HomeInternational5 ನೇ ಬಾರಿ ಕಳೆದುಕೊಂಡರೂ ಮತ್ತೆ ಸಿಕ್ಕ ಐಫೋನ್‌ ; ಜಪಾನಿಗರ ಪ್ರಾಮಾಣಿಕತೆಗೆ ನೆಟ್ಟಿಗರ ಸಲಾಂ...

5 ನೇ ಬಾರಿ ಕಳೆದುಕೊಂಡರೂ ಮತ್ತೆ ಸಿಕ್ಕ ಐಫೋನ್‌ ; ಜಪಾನಿಗರ ಪ್ರಾಮಾಣಿಕತೆಗೆ ನೆಟ್ಟಿಗರ ಸಲಾಂ !

ಜನನಿಬಿಡ ಸಾರ್ವಜನಿಕ ಸ್ಥಳಗಳಲ್ಲಾಗಲಿ ಅಥವಾ ಕಡಲತೀರಗಳಲ್ಲಾಗಲಿ ದುಬಾರಿ ಸ್ಮಾರ್ಟ್‌ಫೋನ್ ಕಳೆದುಹೋದರೆ ಅದು ಮರಳಿ ಸಿಗುವ ಭರವಸೆ ಬಹುತೇಕ ಶೂನ್ಯ. ಆದರೆ, ಜಪಾನ್‌ನಲ್ಲಿ ನೆಲೆಸಿರುವ ಭಾರತೀಯ ಮಹಿಳೆಯೊಬ್ಬರು ತಮ್ಮ ಅತ್ಯಂತ ದುಬಾರಿ ಐಫೋನ್ 16 ಪ್ರೋ ಮೊಬೈಲ್ ಅನ್ನು ಬರೋಬ್ಬರಿ ಐದನೇ ಬಾರಿಗೆ ಮರೆತುಬಂದರೂ, ಅದು ಯಥಾವತ್ತಾಗಿ ಮರಳಿ ಸಿಕ್ಕಿರುವ ಅಚ್ಚರಿಯ ಅನುಭವವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದು ಜಪಾನ್ ದೇಶದ ಸಾರ್ವಜನಿಕ ಸುರಕ್ಷತೆ ಹಾಗೂ ಅಲ್ಲಿನ ಜನರ ಪ್ರಾಮಾಣಿಕತೆಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.

ತಮ್ಮ ಪತಿಯೊಂದಿಗೆ ಜಪಾನ್‌ನಲ್ಲಿ ವಾಸವಾಗಿರುವ ಪ್ರಗತಿ ಎಂಬ ಭಾರತೀಯ ಮಹಿಳೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ತಾವು ಸಾರ್ವಜನಿಕ ಸ್ಥಳಗಳಲ್ಲಿ ಫೋನ್ ಅನ್ನು ಸದಾ ಕೈಯಲ್ಲೇ ಹಿಡಿದುಕೊಳ್ಳುವ ಅಭ್ಯಾಸ ಹೊಂದಿಲ್ಲದ ಕಾರಣ, ಅದನ್ನು ಎಲ್ಲೆಂದರಲ್ಲಿ ಮರೆತುಬಿಡುವುದು ಸಾಮಾನ್ಯವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಇತ್ತೀಚೆಗೆ ರಾತ್ರಿ ಊಟದ ನಂತರ ಪತಿಯೊಂದಿಗೆ ಸಮುದ್ರ ತೀರಕ್ಕೆ ವಾಕಿಂಗ್ ತೆರಳಿದ್ದಾಗ, ಅಲ್ಲಿಯೇ ಕುಳಿತು ಹರಟಿದ ಜಾಗದಲ್ಲಿ ತಮ್ಮ ಐಫೋನ್ 16 ಪ್ರೋ ಅನ್ನು ಮರೆತು ಮನೆಗೆ ಮರಳಿದ್ದರು.

ಮನೆಗೆ ಬಂದ ಹಲವು ಗಂಟೆಗಳ ನಂತರ ಫೋನ್ ಇಲ್ಲದಿರುವುದು ಅವರ ಗಮನಕ್ಕೆ ಬಂದಿದೆ. ತಕ್ಷಣವೇ ಆ್ಯಪಲ್‌ನ ‘ಫೈಂಡ್ ಮೈ’ (Find My) ಆ್ಯಪ್ ಮೂಲಕ ಟ್ರ್ಯಾಕ್ ಮಾಡಿದಾಗ, ಮೊಬೈಲ್ ಸುಮಾರು 600 ಮೀಟರ್ ದೂರದ ಕಡಲತೀರದಲ್ಲೇ ಇರುವುದು ಪತ್ತೆಯಾಗಿದೆ. ಮಧ್ಯರಾತ್ರಿಯ ಸಮಯವಾಗಿದ್ದರೂ, ಟ್ರ್ಯಾಕರ್ ತೋರಿಸಿದ ಸ್ಥಳಕ್ಕೆ ಪ್ರಗತಿ ತೆರಳಿದ್ದಾರೆ. ಅಲ್ಲಿಗೆ ಹೋದಾಗ ಯಾರೊಬ್ಬರೂ ಫೋನ್ ಮುಟ್ಟದೆ, ತಾವು ಎಲ್ಲಿ ಬಿಟ್ಟು ಹೋಗಿದ್ದರೋ ಅದೇ ಸ್ಥಳದಲ್ಲಿ ಮೊಬೈಲ್ ಸುರಕ್ಷಿತವಾಗಿ ಬಿದ್ದಿರುವುದು ಕಂಡುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದು ಮೊದಲ ಬಾರಿಯಲ್ಲ, ಈ ಹಿಂದೆ ತರಕಾರಿ ಮಾರುಕಟ್ಟೆಯಲ್ಲಿ ಮತ್ತು ಪೊಲೀಸ್ ಠಾಣೆಯಿಂದ ಸೇರಿದಂತೆ ಒಟ್ಟು ನಾಲ್ಕು ಬಾರಿ ಕಳೆದುಹೋಗಿದ್ದ ಫೋನ್ ಮರಳಿ ಸಿಕ್ಕಿತ್ತು, ಇದೀಗ ಐದನೇ ಬಾರಿಯೂ ಯಶಸ್ವಿಯಾಗಿ ಸಿಕ್ಕಿದೆ ಎಂದು ಪ್ರಗತಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. “ನನ್ನ ಐಫೋನ್ 16 ಪ್ರೋ ಜಪಾನ್‌ನಲ್ಲಿ ಮತ್ತೆ ಕಳೆದುಹೋಯಿತು, ಇದು 5ನೇ ಬಾರಿ. ಆದರೆ ಮತ್ತೆ ಅದು ನನಗೆ ಸಿಕ್ಕಿತು. ಇಂತಹ ಅದ್ಭುತ ಪ್ರಾಮಾಣಿಕತೆ ಬಹುಶಃ ಜಪಾನ್‌ನಲ್ಲಿ ಮಾತ್ರ ಸಾಧ್ಯ” ಎಂದು ಅವರು ಬರೆದುಕೊಂಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದ್ದು, ಭಾರತೀಯ ನೆಟ್ಟಿಗರು ಜಪಾನಿಯರ ಪ್ರಾಮಾಣಿಕತೆಯನ್ನು ಕೊಂಡಾಡಿದ್ದಾರೆ. “ನಮ್ಮಲ್ಲಿ ಮೊಬೈಲ್ ಜೊತೆಗೆ ಕಳ್ಳನೂ ಮಾಯವಾಗುತ್ತಾನೆ, ಆದರೆ ಜಪಾನ್‌ನಲ್ಲಿ ಕಳ್ಳತನವನ್ನು ಸಾಮಾಜಿಕವಾಗಿ ಅತ್ಯಂತ ಕೀಳಾಗಿ ಕಾಣುವುದರಿಂದ ಅಲ್ಲಿ ಸುರಕ್ಷತೆ ಹೆಚ್ಚು” ಎಂದು ಹಲವು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಕಳ್ಳತನದ ಭಯವಿಲ್ಲದ ಪ್ರಾಮಾಣಿಕ ಸಮಾಜ ಹೇಗಿರುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular