ಅಕ್ಟೋಬರ್ ತಿಂಗಳಿನಿಂದ ದೇಶದ ಜನರ ಮೇಲೆ ಆರ್ಥಿಕವಾಗಿ ಪರಿಣಾಮ ಬೀರುವ ಹಲವು ಪ್ರಮುಖ ಬದಲಾವಣೆಗಳು ಜಾರಿಗೆ ಬರಲಿವೆ. UPI ಶುಲ್ಕ, ಹೊಸ ಫಿಕ್ಸ್ಡ್ ಡೆಪಾಸಿಟ್ ನಿಯಮಗಳು, ಗ್ಯಾಸ್ ಸಿಲಿಂಡರ್ಗಳ KYC ಸೇರಿದಂತೆ ಹಲವು ಮಹತ್ವದ ಬದಲಾವಣೆಗಳು ಜಾರಿಗೆ ಬರಲಿವೆ.
ಈ ಬದಲಾವಣೆಗಳು ಶ್ರೀಮಂತರಿಂದ ಹಿಡಿದು ಸಾಮಾನ್ಯ ಜನರವರೆಗೆ ಎಲ್ಲರ ಮೇಲೂ ಪರಿಣಾಮ ಬೀರಲಿವೆ. ಹೀಗಾಗಿ ಅಕ್ಟೋಬರ್ನಿಂದ ಬದಲಾಗಲಿರುವ ನಿಯಮಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅಗತ್ಯ. ದೊಡ್ಡ ಮೊತ್ತದ ಹಣಕಾಸು ವಹಿವಾಟು ನಡೆಸುವವರು, ಗ್ಯಾಸ್ ಸಿಲಿಂಡರ್ ಬಳಸುವವರು ಹಾಗೂ ಫಿಕ್ಸ್ಡ್ ಡೆಪಾಸಿಟ್ ಮಾಡಲು ಬಯಸುವವರು ಈ ನಿಯಮಗಳ ಬಗ್ಗೆ ಮಾಹಿತಿ ಹೊಂದಿರಬೇಕು.
UPI ವಹಿವಾಟುಗಳಿಗೆ ಶುಲ್ಕ?
ಅಕ್ಟೋಬರ್ 15ರಿಂದ UPI ವಹಿವಾಟುಗಳಿಗೆ ಶುಲ್ಕ ವಿಧಿಸಲಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ₹2,000ಕ್ಕಿಂತ ಹೆಚ್ಚಿನ ಮರ್ಚೆಂಟ್ ಪಾವತಿಗಳ ಮೇಲೆ 0.4% MDR ಶುಲ್ಕ ವಿಧಿಸಲಾಗುತ್ತದೆ. ಈ ಶುಲ್ಕವನ್ನು ಗ್ರಾಹಕರಿಂದ ಅಲ್ಲದೆ ವ್ಯಾಪಾರಿಗಳಿಂದ ಬ್ಯಾಂಕ್ಗಳು ಮತ್ತು ಪೇಮೆಂಟ್ ಅಗ್ರಿಗೇಟರ್ಗಳು ವಸೂಲಿ ಮಾಡಲಿವೆ.
₹75,000ಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಗರಿಷ್ಠ ₹300ರವರೆಗೆ ಶುಲ್ಕ ವಿಧಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಆದರೆ ವ್ಯಕ್ತಿಗಳ ನಡುವಿನ ಹಣ ವರ್ಗಾವಣೆ (P2P) ಸಂಪೂರ್ಣ ಉಚಿತವಾಗಿರಲಿದೆ. ಸಣ್ಣ ವ್ಯಾಪಾರಿಗಳಿಗೆ ತಿಂಗಳಿಗೆ ₹1 ಲಕ್ಷದವರೆಗೆ ಯಾವುದೇ ಶುಲ್ಕ ಇರುವುದಿಲ್ಲ. ಈ ಮಿತಿಯನ್ನು ದಾಟಿದರೆ ಶುಲ್ಕ ಪಾವತಿಸಬೇಕಾಗುತ್ತದೆ.
ಇನ್ನು ವಿಮಾ ಪ್ರೀಮಿಯಂ, ಇಂಧನ ಖರೀದಿ, ರೈಲ್ವೆ ಟಿಕೆಟ್, ಷೇರು ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್ ಹೂಡಿಕೆಗಳಿಗೆ ಸಂಬಂಧಿಸಿದ ವಹಿವಾಟುಗಳ ಮೇಲೂ UPI ಶುಲ್ಕ ವಿಧಿಸಲಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ ಇದರಿಂದ ಸಾಮಾನ್ಯ ಜನರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ ಎಂದು ವರದಿ ಹೇಳಿದೆ.
