HomeInternational309 ಕೆಜಿ ತೂಕವಿದ್ದ ವ್ಯಕ್ತಿ ಬರೋಬ್ಬರಿ 203 ಕೆಜಿ ಇಳಿಸಿದ್ದು ಹೇಗೆ ? ಶಸ್ತ್ರಚಿಕಿತ್ಸೆ ಇಲ್ಲದೆಯೇ...

309 ಕೆಜಿ ತೂಕವಿದ್ದ ವ್ಯಕ್ತಿ ಬರೋಬ್ಬರಿ 203 ಕೆಜಿ ಇಳಿಸಿದ್ದು ಹೇಗೆ ? ಶಸ್ತ್ರಚಿಕಿತ್ಸೆ ಇಲ್ಲದೆಯೇ ಯಶಸ್ಸು ಸಾಧಿಸಿದ ವ್ಯಕ್ತಿ !

ಅತಿಯಾದ ದೇಹದ ತೂಕದಿಂದಾಗಿ ತೆರೆದ ಹೃದಯ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಪ್ರಾಣಾಪಾಯ ಎದುರಾಗಬಹುದು ಎಂಬ ವೈದ್ಯರ ಕಠಿಣ ಎಚ್ಚರಿಕೆಯನ್ನು ಸವಾಲಾಗಿ ಸ್ವೀಕರಿಸಿದ ವ್ಯಕ್ತಿಯೊಬ್ಬರು, ಯಾವುದೇ ಶಸ್ತ್ರಚಿಕಿತ್ಸೆ ಅಥವಾ ಆಧುನಿಕ ಚುಚ್ಚುಮದ್ದುಗಳ ಮೊರೆ ಹೋಗದೆ ಬರೋಬ್ಬರಿ 203 ಕೆಜಿ ತೂಕ ಇಳಿಸಿಕೊಂಡು ಎಲ್ಲರ ಹುಬ್ಬೇರಿಸಿದ್ದಾರೆ. ಕುಟುಂಬದೊಂದಿಗೆ ದೀರ್ಘಕಾಲ ಬದುಕಬೇಕು ಎಂಬ ಒಂದೇ ಒಂದು ಸಂಕಲ್ಪ ಅವರ ಇಡೀ ಜೀವನಶೈಲಿಯನ್ನೇ ಆಮೂಲಾಗ್ರವಾಗಿ ಬದಲಾಯಿಸಿದೆ.

ಬ್ರಿಟನ್‌ನ ವಾರ್ವಿಕ್‌ಷೈರ್ ಮೂಲದ 46 ವರ್ಷದ ಮಾರ್ಕ್ ಬೈಲಿ ಅವರು ತಮ್ಮ 6 ಅಡಿ 8 ಇಂಚಿನ ದೈತ್ಯ ಎತ್ತರ ಹಾಗೂ ಅತಿಯಾದ ಗಾತ್ರದಿಂದಾಗಿ ಬಾಲ್ಯದಿಂದಲೂ ಗಮನ ಸೆಳೆದಿದ್ದರು. ಇವರ ದೇಹದ ತೂಕ ಗರಿಷ್ಠ ಮಟ್ಟ ತಲುಪಿದಾಗ ಬರೋಬ್ಬರಿ 309 ಕೆಜಿ ತೂಗುತ್ತಿದ್ದರು. ಇವರಿಗೆ ತೊಡಲು 7ಎಕ್ಸ್‌ಎಲ್ ಗಾತ್ರದ ಉಡುಪುಗಳು ಹಾಗೂ 72 ಇಂಚಿನ ಸೊಂಟದ ಸುತ್ತಳತೆಯ ಪ್ಯಾಂಟ್‌ಗಳು ಬೇಕಾಗಿದ್ದವು.

ದಿನವೊಂದಕ್ಕೆ ಸುಮಾರು 7,500 ಕ್ಯಾಲೋರಿಗಳಷ್ಟು ಜಂಕ್ ಫುಡ್ ಸೇವಿಸುತ್ತಿದ್ದ ಇವರು, ಬೆಳಗಿನ ಉಪಾಹಾರದಲ್ಲೇ ಸಾಸೇಜ್‌ಗಳು, ಬೇಕನ್, ಮೊಟ್ಟೆಗಳು ಮತ್ತು ಚಾಕೊಲೇಟ್‌ಗಳನ್ನು ತಿನ್ನುತ್ತಿದ್ದರು. ಮಧ್ಯಾಹ್ನ ಬರ್ಗರ್, ಫ್ರೈಸ್ ಹಾಗೂ ರಾತ್ರಿ ಕಬಾಬ್, ಚೀಸ್, ಬಿಸ್ಕೆಟ್‌ಗಳು ಮತ್ತು ಮದ್ಯವನ್ನು ಅತಿಯಾಗಿ ಸೇವಿಸುತ್ತಿದ್ದರು. ಅತಿಯಾದ ತೂಕ ಹಾಗೂ ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದ ಇವರಿಗೆ, 2021 ರ ಅಕ್ಟೋಬರ್‌ನಲ್ಲಿ ತಪಾಸಣೆ ನಡೆಸಿದಾಗ ಹೃದಯದ ಕವಾಟದ ದೋಷ ಪತ್ತೆಯಾಗಿತ್ತು. ತಕ್ಷಣವೇ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕೆಂದು ಸೂಚಿಸಿದ ಹೃದ್ರೋಗ ತಜ್ಞರು, ಇಷ್ಟೊಂದು ಬೃಹತ್ ತೂಕದಲ್ಲಿ ಶಸ್ತ್ರಚಿಕಿತ್ಸೆ ನಡೆಸಿದರೆ ಆಪರೇಷನ್ ಮೇಜಿನ ಮೇಲಿಂದ ಬದುಕುಳಿದು ಬರುವ ಸಾಧ್ಯತೆ ತೀರಾ ಕಡಿಮೆ ಎಂದು ಎಚ್ಚರಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಮ್ಮ ಪತ್ನಿ ಹಾಗೂ ಮೂವರು ಮಕ್ಕಳ ಭವಿಷ್ಯಕ್ಕಾಗಿ ಬದುಕಲೇಬೇಕೆಂದು ನಿರ್ಧರಿಸಿದ ಮಾರ್ಕ್, ಹೊಟ್ಟೆಯ ಗಾತ್ರ ಕಡಿಮೆ ಮಾಡುವ ಯಾವುದೇ ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಅಥವಾ ತೂಕ ಇಳಿಸುವ ಚುಚ್ಚುಮದ್ದುಗಳನ್ನು ನಿರಾಕರಿಸಿದರು. ಸಂಪೂರ್ಣ ನೈಸರ್ಗಿಕ ಹಾದಿ ಆಯ್ದುಕೊಂಡ ಅವರು, ಜಂಕ್ ಫುಡ್‌ಗಳನ್ನು ತ್ಯಜಿಸಿ ಕ್ಯಾಲೋರಿ ಸೇವನೆಯನ್ನು ಕಡಿತಗೊಳಿಸಿದರು. ವಾರಕ್ಕೆ 2 ದಿನ ಜಿಮ್‌ಗೆ ತೆರಳಿ ವ್ಯಾಯಾಮ ಆರಂಭಿಸಿದರು. ಕೇವಲ 4 ವರ್ಷಗಳ ಸತತ ಪರಿಶ್ರಮದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮುನ್ನವೇ ಬರೋಬ್ಬರಿ 177 ಕೆಜಿ ತೂಕ ಇಳಿಸಿಕೊಂಡರು.

2025 ರ ಅಕ್ಟೋಬರ್ ತಿಂಗಳಲ್ಲಿ ಕೋವೆಂಟ್ರಿ ಆಸ್ಪತ್ರೆಯಲ್ಲಿ ವೈದ್ಯರು ಯಶಸ್ವಿಯಾಗಿ 7 ಗಂಟೆಗಳ ಕಾಲ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಿದರು. ಶಸ್ತ್ರಚಿಕಿತ್ಸೆಯ ನಂತರವೂ ತಮ್ಮ ಪ್ರಯತ್ನ ಮುಂದುವರಿಸಿದ ಮಾರ್ಕ್, ಪುನಶ್ಚೇತನ ಕೇಂದ್ರದ ಮಾರ್ಗದರ್ಶನದಲ್ಲಿ ವ್ಯಾಯಾಮ ನಡೆಸಿ ಹೆಚ್ಚುವರಿಯಾಗಿ ಮತ್ತಷ್ಟು ತೂಕ ಕಳೆದುಕೊಂಡರು. ಒಟ್ಟಾರೆಯಾಗಿ 203 ಕೆಜಿ ತೂಕ ಇಳಿಸಿಕೊಂಡಿರುವ ಅವರೀಗ 106 ಕೆಜಿ ತೂಗುತ್ತಿದ್ದಾರೆ. ಅವರ ಸೊಂಟದ ಸುತ್ತಳತೆ 72 ರಿಂದ 38 ಇಂಚಿಗೆ ಇಳಿದಿದ್ದು, ಬಟ್ಟೆ ಮತ್ತು ಪಾದರಕ್ಷೆಗಳ ಅಳತೆಯಲ್ಲೂ ಭಾರಿ ಬದಲಾವಣೆಯಾಗಿದೆ.

ತಮಗೆ ಮರುಜನ್ಮ ನೀಡಿದ ವೈದ್ಯಕೀಯ ತಂಡಕ್ಕೆ ಕೃತಜ್ಞತೆ ಸಲ್ಲಿಸಲು ಇತ್ತೀಚೆಗೆ ಕೆಸರು, ನೀರು ಹಾಗೂ ಗೋಡೆ ಹತ್ತುವಂತಹ ಕಠಿಣ ಅಡೆತಡೆಗಳಿದ್ದ 5 ಕಿಲೋಮೀಟರ್ ಸಾಹಸಮಯ ಓಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಪ್ರಸ್ತುತ ಶುಂಠಿ, ಅರಿಶಿನ, ಸೇಬು ಸೈಡರ್ ವಿನೆಗರ್, ಸಮೃದ್ಧ ಪ್ರೋಟೀನ್ ಮತ್ತು ತಾಜಾ ತರಕಾರಿಗಳನ್ನೊಳಗೊಂಡ ಸಾತ್ವಿಕ ಆಹಾರ ಪದ್ಧತಿ ಪಾಲಿಸುತ್ತಿರುವ ಮಾರ್ಕ್, ಉತ್ತಮ ಜೀವನಶೈಲಿಯಿಂದ ಅಸಾಧ್ಯವಾದುದನ್ನು ಸಾಧ್ಯವಾಗಿಸಿ ತೋರಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular