HomeKarnatakaಅಸ್ಸಾಂ, ಗುಜರಾತ್, ಬಿಹಾರಕ್ಕಿಲ್ಲದ ನಿಯಮ ಕರ್ನಾಟಕಕ್ಕೆ ಏಕೆ? ಕೇಂದ್ರದಿಂದ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದಕ್ಕೆ ಸುಣ್ಣ:...

ಅಸ್ಸಾಂ, ಗುಜರಾತ್, ಬಿಹಾರಕ್ಕಿಲ್ಲದ ನಿಯಮ ಕರ್ನಾಟಕಕ್ಕೆ ಏಕೆ? ಕೇಂದ್ರದಿಂದ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದಕ್ಕೆ ಸುಣ್ಣ: ಈಶ್ವರ ಖಂಡ್ರೆ ಕಿಡಿ

ಬೆಂಗಳೂರು: 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಅನುದಾನ ಬಿಡುಗಡೆ ಮಾಡುವಾಗ ಅಸ್ಸಾಂ, ಬಿಹಾರ, ಗುಜರಾತ್ ಉತ್ತರಖಂಡ್ ರಾಜ್ಯಗಳಿಗೆ ಇಲ್ಲದ ನಿಯಮವನ್ನು ಕರ್ನಾಟಕಕ್ಕೆ ಮಾತ್ರ ಕೇಂದ್ರ ಸರ್ಕಾರ ಅನ್ವಯಿಸುವುದೇಕೆ? ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಪ್ರಶ್ನಿಸಿದ್ದಾರೆ.

ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ಹಣದ ಕೊರತೆ ವಿಚಾರವಾಗಿ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರದ ತಾರತಮ್ಯ ನೀತಿಯೇ ಇದಕ್ಕೆ ಕಾರಣ. ರಾಜ್ಯಕ್ಕೆ ನ್ಯಾಯಯುತವಾಗಿ 2025-26ನೇ ಸಾಲಿಗೆ ಬಿಡುಗಡೆ ಮಾಡಬೇಕಾದ 2186.20 ಕೋಟಿ ರೂ. ನೀಡದೆ ಅನ್ಯಾಯ ಎಸಗಿದೆ ಎಂದರು.

