ಬೆಂಗಳೂರು: ಗೃಹಲಕ್ಷ್ಮಿ ಯೋಜನೆಗೆ ಪತಿ ಆಧಾರ್ ಕಾರ್ಡ್ ಕೂಡ ಕಡ್ಡಾಯಗೊಳಿಸುವ ಹೊಸ ಮಾರ್ಗಸೂಚಿ ಸಿದ್ಧಪಡಿಸಲಾಗಿದ್ದು, ಎಸ್ಐಆರ್ ಬಳಿಕ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಮರು ಪರಿಶೀಲನೆ ನಡೆಸಲಾಗುವುದು.
ಗೃಹಲಕ್ಷ್ಮಿ ಯೋಜನೆಗೆ ಮನೆಯ ಯಜಮಾನಿಯ ಆಧಾರ್ ಕಾರ್ಡ್ ಮಾತ್ರವಲ್ಲದೇ, ಯಜಮಾನನ ಆಧಾರ್ ಲಿಂಕ್ ಕೂಡ ಕಡ್ಡಾಯಗೊಳಿಸಲಾಗಿದೆ. ಸಾಲ ಇಲ್ಲದಿರುವ ಬ್ಯಾಂಕ್ ಖಾತೆಯನ್ನೇ ಹೊಂದಿರಬೇಕು. ಆಧಾರ್ ಕಾರ್ಡ್ ನಲ್ಲಿ ಇರುವಂತೆ ಫಲಾನುಭವಿಗಳ ಹೆಸರು ಮತ್ತು ವಿಳಾಸ ಇರಬೇಕು. ಇಲ್ಲದಿದ್ದರೆ ಗೃಹಲಕ್ಷ್ಮಿ ಯೋಜನೆಯ ಲಾಭ ಸಿಗುವುದಿಲ್ಲವೆಂದು ಹೇಳಲಾಗಿದೆ.
ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿರುವ ಗೃಹಲಕ್ಷ್ಮಿ ಯೋಜನೆಯ ಮರು ಪರಿಶೀಲನೆಯೊಂದಿಗೆ ಅರ್ಹರನ್ನು ಮಾತ್ರ ಯೋಜನೆಗೆ ಪರಿಗಣಿಸಲು ಹಲವು ಅಂಶ ಒಳಗೊಂಡ ಹೊಸ ಮಾರ್ಗಸೂಚಿಯನ್ನು ಸರ್ಕಾರ ರೂಪಿಸಿದೆ.
ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ, ಪಡಿತರ ಚೀಟಿ ಪರಿಶೀಲನೆ, ಫೇಶಿಯಲ್ ದೃಢೀಕರಣವನ್ನು ಕೂಡ ಫಲಾನುಭವಿಗಳಿಗೆ ಕಡ್ಡಾಯಗೊಳಿಸಲಾಗಿದೆ. ಇದಕ್ಕಾಗಿ ಗಣತಿದಾರರನ್ನು ನಿಯೋಜಿಸಲಾಗಿದ್ದು, ಗಣತಿದಾರರೇ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಇದಕ್ಕಾಗಿ 17 ಪ್ರಶ್ನೆಗಳ ಹೊಸ ಅರ್ಜಿಯನ್ನು ಕೂಡ ಸಿದ್ಧಪಡಿಸಲಾಗಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒಪ್ಪಿಗೆ ನೀಡಿದ ಕೂಡಲೇ ಮರು ಪರಿಶೀಲನೆ ಕಾರ್ಯವನ್ನು ಮುಂದುವರಿಸಲಾಗುವುದು. ಮತದಾರರ ಅಂತಿಮ ಪಟ್ಟಿ ಪ್ರಕಟವಾದ ಬಳಿಕ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಮರು ಪರಿಶೀಲನೆ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಫಲಾನುಭವಿಗಳ ಅರ್ಹತೆ ಪರಿಶೀಲಿಸಿ ನೈಜ ಫಲಾನುಭವಿಗಳಿಗೆ ಮಾತ್ರ ಸೌಲಭ್ಯವನ್ನು ಮುಂದುವರೆಸುವ ಉದ್ದೇಶದಿಂದ ರಾಜ್ಯ ಸರ್ಕಾರ ಕಾರ್ಯಾಚರಣೆ ವಿಧಾನ ಮತ್ತು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅದೀನದಲ್ಲಿ ಪರಿಶೀಲನಾ ಪ್ರಕ್ರಿಯೆ ನಡೆಯಲಿದೆ. ನಗರ ಮತ್ತು ಗ್ರಾಮೀಣ ಪ್ರದೇಶ ಫಲಾನುಭವಿಗಳ ಮನೆ ಮನೆ ಸಮೀಕ್ಷೆ ದಾಖಲೆಗಳ ಪರಿಶೀಲನೆ ಬಯೋಮೆಟ್ರಿಕ್ ಅಥವಾ ಫೇಶಿಯಲ್ ದೃಢೀಕರಣ, ಬ್ಯಾಂಕ್ ಖಾತೆ ವಿವರಗಳ ಪರಿಶೀಲನೆಗೆ ಆದ್ಯತೆ ನೀಡಲಾಗುವುದು ಎಂದು ಹೇಳಲಾಗಿದೆ.
ಗೃಹಲಕ್ಷ್ಮಿ ಅರ್ಹ ಫಲಾನುಭವಿಗಳಿಗೆ ಬಯೋಮೆಟ್ರಿಕ್ ಮರುಪರಿಶೀಲನೆ
ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯಡಿ ಅರ್ಹ ಫಲಾನುಭವಿಗಳ ಬಯೋಮೆಟ್ರಿಕ್ ದೃಢೀಕರಿಸುವ ಮೂಲಕ ಮರುಪರಿಶೀಲನೆ ನಡೆಸಲು ಪ್ರಮಾಣಿತ ಕಾರ್ಯಾಚರಣಾ ವಿಧಾನ ಜಾರಿಗೆ ತರಲಾಗುವುದು.
ಗೃಹಲಕ್ಷ್ಮಿ ಫಲಾನುಭವಿಗಳ ವಿವರಗಳನ್ನು ಪರಿಶೀಲಿಸಿ, ಅವರ ಪ್ರಸ್ತುತ ಸ್ಥಿತಿಯನ್ನು ದೃಢಿಕರಿಸುವ ಉದ್ದೇಶದಿಂದ ಫಲಾನುಭವಿಗಳ ಮರುಪರಿಶೀಲನಾ ಕಾರ್ಯವನ್ನು ನಿಯೋಜಿತ ಗಣತಿದಾರರು(Enumerators) ಹಾಗೂ ಗ್ಯಾರಂಟಿ ಸಮಿತಿ(GC) ಸದಸ್ಯರು ಕಡ್ಡಾಯವಾಗಿ ಮನೆ-ಮನೆಗೆ ಭೇಟಿ ನೀಡುವರು. ಮೊಬೈಲ್ ಅಪ್ಲಿಕೇಶನ್ ಜಿಪಿಎಸ್ ಗುರುತಿನೊಂದಿಗೆ ಛಾಯಾಚಿತ್ರದ ಸಾಕ್ಷ್ಯ ಆಧಾರ್ ಆಧಾರಿತ ಮುಖದ ದೃಢಿಕರಣ ಹಾಗೂ ಪರ್ಯಾಯ ಸಹಾಯಕ ವ್ಯವಸ್ಥೆಯಾಗಿ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಇತರೆ ನಿಗದಿತ ಕೇಂದ್ರಗಳ ಸೇವೆಯನ್ನು ಬಳಸಲಾಗುವುದು.
ಗೃಹಲಕ್ಷ್ಮಿ ಯೋಜನೆಯ ಅರ್ಹ ಫಲಾನುಭವಿಗಳ ಮರುಪರಿಶೀಲನೆ ಕಾರ್ಯವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೈಗೊಂಡಿದ್ದು, ಕಾರ್ಯಾರಂಭವಾದ ದಿನಾಂಕದಿಂದ ಒಂದು ತಿಂಗಳೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಹೇಳಲಾಗಿದೆ.
ಮರುಪರಿಶೀಲನೆ ಪ್ರಕ್ರಿಯೆಯ ತಾಂತ್ರಿಕ ಪಾಲುದಾರ ಸಂಸ್ಥೆಯಾಗಿ ಪ್ರಜಾಸೇವಾ ಇಲಾಖೆಯ ಅಧೀನದಲ್ಲಿರುವ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯ(EDCS) ಕಾರ್ಯನಿರ್ವಹಿಸಲಿದೆ. ಈ ಪ್ರಕ್ರಿಯೆಯಲ್ಲಿ ಮನೆ-ಮನೆಗೆ ಭೇಟಿ ನೀಡುವುದು ಕಡ್ಡಾಯವಾಗಿದ್ದು, ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಇತರೆ ನಿಗದಿತ ಸೇವಾ ಕೇಂದ್ರಗಳು ಕೇವಲ ಸಹಾಯಕ ಅಥವಾ ಪರ್ಯಾಯ ವ್ಯವಸ್ಥೆಯಾಗಿ ಮಾತ್ರ ಬಳಸಲಾಗುತ್ತದೆ.
ಮರುಪರಿಶೀಲನೆ ಈಗಾಗಲೇ ಗುರುತಿಸಲ್ಪಟ್ಟಿರುವ ಅಸ್ತಿತ್ವದಲ್ಲಿರುವ ಫಲಾನುಭವಿಗಳಿಗೆ ಮಾತ್ರ ಸೀಮಿತವಾಗಿದ್ದು, ಹೊಸ ನೋಂದಣಿಯನ್ನು ಈ ಕಾರ್ಯಾಚರಣೆಯ ವ್ಯಾಪ್ತಿಗೆ ಒಳಪಡಿಸಲಾಗುವುದಿಲ್ಲ ಎಂದು ಹೇಳಲಾಗಿದೆ.

