ಹಾಸನ: ಪತ್ನಿ ವಿರುದ್ಧ ಅನೈತಿಕ ಸಂಬಂಧದ ಆರೋಪ ಮಾಡಿ ಇದೇ ಕಾರಣಕ್ಕೇ ಬೇಸತ್ತು ವ್ಯಕ್ತಿಯೊಬ್ಬ ವಿಡಿಯೋ ಮಾಡಿಟ್ಟು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆಯಲ್ಲಿ ನಡೆದಿದೆ.
ಬೆಳಗಿಹಳ್ಳಿ ಗ್ರಾಮದ ದೊರೆ (27) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಈತ ತಿಪಟೂರು ತಾಲೂಕಿನ ನೊಣವಿನಕೆರೆ ಗ್ರಾಮದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಕಳೆದ 15 ದಿನಗಳ ಹಿಂದೆ ಪತ್ನಿ ಮನೆ ಬಿಟ್ಟು ತವರು ಮನೆ ಸೇರಿದ್ದಳು ಎಂದು ತಿಳಿದುಬಂದಿದೆ.
ದೊರೆ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ವಿಡಿಯೋ ಮಾಡಿಟ್ಟಿದ್ದು, ಅದರಲ್ಲಿ ಪತ್ನಿಗೆ ಪರಪುರುಷನ ಜೊತೆ ಅಕ್ರಮ ಸಂಬಂಧ ಇದೆ ಎಂದು ಆರೋಪಿಸಿದ್ದಾನೆ. ಈ ವಿಚಾರ ಆಕೆಯ ಪೋಷಕರಿಗೆ ತಿಳಿದಿದ್ದರೂ ಮಗಳ ಪರವಾಗಿ ಮಾತನಾಡುತ್ತಿದ್ದಾರೆ. ನಾನು ಪ್ರೀತಿಯಿಂದ ನೋಡಿಕೊಳ್ಳುತ್ತಿದೆ. ಆದರೂ ಆಕೆ ನನಗೆ ದ್ರೋಹ ಬಗೆದಿದ್ದಾಳೆ. ನನ್ನ ಮೇಲೆ ಮಾಟ-ಮಂತ್ರ ಮಾಡಿಸಿದ್ದಾಳೆ ಎಂದು ಆರೋಪಿಸಿದ್ದಾನೆ.
ಪೊಲೀಸರು ವಿಡಿಯೋ ಸಾಕ್ಷ್ಯದ ಆಧಾರದಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ನಾನು ಕರ್ನಾಟಕ ಪೊಲೀಸ್‌ಗೆ ಹೇಳ್ತಾ ಇದ್ದೀನಿ, ಈ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬೇಡಿ. ನನ್ನ ಮಾತು ಕೇಳಿ, ಅವಳ ಫೋನ್ ರೆಕಾರ್ಡಿಂಗ್ ತಗೊಳಿ, ಅವಳನ್ನ ಮಾತ್ರ ಬಿಡ್ಬೇಡಿ. ನನ್ನಂತ ಮುಗ್ಧ ಮನಸ್ಸಿನವನಿಗೆ ಮೋಸ ಮಾಡಿದ್ದಾಳೆ ಎಂದು ಕಣ್ಣೀರಿಟ್ಟಿದ್ದಾನೆ.
ಈ ವಿಷಯದಲ್ಲಿ ಪೊಲೀಸ್ ಮೇಲೆ ನಂಬಿಕೆ ಇದೆ ಎಂದು ಹೇಳಿದ್ದಾನೆ. ಸೆಲ್ಪಿ ವಿಡಿಯೋ ಮಾಡಿದ ಬಳಿಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕಣ ದಾಖಲಿಸಿಕೊಂಡು ಮುಂದಿನ ತನಿಖೆ ಆರಂಭಿಸಿದ್ದಾರೆ.
ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ವದಂತಿ: ವಿದ್ಯಾರ್ಥಿಗಳ ಆಕ್ರೋಶ: ಕಾಲೇಜು ಕ್ಯಾಂಪಸ್ ಧ್ವಂಸಗೊಳಿಸಿ ಆಕ್ರೋಶ
ಅಮೃತಸರ: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಂಬ ವದಂತಿ ಬೆನ್ನಲ್ಲೇ ಆಕ್ರೋಶಗೊಂಡ ವಿದ್ಯಾರ್ಥಿಗಳು ಪಂಜಾಬ್‌ನ ಫಾಗ್ವಾರಾದಲ್ಲಿರುವ ಪ್ರಸಿದ್ಧ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯದ (LPU) ಕ್ಯಾಂಪಸ್‌ನ್ನು ಧ್ವಂಸಗೊಳಿಸಿರುವ ಘಟನೆ ನಡೆದಿದೆ.
ಅಪರಿಚಿತ ಹೊರಗಿನ ವ್ಯಕ್ತಿಯೊಬ್ಬ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂಬ ಸುದ್ದಿ ಕಾಲೇಜು ಕ್ಯಾಂಪಸ್ ನಲ್ಲಿ ಹಬ್ಬಿದೆ. ಸುದ್ದಿ ತಿಳಿಯುತ್ತಿದ್ದಂತೆ ಕಾಅಲೇಜಿನ ಹಾಸ್ಟೆಲ್ ಬಳಿ ಬೆಳಗಿನ ಜಾವ ಜಮಾವಣೆಗೊಂಡ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಆಡಳಿತ ಮಂಡಳಿಯ ಭದ್ರತಾ ಲೋಪದ ವಿರುದ್ಧ ಆಕ್ರೋಶ ಹೊರಹಾಕಿದರು. ನೋಡನೋಡುತ್ತಿದ್ದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಗೆ ಸೇರ್ಪಡೆಗೊಂಡು ಕ್ಯಾಂಪಸ್‌ನಲ್ಲಿ ವಿಧ್ವಂಸಕ ಕೃತ್ಯ ನಡೆಸಿದರು.
