ಬೆಂಗಳೂರು: ಬರ ಪರಿಸ್ಥಿತಿಯಿಂದ ಗ್ರಾಮೀಣ ಪ್ರದೇಶದ ಕಾರ್ಮಿಕರು ಉದ್ಯೋಗಕ್ಕಾಗಿ ಗುಳೆ ಹೋಗುವುದನ್ನು ತಪ್ಪಿಸಲು ವಿಬಿ-ಜಿ ರಾಮ್ ಜಿ ಯೋಜನೆಯಡಿ 136 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಸಪ್ಲಿಮೆಂಟರಿ ಬಜೆಟ್ನಲ್ಲಿ ₹2,280 ಕೋಟಿ ಮೀಸಲಿಡಲಾಗಿದೆ.
ಬರದ ಸಂಕಷ್ಟದ ಸಮಯದಲ್ಲಿ ಜನರಿಗೆ ನೆರವು ನೀಡುವುದಷ್ಟೇ ಅಲ್ಲ, ಅವರ ಕೈಗೆ ಕೆಲಸ ನೀಡಿ, ಕುಟುಂಬದ ಬದುಕಿಗೆ ಆಸರೆ ಒದಗಿಸುವುದು ನಮ್ಮ ಸರ್ಕಾರದ ಸಂಕಲ್ಪ. ಗ್ರಾಮೀಣ ಪ್ರದೇಶಗಳಲ್ಲೇ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಬರ ಪರಿಸ್ಥಿತಿ ಗಂಭೀರವಾಗಿದ್ದು, ರೈತರು ಹಾಗೂ ಗ್ರಾಮೀಣ ಜನರ ಸಂಕಷ್ಟಕ್ಕೆ ಸ್ಪಂದಿಸಲು ನಮ್ಮ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ರಾಜ್ಯದಲ್ಲಿ ಈಗಾಗಲೇ 177 ತಾಲ್ಲೂಕುಗಳನ್ನು ಬರಪೀಡಿತ ಎಂದು ಹಂತವಾರು ಘೋಷಿಸಲಾಗಿದೆ. ಮೊದಲ ಹಂತದಲ್ಲಿ 101, ಎರಡನೇ ಹಂತದಲ್ಲಿ 23 ಹಾಗೂ ಮೂರನೇ ಹಂತದಲ್ಲಿ 53 ತಾಲ್ಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿವೆ. ಮುಂದಿನ ಹಂತದಲ್ಲಿ ಒಟ್ಟು 220 ತಾಲ್ಲೂಕುಗಳು ಬರಪೀಡಿತ ಎಂದು ಘೋಷಣೆಯಾಗುವ ಸಾಧ್ಯತೆ ಇದ್ದು, ಬರದಿಂದ ಸಂಕಷ್ಟಕ್ಕೊಳಗಾಗಿರುವ ರೈತರು ಮತ್ತು ಜನರ ನೆರವಿಗೆ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ನಮ್ಮ ಸರ್ಕಾರ ಮುನ್ನೆಚ್ಚರಿಕೆಯೊಂದಿಗೆ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಿ, ತ್ವರಿತ ಕ್ರಮ ಕೈಗೊಳ್ಳುತ್ತಿದೆ. ಮುಖ್ಯಮಂತ್ರಿಗಳ ಸೂಚನೆಯಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೂಲಕ ಜಿಲ್ಲಾಧಿಕಾರಿಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಅನುದಾನ ಬಿಡುಗಡೆ ಮಾಡಲಾಗಿದೆ. ಸಣ್ಣ ಜಿಲ್ಲೆಗಳಿಗೆ ₹3 ಕೋಟಿ, ದೊಡ್ಡ ಜಿಲ್ಲೆಗಳಿಗೆ ₹5 ರಿಂದ 6 ಕೋಟಿ ಸೇರಿದಂತೆ ಸರಾಸರಿ ₹5 ಕೋಟಿಯಷ್ಟು ಅನುದಾನ ನೀಡಲಾಗಿದೆ.
ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಪಕ್ಷಪಾತವಿಲ್ಲದೆ ಪ್ರತಿಯೊಬ್ಬ ಶಾಸಕರಿಗೂ ₹1 ಕೋಟಿ ಅನುದಾನ ನೀಡಲಾಗಿದೆ. ಆ ಹಣವನ್ನು ಈಗ ಬಳಸಲಾಗುತ್ತಿದೆ. ಈಗಾಗಲೇ ಹಲವು ಕಡೆಗಳಲ್ಲಿ ಕ್ರಿಯಾ ಯೋಜನೆ ರೂಪಿಸಿ ಕೊಳವೆಬಾವಿ ಕೊರೆಸುವುದು, ಪೈಪ್ಡ್ ವಾಟರ್ ಸಪ್ಲೈ, ಪೈಪ್ಲೈನ್ ವಿಸ್ತರಣೆ ಹಾಗೂ ಹೈಡ್ರೋಫ್ರ್ಯಾಕ್ಚರ್ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ಜನರಿಗೆ ಕುಡಿಯುವ ನೀರು ಒದಗಿಸುವುದು ಸರ್ಕಾರದ ಜವಾಬ್ದಾರಿ. ಬರದ ಸಂಕಷ್ಟದಲ್ಲೂ ಪ್ರತಿಯೊಂದು ಪ್ರದೇಶದ ಅಗತ್ಯಕ್ಕೆ ಅನುಗುಣವಾಗಿ ತಕ್ಷಣ ಸ್ಪಂದಿಸುತ್ತಿದ್ದೇವೆ. ಜಾನುವಾರುಗಳು ರೈತರ ಆಸ್ತಿ. ಬರ ಪರಿಸ್ಥಿತಿಯಲ್ಲಿ ಅವುಗಳಿಗೆ ಮೇವು ಮತ್ತು ನೀರಿನ ಕೊರತೆಯಾಗದಂತೆ ನಮ್ಮ ಸರ್ಕಾರ ಆದ್ಯತೆಯಿಂದ ಕ್ರಮ ಕೈಗೊಳ್ಳುತ್ತಿದೆ.
ಮೇವಿನ ಕಿಟ್ಗಳ ವಿತರಣೆಗೆ ಈಗಾಗಲೇ ₹25 ಕೋಟಿ ಬಿಡುಗಡೆ ಮಾಡಲಾಗಿದ್ದು, ಇನ್ನೂ 3ರಿಂದ 4 ಲಕ್ಷ ಮೇವಿನ ಕಿಟ್ ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಕೆಎಂಎಫ್ ಮೂಲಕವೂ ಪ್ರತಿ ಜಿಲ್ಲೆಯಲ್ಲಿ 4ರಿಂದ 5 ಲಕ್ಷ ಮೇವಿನ ಕಿಟ್ ಗಳ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ.
ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ಅಗತ್ಯವಿರುವ ಕಡೆ ಮೇವು ಬೆಳೆಯಲು ರೈತರಿಗೆ ಕಿಟ್ಗಳನ್ನು ಒದಗಿಸಲಾಗುತ್ತಿದೆ. ಪರಿಸ್ಥಿತಿ ಮತ್ತಷ್ಟು ಗಂಭೀರವಾದರೆ ಗೋಶಾಲೆ ಹಾಗೂ ಮೇವು ಬ್ಯಾಂಕ್ಗಳನ್ನು ಆರಂಭಿಸಲು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ.
ಬರ ಸಂಕಷ್ಟದಲ್ಲಿ ರೈತರ ಜೊತೆಗೆ, ಅವರ ಜಾನುವಾರುಗಳ ರಕ್ಷಣೆಯೂ ಸರ್ಕಾರದ ಆದ್ಯತೆಯಾಗಿದೆ.
ಬೆಳೆ ನಷ್ಟದ ಅನಿಶ್ಚಿತತೆಯ ನಡುವೆ ರೈತರಿಗೆ ಬೆಳೆ ವಿಮೆ ಒಂದು ಪ್ರಮುಖ ಭದ್ರತೆಯಾಗಿದೆ. ರೈತರ ಈ ಅಗತ್ಯವನ್ನು ಮನಗಂಡು, ಬೆಳೆ ವಿಮೆ ವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಸರ್ಕಾರ ನಿರಂತರವಾಗಿ ಕ್ರಮ ಕೈಗೊಂಡಿದೆ.
2020–21ರಲ್ಲಿ 15 ಲಕ್ಷ, 2021–22ರಲ್ಲಿ 15 ಲಕ್ಷ, 2024–25ರಲ್ಲಿ 34 ಲಕ್ಷ ರೈತರು ನೋಂದಾಯಿಸಿಕೊಂಡಿದ್ದರೆ, 2026–27ರಲ್ಲಿ ಈ ಸಂಖ್ಯೆ 49 ಲಕ್ಷಕ್ಕೆ ಏರಿಕೆಯಾಗಿದೆ.
ಇದು ಕೇವಲ ನೋಂದಣಿಯ ಸಂಖ್ಯೆಯಲ್ಲ; ಬದಲಿಗೆ ಬೆಳೆ ವಿಮೆಯತ್ತ ರೈತರ ಹೆಚ್ಚುತ್ತಿರುವ ಆಸಕ್ತಿ ಹಾಗೂ ಕೃಷಿಯಲ್ಲಿನ ಅನಿಶ್ಚಿತತೆಯ ನಡುವೆ ಭದ್ರತೆಯ ಅಗತ್ಯವನ್ನು ತೋರಿಸುತ್ತದೆ. ರೈತನ ಬೆವರಿನ ಶ್ರಮಕ್ಕೆ ಭದ್ರತೆ ನೀಡುವ ನಿಟ್ಟಿನಲ್ಲಿ, ಪ್ರತಿಯೊಂದು ಹೆಜ್ಜೆಯಲ್ಲೂ ಸರ್ಕಾರ ರೈತರ ಜೊತೆಗಿರಲಿದೆ ಎಂದು ಡಿಸಿಎಂ ಪರಮೇಶ್ವರ್ ತಿಳಿಸಿದ್ದಾರೆ.

