ಬಿಹಾರದ ಜಮುಯಿ ಜಿಲ್ಲೆಯಲ್ಲಿ ರಾತ್ರಿಯ ವೇಳೆ ಯುವತಿಯೊಬ್ಬಳು ಮತ್ತು ಆಕೆಯ ಜೊತೆಗಿದ್ದ ಯುವಕನಿಗೆ ಸಾರ್ವಜನಿಕವಾಗಿ ದೌರ್ಜನ್ಯ ಎಸಗಿ, ಅವಮಾನಿಸಿರುವ ಆಘಾತಕಾರಿ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದೆ. ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಈ ಭೀಕರ ದೃಶ್ಯಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಒತ್ತಾಯಿಸಿದ ಬೆನ್ನಲ್ಲೇ ಬಿಹಾರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ, ರಾತ್ರಿಯ ವೇಳೆ ಗುಂಪೊಂದು ಯುವ ಜೋಡಿಯನ್ನು ಸುತ್ತುವರಿದು ಕಿರುಕುಳ ನೀಡುತ್ತಿರುವುದು ಕಂಡುಬಂದಿದೆ. ಯುವಕನನ್ನು ಬಲವಂತವಾಗಿ ಪಕ್ಕಕ್ಕೆ ಎಳೆದಾಡಿದ ಪುಂಡರ ಗುಂಪು, ಯುವತಿಯನ್ನು ಒಂಟಿ ಮಾಡಿ ಆಕೆಯನ್ನು ಬಲವಂತವಾಗಿ ಎತ್ತೊಯ್ಯಲು ಯತ್ನಿಸಿದೆ. ಈ ವೇಳೆ ಯುವತಿ ಕಿರುಚಾಡುತ್ತಾ ಪ್ರತಿರೋಧ ಒಡ್ಡಿದ್ದು, ಯುವಕ ಆಕೆಯನ್ನು ರಕ್ಷಿಸಲು ಮುಂದಾಗಿದ್ದಾನೆ. ಕೊನೆಗೆ ಇಬ್ಬರೂ ಆ ಸ್ಥಳದಿಂದ ತಪ್ಪಿಸಿಕೊಂಡು ಸ್ಕೂಟರ್‌ನಲ್ಲಿ ಸ್ವಲ್ಪ ದೂರ ತೆರಳಿದ್ದಾರೆ. ಆದರೆ, ಬೆನ್ನಟ್ಟಿ ಬಂದ ಪುಂಡರು ಮತ್ತೆ ಅವರನ್ನು ತಡೆದು ಜಗಳ ತೆಗೆದಿದ್ದು, ಜೋಡಿಯು ಕೈಮುಗಿದು ಬೇಡಿಕೊಂಡ ನಂತರ ಅವರನ್ನು ಕಳುಹಿಸಿಕೊಟ್ಟಿರುವುದು ಮತ್ತೊಂದು ವೀಡಿಯೊದಲ್ಲಿ ದಾಖಲಾಗಿದೆ.
ಈ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಇದನ್ನು ‘ಮೋರಲ್ ಪೋಲಿಸಿಂಗ್’ ಮತ್ತು ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಎಂದು ಜನರು ಖಂಡಿಸಿದ್ದಾರೆ. ವೀಡಿಯೊ ವೈರಲ್ ಆಗುತ್ತಿದ್ದಂತೆ ಜಾಗೃತರಾದ ಬಿಹಾರ ರಾಜ್ಯ ಪೊಲೀಸರು ಜಮುಯಿ ಪೊಲೀಸರಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವೀಡಿಯೊದಲ್ಲಿರುವ ಪುಂಡರನ್ನು ಪತ್ತೆಹಚ್ಚಲು ಮತ್ತು ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