ಕಿಟಕಿ ಗಾಜುಗಳು, ಹೂವಿನ ಕುಂಡಗಳು ಮತ್ತು ಪೀಠೋಪಕರಣಗಳನ್ನು ಪುಡಿ ಪುಡಿ ಮಾಡಿ ಘೋಷಣೆ ಕೂಗಿದರು. ಆವರಣದಲ್ಲಿದ್ದ ಕೆಲವು ಕಟ್ಟಡಗಳ ವಸ್ತುಗಳು ಮತ್ತು ಆಸ್ತಿಗೆ ಬೆಂಕಿ ಹಚ್ಚಲಾಯಿತು. ಪರಿಸ್ಥಿತಿ ಕೈಮೀರುತ್ತಿದ್ದಂತೆ ವಿಶ್ವವಿದ್ಯಾಲಯದ ಖಾಸಗಿ ಭದ್ರತಾ ಸಿಬ್ಬಂದಿ ಅಸಹಾಯಕರಾದರು.
ಬೆಳಗಿನ ಜಾವ 4 ಗಂಟೆ ಸುಮಾರಿಗೆ ವಿಶ್ವವಿದ್ಯಾಲಯದ ಮುಖ್ಯ ದ್ವಾರವನ್ನು ಮುರಿದು ಹೊರಬಂದ ಪ್ರತಿಭಟನಾಕಾರರು, ಜಲಂಧರ್-ಫಾಗ್ವಾರಾ (ಚಂಡೀಗಢ-ಅಮೃತಸರ) ರಾಷ್ಟ್ರೀಯ ಹೆದ್ದಾರಿಯಲ್ಲಿ ಧರಣಿ ಕುಳಿತರು. ರಸ್ತೆಯ ಮಧ್ಯೆ ಕುಳಿತು ಘೋಷಣೆ ಕೂಗಿದ್ದರಿಂದ ಹೆದ್ದಾರಿಯುದ್ದಕ್ಕೂ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತು ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು.
ಘಟನಾ ಸ್ಥಳಕ್ಕೆ ಭಾರಿ ಪೊಲೀಸ್ ಪಡೆಯೊಂದಿಗೆ ಧಾವಿಸಿದ ಕಪುರ್ತಲಾ ಎಸ್‌ಎಸ್‌ಪಿ ಗೌರವ್ ತೂರ್ ವಿದ್ಯಾರ್ಥಿಗಳೊಂದಿಗೆ ಸಂಧಾನ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
“ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ದೃಢೀಕರಿಸದ ಸುಳ್ಳು ಸಂದೇಶದಿಂದ ವಿದ್ಯಾರ್ಥಿಗಳು ಪ್ರಚೋದನೆಗೊಂಡಿದ್ದಾರೆ. ಇದುವರೆಗಿನ ತನಿಖೆಯಲ್ಲಿ ಯಾವುದೇ ಅತ್ಯಾಚಾರ ಘಟನೆ ನಡೆದಿರುವುದಕ್ಕೆ ಸಾಕ್ಷ್ಯಗಳಿಲ್ಲ, ಅಥವಾ ಅಂತಹ ಯಾವುದೇ ದೂರಾಗಲಿ ನಮಗೆ ಬಂದಿಲ್ಲ. ವದಂತಿಗಳನ್ನು ನಂಬಿ ಕ್ಯಾಂಪಸ್ ಆಸ್ತಿ ನಾಶಪಡಿಸಿ ಹೆದ್ದಾರಿ ತಡೆ ನಡೆಸಿರುವುದು ಸರಿಯಲ್ಲ. ವದಂತಿ ಹಬ್ಬಿಸಿದ ಕಿಡಿಗೇಡಿಗಳ ಮೂಲವನ್ನು ಸೈಬರ್ ಸೆಲ್ ಪತ್ತೆಹಚ್ಚುತ್ತಿದೆ” ಎಂದು ಎಸ್‌ಎಸ್‌ಪಿ ಸ್ಪಷ್ಟಪಡಿಸಿದ್ದಾರೆ.
ವಾಟ್ಸಾಪ್ ಗ್ರೂಪ್‌ಗಳು, ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟರ್) ಪ್ಲಾಟ್‌ಫಾರ್ಮ್‌ಗಳಲ್ಲಿ ನಕಲಿ ಆಡಿಯೋ ಮತ್ತು ಮೆಸೇಜ್‌ಗಳನ್ನು ಹರಿಬಿಟ್ಟು ವಿದ್ಯಾರ್ಥಿಗಳನ್ನು ಹಿಂಸಾಚಾರಕ್ಕೆ ಪ್ರಚೋದಿಸಿದ ಕಿಡಿಗೇಡಿಗಳ ವಿರುದ್ಧ ಐಟಿ ಕಾಯ್ದೆಯಡಿ ಕಠಿಣ ಪ್ರಕರಣ ದಾಖಲಿಸಲು ಸೈಬರ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಪೊಲೀಸರು ವಿದ್ಯಾರ್ಥಿಗಳನ್ನು ಮನವೊಲಿಸಿ ಕ್ಯಾಂಪಸ್‌ಗೆ ಕಳುಹಿಸಿದ ನಂತರ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಲಾಯಿತು.