ಹಣಕಾಸು ಆಯೋಗದ ಶಿಫಾರಸಿನಂತೆ ಗ್ರಾಮ ಪಂಚಾಯತಿಗಳಿಗೆ ಬಿಡುಗಡೆ ಮಾಡಲಾಗುವ ಅನುದಾನವನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಕಳಿಸುತ್ತದೆ. ರಾಜ್ಯ ಸರ್ಕಾರ 10 ದಿನಗಳ ಒಳಗಾಗಿ ಗ್ರಾ.ಪಂ.ಗೆ ಬಿಡುಗಡೆ ಮಾಡಬೇಕು. ಇಲ್ಲವೆ ಬಡ್ಡಿ ಸಹಿತ ಪಾವತಿಸಬೇಕು. ಈ ಸ್ವೀಕೃತಿ ವಿವರಗಳನ್ನು ಇ-ಗ್ರಾಮ ಸ್ವರಾಜ್ ಪೋರ್ಟಲ್ ನಲ್ಲಿ ಅಪ್ ಲೋಡ್ ಮಾಡಬೇಕಾಗುತ್ತದೆ. 2024-25ನೇ ಸಾಲಿನಲ್ಲಿ ಗ್ರಾ.ಪಂ.ಗಳಿಗೆ 2133.25 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಇ-ಗ್ರಾಮ್ ಸ್ವರಾಜ್ ಪೋರ್ಟಲ್ ನಲ್ಲಿ 1907 ಕೋಟಿ ಸ್ವೀಕೃತಿ ದಾಖಲಾಗಿದೆ. ವ್ಯತ್ಯಾಸ ಇರುವುದು 225 ಕೋಟಿ ರೂ. ಮಾತ್ರ. ಇದು ಭೌತಿಕವಾಗಿ ಗ್ರಾ.ಪಂ. ತಲುಪಿದೆ. ಕ್ರಿಯಾ ಯೋಜನೆ ತಯಾರಿಸಿ. ಕಾಮಗಾರಿಯೂ ಆಗಿದೆ. ಆದರೆ ತಾಂತ್ರಿಕ ತೊಡಕಿನಿಂದ ಪೋರ್ಟಲ್ ನಲ್ಲಿ ಪ್ರತಿಬಿಂಬಿತವಾಗಿಲ್ಲ. ಇಷ್ಟು ಸಣ್ಣ ಕಾರಣ ಇಟ್ಟುಕೊಂಡು 2186 ಕೋಟಿ ಬಿಡುಗಡೆ ಮಾಡದಿರುವುದು ರಾಜ್ಯಕ್ಕೆ ಮಾಡಿದ ಘೋರ ಅನ್ಯಾಯ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ, ಉತ್ತರ ಖಂಡಕ್ಕೆ 470 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಪೋರ್ಟಲ್ ನಲ್ಲಿ ಸ್ವೀಕೃತಿ ಶೂನ್ಯ. ಆದರೂ ಅವರಿಗೆ 2025-26ನೇ ಸಾಲಿನಲ್ಲಿ ಪೂರ್ತಿ ಅನುದಾನ ಬಿಡುಗಡೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗುಜರಾತ್ ಗೆ ಇದೇ ಸಾಲಿನಲ್ಲಿ 2619 ಕೋಟಿ ಬಿಡುಗಡೆ ಮಾಡಿದ್ದಾರೆ. ಪೋರ್ಟಲ್ ನಲ್ಲಿ 2104 ಕೋಟಿ ಸ್ವೀಕೃತಿ ಆಗಿದೆ. ವ್ಯತ್ಯಾಸ 515 ಕೋಟಿ ಇದ್ದರೂ ಅವರಿಗೆ ಪೂರ್ತಿ ಹಣ ಕೊಟ್ಟಿದ್ದಾರೆ. ಅಸ್ಸಾಂ ರಾಜ್ಯಕ್ಕೆ 1315ಕೋಟಿ ರೂ. ಬಿಡುಗಡೆ ಆಗಿದೆ. ಪೋರ್ಟಲ್ ನಲ್ಲಿ 447 ಕೋಟಿ ರೂ. ಸ್ವೀಕೃತಿ ಇದೆ. ವ್ಯತ್ಯಾಸ 867 ಕೋಟಿ ರೂ. ಇದ್ದರೂ ಅವರಿಗೂ ಪೂರ್ತಿ ಹಣ ಬಿಡುಗಡೆ ಆಗಿದೆ. ಇನ್ನು ಬಿಹಾರ ರಾಜ್ಯಕ್ಕೆ 4109 ಕೋಟಿ ರೂ.ಅನುದಾನ ಬಿಡುಗಡೆ ಆಗಿದೆ. ಪೋರ್ಟಲ್ ನಲ್ಲಿ ಆಗಿರುವ ಸ್ವೀಕೃತಿ 1775 ಕೋಟಿ ರೂ. ಮಾತ್ರ. ವ್ಯತ್ಯಾಸ 2334 ಕೋಟಿ ರೂ. ಇದ್ದರೂ ಅವರಿಗೂ ಪೂರ್ತಿ ಅನುದಾನ ಬಿಡುಗಡೆ ಮಾಡಿದ್ದಾರೆ. ಇದು ತಾರತಮ್ಯ ಅಲ್ಲವೇ? ತಮಗೆ ಬೇಕಾದ ರಾಜ್ಯಗಳಿಗೆ ನಿಯಮದಿಂದ ವಿನಾಯತಿ ನೀಡಿ, ರಾಜ್ಯಕ್ಕೆ ಈ ರೀತಿ ಅನ್ಯಾಯ ಮಾಡುವುದು ಸರಿಯಲ್ಲ. ರಾಜ್ಯ ಬರಪರಿಸ್ಥಿತಿಯಿಂದ ತತ್ತರಿಸುತ್ತಿರುವಾಗ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡದಿರುವುದು ಅಮಾನವೀಯ. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಶೀಘ್ರವೇ ಮನವಿ ಸಲ್ಲಿಸಲಾಗುವುದು ಎಂದೂ ತಿಳಿಸಿದರು.

ಈ ಸಂಬಂಧ ಇಲಾಖೆಯಿಂದ 08.12.2025, 19.01.2026, 25.03.2026, 04.04.2026, 17.04.2026 ರಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಮಾನ್ಯ ಮುಖ್ಯಮಂತ್ರಿಯವರು ಕೂಡ 25.02.2026 ಮತ್ತು 06.04.2026 ಹಾಗೂ ಇತ್ತೀಚೆಗೆ 16.07.2026ರಂದು ಕೇಂದ್ರ ಹಣಕಾಸು ಸಚಿವರಿಗೆ ಮತ್ತು ಸಂಬಂಧಿತ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ತಾವು ಕೂಡ ಎಲ್ಲ ಸಂಸದರಿಗೆ ಪತ್ರ ಬರೆದು ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದರೂ ಹಣ ಬಿಡುಗಡೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular