ಕೊಪ್ಪಳ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಉದ್ಘಾಟಿಸಲಿದ್ದಾರೆ ಎಂಬ ಘೋಷಣೆಯ ಬೆನ್ನಲ್ಲೇ, ಶ್ರೀಗಳು ದಸರಾ ಉದ್ಘಾಟನೆಗೆ ನೀಡಲಾಗಿದ್ದ ಆಹ್ವಾನವನ್ನು ತಿರಸ್ಕರಿಸಿದ್ದಾರೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಈ ಸಂಬಂಧ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜನತಾ ಟಿವಿ ಡಿಜಿಟಲ್ 2 ಹೆಸರಿನ ಅಪ್ಲಿಕೇಶನ್ ನಲ್ಲಿ ಗವಿಸಿದ್ದೇಶ್ವರ ಸ್ವಾಮೀಜಿ ದಸರಾ ಉದ್ಘಾಟನೆಗೆ ತಿರಸ್ಕರಿಸಿದ್ದಾರೆ ಎನ್ನುವ ಅರ್ಥದ ಪೋಸ್ಟ್ ವೈರಲ್ ಆಗಿತ್ತು. ಈ ಪೋಸ್ಟ್ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವಂತಿದ್ದು ಆಧಾರ ರಹಿತವಾಗಿದೆ ಎಂದು ದೂರು ನೀಡಲಾಗಿದೆ. ಕೊಪ್ಪಳ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಡಿ. ಸುರೇಶ್ ಅವರ ದೂರಿನ ಅನ್ವಯ ಪ್ರಕರಣ ದಾಖಲಿಸಲಾಗಿದ್ದು, ಸುಳ್ಳು ಪೋಸ್ಟ್ ಹರಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಕೊಪ್ಪಳ ನಗರ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಏನಿತ್ತು?
ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರ ಚಿತ್ರವನ್ನು ಬಳಸಿಕೊಂಡು, “ಮೈಸೂರು ದಸರಾ ಉದ್ಘಾಟನೆಗೆ ಶ್ರೀಗಳು ನಿರಾಕರಿಸಿದ್ದಾರೆ” ಎಂಬ ಅರ್ಥದ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಲ್ಲದೆ, ಕೆಲವು ಪೋಸ್ಟ್‌ಗಳಲ್ಲಿ ದಸರಾ ಉದ್ಘಾಟನೆಗೆ ಬರುವುದಕ್ಕೆ ಶ್ರೀಗಳು ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ ಎಂಬ ಮಾಹಿತಿಯನ್ನೂ ಹರಡಲಾಗಿತ್ತು. ಇದರಿಂದ ಭಕ್ತರು ಹಾಗೂ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿತ್ತು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಗವಿಮಠದ ಮೂಲಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮಾಹಿತಿ ಸುಳ್ಳು ಮತ್ತು ಆಧಾರರಹಿತ ಎಂದು ಸ್ಪಷ್ಟಪಡಿಸಿವೆ. ಶ್ರೀಗಳು ದಸರಾ ಉದ್ಘಾಟನೆಗೆ ನಿರಾಕರಿಸಿದ್ದಾರೆ ಎಂದು ಮಠದಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ ಎಂದು ತಿಳಿಸಲಾಗಿದೆ.
ಶ್ರೀಗಳು ದಸರಾ ಉದ್ಘಾಟನೆಗೆ ಒಪ್ಪಿಗೆ ನೀಡಿದ ಬಳಿಕವೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅವರ ಹೆಸರನ್ನು ಘೋಷಿಸಿದ್ದಾರೆ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಸ್ಪಷ್ಟಪಡಿಸಿದ್ದಾರೆ.
ಸುಳ್ಳು ಸುದ್ದಿ ಹರಡಿದ ಆರೋಪಕ್ಕೆ ಸುಮೋಟೋ ಕೇಸ್
ಸುಳ್ಳು ಮಾಹಿತಿ ಹರಡಿರುವುದು ಪೊಲೀಸರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕೊಪ್ಪಳ ನಗರ ಠಾಣೆ ಪೊಲೀಸರು ಸ್ವಯಂಪ್ರೇರಿತವಾಗಿ (ಸುಮೋಟೋ) ಪ್ರಕರಣ ದಾಖಲಿಸಿಕೊಂಡಿದ್ದಾರೆ. ‘ಜನತಾ ಟಿವಿ ಡಿಜಿಟಲ್’/‘ಜನತಾ ನ್ಯೂಸ್ ಡಿಜಿಟಲ್2’ ಹೆಸರಿನ ಸಾಮಾಜಿಕ ಮಾಧ್ಯಮ ಖಾತೆ ಅಥವಾ ಚಾನೆಲ್ ಮೂಲಕ ಸುಳ್ಳು ಮಾಹಿತಿ ಹರಡಿದ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ.
ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಭಾಗ್ಲಾ ಅವರು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುವ ಅಥವಾ ಗಣ್ಯರ ಕುರಿತು ಸುಳ್ಳು ಮಾಹಿತಿ ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಅಧಿಕೃತ ಆಹ್ವಾನ
ಸೆ.28ರಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು ಗವಿಸಿದ್ದೇಶ್ವರ ಸ್ವಾಮೀಜಿಯನ್ನು ಭೇಟಿಯಾಗಿ ದಸರಾ ಉದ್ಘಾಟನೆಗೆ ಅಧಿಕೃತವಾಗಿ ಆಹ್ವಾನ ನೀಡಲಿದ್ದಾರೆ ಎನ್ನಲಾಗಿದೆ.

