ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ)ಯು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿನ ವಿಜ್ಞಾನ ಸಂಯೋಜನೆಯ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಸಿ.ಇ.ಟಿ ಅಂತರ್ಗತ ತರಗತಿಗಳನ್ನು(Integrated Classes) ಪ್ರಾರಂಭಿಸಿದೆ.
ಈ ಸಂಯೋಜಿತ ಶೈಕ್ಷಣಿಕ ಕಾರ್ಯಕ್ರಮದಡಿ ವಾರಕ್ಕೆ 4 ದಿನಗಳಂತೆ, ಒಟ್ಟು 68 ದಿನಗಳಲ್ಲಿ 102 ಗಂಟೆಗಳ ಕಾಲ ವ್ಯವಸ್ಥಿತವಾಗಿ ತರಗತಿಗಳನ್ನು ನಡೆಸಲಾಗುವುದು. ವಿದ್ಯಾರ್ಥಿಗಳು ತಮ್ಮ ವಾರ್ಷಿಕ ಪರೀಕ್ಷೆಯ ತಯಾರಿಯ ಜೊತೆಗೆ ಸಾಮಾನ್ಯ ಪ್ರವೇಶ ಪರೀಕ್ಷೆಗೂ ಆತ್ಮವಿಶ್ವಾಸದಿಂದ ಸಜ್ಜಾಗಲು ಇದೊಂದು ಅದ್ಭುತ ಅವಕಾಶವಾಗಿದೆ.
ಕಳೆದ ಎರಡು ವರ್ಷ ಆನ್ಲೈನ್ ನಲ್ಲಿ ನೀಡಲಾಗಿದ್ದ ಸಿಇಟಿ ತರಬೇತಿಯನ್ನು ಈ ಬಾರಿ ಭೌತಿಕ ತರಗತಿಗಳಿಗೆ ಪರಿವರ್ತಿಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಆನ್ಲೈನ್ ಗಿಂತ ಭೌತಿಕ ತರಗತಿ ಮೂಲಕ ಸಿಇಟಿ ತರಬೇತಿ ನೀಡಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ವಿದ್ಯಾರ್ಥಿಗಳಿಂದ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ 774 ಸರ್ಕಾರಿ ಪಿಯು ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು, ಅತಿ ಹೆಚ್ಚು ವಿದ್ಯಾರ್ಥಿಗಳಿರುವ 200 ಪಿಯು ಕಾಲೇಜುಗಳನ್ನು ಆಯ್ಕೆ ಮಾಡಲಾಗಿದೆ. ಈ ಕಾಲೇಜುಗಳ ಸುಮಾರು 45,000 ವಿದ್ಯಾರ್ಥಿಗಳು ಅನುಕೂಲವಾಗಲಿದೆ ಎನ್ನಲಾಗಿದೆ.
ಸಿಇಟಿ ತರಬೇತಿ
ಕರ್ನಾಟಕ ಸರ್ಕಾರವು ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸಿಇಟಿ ಸೇರಿದಂತೆ ವಿವಿಧ ವೃತ್ತಿಪರ ಪ್ರವೇಶ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುವ ಕಾರ್ಯಕ್ರಮವನ್ನು ಜಾರಿಗೆ ತಂದಿದೆ.
ವಿಶೇಷವಾಗಿ ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಖಾಸಗಿ ಕೋಚಿಂಗ್ನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.
ಮೊದಲ ಹಂತದಲ್ಲಿ ರಾಜ್ಯದ 200 ಸರ್ಕಾರಿ ಪಿಯು ಕಾಲೇಜುಗಳಲ್ಲಿ ಆಫ್ಲೈನ್ ತರಬೇತಿ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಉಳಿದ ಸರ್ಕಾರಿ ಪಿಯು ಕಾಲೇಜುಗಳ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ತರಬೇತಿ ನೀಡುವ ವ್ಯವಸ್ಥೆಯೂ ಇರಲಿದೆ ಎಂದು ವರದಿಯಾಗಿದೆ.
ತರಬೇತಿಯ ಪ್ರಮುಖ ಅಂಶಗಳು
ಸಿಇಟಿ ಪರೀಕ್ಷೆಗೆ ಉಚಿತ ತರಬೇತಿ
ವಿಜ್ಞಾನ ವಿಭಾಗದ PCMB ವಿದ್ಯಾರ್ಥಿಗಳಿಗೆ ವಿಶೇಷ ಮಾರ್ಗದರ್ಶನ
ಕಾಲೇಜಿನಲ್ಲೇ ಭೌತಿಕ/ಆಫ್ಲೈನ್ ತರಗತಿಗಳ ವ್ಯವಸ್ಥೆ
ಕಾಲೇಜು ಸಮಯದ ನಂತರ ಪ್ರತಿದಿನ ಸುಮಾರು 90 ನಿಮಿಷ ತರಬೇತಿ ನೀಡುವ ಯೋಜನೆ
ಸಿಇಟಿ ಜತೆಗೆ ನೀಟ್ ಮತ್ತು ಜೆಇಇ ಪರೀಕ್ಷೆಗಳಿಗೂ ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ಕೆಲವು ಕಾಲೇಜುಗಳಲ್ಲಿ ತಿಳಿಸಲಾಗಿದೆ.
ಅಧ್ಯಾಯವಾರು ಪಾಠ ಪೂರ್ಣಗೊಂಡ ಬಳಿಕ ಯುನಿಟ್ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳ ಪ್ರಗತಿಯನ್ನು ಪರಿಶೀಲಿಸುವ ವ್ಯವಸ್ಥೆಯೂ ಕೆಲವು ಕಡೆ ಜಾರಿಯಲ್ಲಿದೆ.
1,500 ಉಪನ್ಯಾಸಕರಿಗೆ ತರಬೇತಿ
ರಾಜ್ಯದಲ್ಲಿ ಸಿಇಟಿ ತರಬೇತಿ ನೀಡಲು ಸುಮಾರು 1,500 ವಿಜ್ಞಾನ ಉಪನ್ಯಾಸಕರಿಗೆ ವಿಶೇಷ ತರಬೇತಿ ನೀಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ತಮ್ಮದೇ ಸರ್ಕಾರಿ ಕಾಲೇಜಿನಲ್ಲಿ ತರಬೇತಿ ಪಡೆಯುವ ಅವಕಾಶ ಸಿಗಲಿದೆ.
ವಿದ್ಯಾರ್ಥಿಗಳಿಗೆ ಏನು ಪ್ರಯೋಜನ?
ಖಾಸಗಿ ಸಿಇಟಿ ಕೋಚಿಂಗ್ ಕೇಂದ್ರಗಳಿಗೆ ಹೆಚ್ಚಿನ ಶುಲ್ಕ ಪಾವತಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ. ನಗರ ಪ್ರದೇಶಗಳಿಗೆ ತೆರಳದೆ ತಮ್ಮ ಕಾಲೇಜಿನಲ್ಲೇ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆ ಮಾಡಿಕೊಳ್ಳಲು ಅವಕಾಶ ದೊರೆಯುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.

