, ಮೆಜೆಸ್ಟಿಕ್ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ಗುಡುಗು-ಮಿಂಚಿನೊಂದಿಗೆ ಮಳೆ ಸುರಿದಿದೆ.
ಕಳೆದ ಕೆಲವು ದಿನಗಳಿಂದ ಹಗಲಿನಲ್ಲಿ ಬಿಸಿಲು ಮತ್ತು ಉಷ್ಣ ವಾತಾವರಣವಿತ್ತು. ಆದರೆ ಬೆಳಗಿನ ಜಾವ ದಟ್ಟ ಮೋಡಗಳು ಆವರಿಸಿ ಮಳೆ ಸುರಿಯುತ್ತಿರುವುದರಿಂದ ವಾಹನ ಸವಾರರು ಮತ್ತು ಬೆಳಗಿನ ಕೆಲಸಕ್ಕೆ ಹೊರಡುವವರಿಗೆ ತೊಂದರೆಯಾಗಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಹಲವು ಕೆರೆ-ಕಟ್ಟೆಗಳು ತುಂಬಿವೆ. ಹುಬ್ಬೆಹುಣಸೆ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿದೆ. ಉಡುತೊರೆ ಜಲಾಶಯ, ತಟ್ಟೆಹಳ್ಳ ಮತ್ತು ಸ್ವಾಮಿಹಳ್ಳ ಕೆರೆಗಳಲ್ಲೂ ನೀರಿನ ಪ್ರಮಾಣ ಹೆಚ್ಚಾಗಿದೆ.
ತಟ್ಟೆಹಳ್ಳ ತುಂಬಿ ಹರಿದ ಪರಿಣಾಮ ಸುತ್ತಮುತ್ತಲಿನ ರಸ್ತೆಗಳು ಹಾಗೂ ವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. ಕೆಲವು ಮನೆಗಳಿಗೂ ನೀರು ನುಗ್ಗಿದ್ದು, ನಿವಾಸಿಗಳು ಪರದಾಡಿದ್ದಾರೆ.
ಸ್ವಾಮಿಹಳ್ಳದಲ್ಲಿ ನೀರಿನ ರಭಸ ಹೆಚ್ಚಾದ ಪರಿಣಾಮ ತಾತ್ಕಾಲಿಕ ಸೇತುವೆ ಕೊಚ್ಚಿಹೋಗಿದೆ. ಹೊಸ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರೈತರ ಸಂಚಾರಕ್ಕೆ ಅನುಕೂಲವಾಗಲೆಂದು ಈ ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿತ್ತು. ಅದು ಹಾನಿಯಾಗಿರುವುದರಿಂದ ಜಮೀನುಗಳಿಗೆ ತೆರಳಲು ರೈತರಿಗೆ ತೊಂದರೆಯಾಗಿದೆ.
ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಮಳೆ ಅವಾಂತರ ಸೃಷ್ಟಿಸಿದೆ. ಮನೆ ಮತ್ತು ಅಂಗಡಿಗಳಿಗೆ ನೀರು ನುಗ್ಗಿದೆ. ಮಳೆಯ ರಭಸಕ್ಕೆ ಎರಡು ಕುರಿ ಹಾಗೂ 20 ಕೋಳಿಗಳು ಕೊಚ್ಚಿಹೋಗಿವೆ ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲೂ ಮಳೆಯಿಂದ ಕಲ್ಲುಬಂಡೆ ಉರುಳಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಚಾಮರಾಜನಗರ ನಗರದಲ್ಲಿ ಸೋಮವಾರ ಸಂಜೆ ಆರಂಭವಾದ ಮಳೆ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸುರಿದಿದೆ. ಬಿ.ರಾಚಯ್ಯ ಜೋಡಿ ರಸ್ತೆ, ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ ಹಾಗೂ ಸಂತೇಮರಹಳ್ಳಿ ವೃತ್ತದಲ್ಲಿ ಚರಂಡಿಗಳು ತುಂಬಿ ನೀರು ರಸ್ತೆಗೆ ಹರಿದಿದೆ.
ಸಂತೇಮರಹಳ್ಳಿ ವೃತ್ತದಲ್ಲಿ ಹೆಚ್ಚಿನ ಪ್ರಮಾಣದ ನೀರು ನಿಂತಿದ್ದರಿಂದ ವಾಹನ ಸವಾರರು ತೊಂದರೆ ಅನುಭವಿಸಿದರು. ಜಿಲ್ಲಾಡಳಿತ ಭವನದ ಎದುರಿನ ಜೋಡಿ ರಸ್ತೆಯಲ್ಲೂ ನೀರು ನಿಂತು ಸಂಚಾರ ನಿಧಾನಗೊಂಡಿತ್ತು.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲೂ ಭಾರಿ ಮಳೆಯಾಗಿದೆ. ಕಬ್ಬಳ-ಕೆಂಗಾಪುರ ರಸ್ತೆಯಲ್ಲಿ ಹಳ್ಳದ ನೀರು ರಸ್ತೆಯ ಮೇಲೆಯೇ ಹರಿದ ಪರಿಣಾಮ ಕೆಲಕಾಲ ಸಂಪರ್ಕ ಕಡಿತಗೊಂಡಿತ್ತು.
ಹರನಹಳ್ಳಿ, ಕೆಂಗಾಪುರ ಮೂಲಕ ಕಬ್ಬಳವನ್ನು ಸಂಪರ್ಕಿಸುವ ಗ್ರಾಮೀಣ ರಸ್ತೆಗಳಲ್ಲೂ ನೀರು ಹರಿದಿದೆ. ಹರಿದ್ರಾವತಿ ಹಳ್ಳ ತುಂಬಿ ಹರಿದಿದ್ದರಿಂದ ಸೇತುವೆ ಇಲ್ಲದ ಪ್ರದೇಶದಲ್ಲಿ ರಸ್ತೆಯ ಮೇಲೆಯೇ ನೀರು ಸಾಗಿತ್ತು.
ಮಳೆ ನಡುವೆಯೇ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಸಂಚರಿಸುವ ಪರಿಸ್ಥಿತಿ ಎದುರಾಗಿತ್ತು. ಈ ಭಾಗದಲ್ಲಿ ಸೇತುವೆ ನಿರ್ಮಿಸಬೇಕು ಎಂಬುದು ಹಲವು ವರ್ಷಗಳಿಂದ ಗ್ರಾಮಸ್ಥರ ಬೇಡಿಕೆಯಾಗಿದೆ.
ಈ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಸೆಪ್ಟೆಂಬರ್ 30ರಂದು ಗುಡುಗು-ಮಿಂಚು ಸಹಿತ ಮಳೆಯ ಜೊತೆಗೆ ಬಿರುಗಾಳಿ ಬೀಸುವ ಸಾಧ್ಯತೆ ಹಿನ್ನೆಲೆಯಲ್ಲಿ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಹವಾಮಾನ ಇಲಾಖೆಯ ಪ್ರಕಾರ, ಪೂರ್ವ-ಮಧ್ಯ ಅರಬೀ ಸಮುದ್ರದ ಭಾಗದಲ್ಲಿ ಹಾಗೂ ಉತ್ತರ ತಮಿಳುನಾಡು ಮತ್ತು ದಕ್ಷಿಣ ಕರಾವಳಿ ಆಂಧ್ರಪ್ರದೇಶದ ಸುತ್ತಮುತ್ತ ವಾಯುಭಾರ ಕುಸಿತದ ವಾತಾವರಣವಿದೆ.
ಉತ್ತರ ಒಳನಾಡು ಕರ್ನಾಟಕದಿಂದ ದಕ್ಷಿಣ ಒಳನಾಡು ಕರ್ನಾಟಕದ ಮೂಲಕ ತಮಿಳುನಾಡಿನವರೆಗೆ ಟ್ರಫ್ ವಿಸ್ತರಿಸಿದೆ. ಮತ್ತೊಂದೆಡೆ ದಕ್ಷಿಣ ತೆಲಂಗಾಣದಿಂದ ಮನ್ನಾರ್ ಕೊಲ್ಲಿಯವರೆಗೆ ಮತ್ತೊಂದು ಟ್ರಫ್ ಹಾದುಹೋಗಿದೆ. ಈ ಹವಾಮಾನ ಪರಿಸ್ಥಿತಿಗಳಿಂದ ರಾಜ್ಯದ ಹಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣದ ಜೊತೆಗೆ ಮಳೆ ಮುಂದುವರಿದಿದೆ.
ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಹಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಈ ಭಾಗಗಳಿಗೆ ಸದ್ಯ ಯಾವುದೇ ಅಲರ್ಟ್ ನೀಡಲಾಗಿಲ್ಲ.