ಫಿಕ್ಸ್ಡ್ ಡೆಪಾಸಿಟ್ಗಳಿಗೆ ಹೊಸ ನಿಯಮ
ಅಕ್ಟೋಬರ್ 1ರಿಂದ ಫಿಕ್ಸ್ಡ್ ಡೆಪಾಸಿಟ್ಗಳಿಗೆ ಸಂಬಂಧಿಸಿದಂತೆ RBI ಹೊಸ ನಿಯಮಗಳನ್ನು ಜಾರಿಗೆ ತಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
₹3 ಕೋಟಿಗಿಂತ ಹೆಚ್ಚಿನ ಮೊತ್ತದ ಬಲ್ಕ್ FDಗಳಿಗೆ ಸಂಬಂಧಿಸಿದ ಬಡ್ಡಿದರಗಳನ್ನು ಬ್ಯಾಂಕ್ಗಳು ಬೆಳಗ್ಗೆ 10 ಗಂಟೆಯೊಳಗೆ ತಮ್ಮ ವೆಬ್ಸೈಟ್ನಲ್ಲಿ ಪ್ರಕಟಿಸಬೇಕು. ಇದಕ್ಕಾಗಿ 10 ನಿಮಿಷಗಳ ಗ್ರೇಸ್ ಅವಧಿ ಇರಲಿದ್ದು, ಬೆಳಗ್ಗೆ 10.10ರೊಳಗೆ ಮಾಹಿತಿಯನ್ನು ಅಪ್ಡೇಟ್ ಮಾಡಬೇಕು.ಅಲ್ಲದೆ, ಒಂದೇ ಬ್ಯಾಂಕ್ನ ಎಲ್ಲ ಶಾಖೆಗಳಲ್ಲೂ ಬಲ್ಕ್ FDಗಳಿಗೆ ಸಂಬಂಧಿಸಿದ ಬಡ್ಡಿದರಗಳು ಒಂದೇ ರೀತಿಯಾಗಿರಬೇಕು ಎಂದು RBI ಸೂಚಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಜನನ ಮತ್ತು ಮರಣ ನೋಂದಣಿ
ಅಕ್ಟೋಬರ್ 1ರಿಂದ ಜನನ ಮತ್ತು ಮರಣದ ವಿಳಂಬ ನೋಂದಣಿ ನಿಯಮಗಳಲ್ಲೂ ಬದಲಾವಣೆ ಆಗಲಿದೆ. ವರದಿ ಪ್ರಕಾರ, ಒಂದು ವರ್ಷ ಕಳೆದ ಬಳಿಕ ಆದರೆ ಎರಡು ವರ್ಷಗಳೊಳಗೆ ಮಾಡಲಾಗುವ ಜನನ ಅಥವಾ ಮರಣ ನೋಂದಣಿಗೆ, ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವ ಮೊದಲು ನೀಡಿರುವ ಮಾಹಿತಿಯ ಪರಿಶೀಲನೆ ಕಡ್ಡಾಯವಾಗಲಿದೆ.
ಇನ್ನು ಎರಡು ವರ್ಷಕ್ಕಿಂತ ಹೆಚ್ಚು ಕಾಲ ಕಳೆದಿರುವ ಪ್ರಕರಣಗಳಲ್ಲಿ, ನೋಂದಣಿ ಮಾಡಲು ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (Judicial Magistrate First Class) ಅವರ ಆದೇಶ ಅಗತ್ಯವಾಗಲಿದೆ.
ತಡವಾಗಿ ನಡೆಯುವ ಜನನ ಮತ್ತು ಮರಣ ನೋಂದಣಿಗಳಲ್ಲಿ ಪರಿಶೀಲನಾ ಪ್ರಕ್ರಿಯೆಯನ್ನು ಮತ್ತಷ್ಟು ಬಲಪಡಿಸುವುದು ಹಾಗೂ ತಪ್ಪು ಅಥವಾ ನಕಲಿ ದಾಖಲೆಗಳ ಸಾಧ್ಯತೆಯನ್ನು ಕಡಿಮೆ ಮಾಡುವುದು ಈ ಬದಲಾವಣೆಯ ಉದ್ದೇಶವಾಗಿದೆ.
LPG ಗ್ಯಾಸ್ KYC ಕಡ್ಡಾಯ
ಅಕ್ಟೋಬರ್ 1ರಿಂದ ದೇಶೀಯ LPG ಗ್ಯಾಸ್ ಸಂಪರ್ಕಗಳಿಗೆ ಆಧಾರ್ ಆಧಾರಿತ e-KYC ಕಡ್ಡಾಯ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಹೀಗಾಗಿ ಅಕ್ಟೋಬರ್ 1ರೊಳಗೆ KYC ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ದೇಶೀಯ ಸಿಲಿಂಡರ್ಗಳಿಗೆ ನೀಡಲಾಗುತ್ತಿರುವ ಗ್ಯಾಸ್ ಸಬ್ಸಿಡಿ ಸ್ಥಗಿತಗೊಳ್ಳಬಹುದು. ನಂತರ ಸಿಲಿಂಡರ್ಗಳನ್ನು ಮಾರುಕಟ್ಟೆ ದರದಲ್ಲೇ ಖರೀದಿಸಬೇಕಾಗಬಹುದು.
KYC ಪೂರ್ಣಗೊಳಿಸದವರಿಗೆ ಕೇವಲ 5 ಅಥವಾ 10 ಕೆ.ಜಿ. ಸಾಮರ್ಥ್ಯದ ಸಿಲಿಂಡರ್ಗಳನ್ನು ಮಾತ್ರ ನೀಡಲಾಗುತ್ತದೆ ಎಂಬ ಮಾಹಿತಿ ಕೂಡ ಹರಿದಾಡುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

