ದಾವಣಗೆರೆ: ರಾಜ್ಯದ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಶೋಷಿತ ಸಮುದಾಯಗಳಿಗೆ ಸಮರ್ಪಕ ಅವಕಾಶ ದೊರೆಯುವ ಅಗತ್ಯವಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ದಾವಣಗೆರೆ ಜಿಲ್ಲಾ ಛಲವಾದಿ ಮಹಾಸಭಾ ವತಿಯಿಂದ ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನ ಎಸ್.ಎಸ್. ಮಲ್ಲಿಕಾರ್ಜುನ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ 2025-26ನೇ ಸಾಲಿನಲ್ಲಿ ಅತಿಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಅವರು ಮಾತನಾಡಿದರು.
ಶಿಕ್ಷಣವು ವ್ಯಕ್ತಿಯ ಜೀವನವನ್ನಷ್ಟೇ ಅಲ್ಲ, ಇಡೀ ಸಮಾಜ ಮತ್ತು ದೇಶವನ್ನೇ ಪರಿವರ್ತಿಸುವ ಶಕ್ತಿಯಾಗಿದೆ. ಹಿಂದೆ ಶಿಕ್ಷಣದಿಂದ ವಂಚಿತರಾಗಿದ್ದ ಸಮುದಾಯಗಳ ಮಕ್ಕಳು ಇಂದು ಶೇ.98, ಶೇ.100ರಷ್ಟು ಅಂಕ ಗಳಿಸುತ್ತಿರುವುದು ಅವಕಾಶ ದೊರೆತರೆ ನಾವು ಯಾರಿಗಿಂತಲೂ ಕಡಿಮೆ ಇಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.
ಭಗವಾನ್ ಬುದ್ಧ, ಬಸವೇಶ್ವರರು ಹಾಗೂ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳು ಒಂದು ಸಮುದಾಯಕ್ಕಾಗಲಿ, ಭಾರತಕ್ಕಾಗಲಿ ಸೀಮಿತವಾದವುಗಳಲ್ಲ. ಸಮಾನತೆ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಈ ಚಿಂತನೆಗಳು ಇಡೀ ಮಾನವ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಹೇಳಿದ್ದಾರೆ.
ಅಸಮಾನತೆಯನ್ನು ಪ್ರತಿಪಾದಿಸುವ, ವರ್ಗೀಕರಣದ ಮೂಲಕ ಮನುಷ್ಯರನ್ನು ಕೀಳಾಗಿ ಕಾಣುವ ವ್ಯವಸ್ಥೆ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯವಿಲ್ಲ. ಡಾ. ಅಂಬೇಡ್ಕರ್ ಅವರು ತಮ್ಮ ಜೀವನದಲ್ಲೇ ಅವಮಾನ ಮತ್ತು ಸಾಮಾಜಿಕ ತಿರಸ್ಕಾರವನ್ನು ಅನುಭವಿಸಿದ್ದರು. ಆದರೆ ಅದರಿಂದ ಯಾರನ್ನೂ ದ್ವೇಷಿಸದೆ, ತಿರಸ್ಕಾರಕ್ಕೊಳಗಾದ ಹಾಗೂ ಸಂಕೋಲೆಯಲ್ಲಿ ಸಿಲುಕಿದ್ದ ಜನರನ್ನು ಸಾಮಾಜಿಕವಾಗಿ ಮೇಲಕ್ಕೆತ್ತುವ ಕೆಲಸವನ್ನು ಮಾಡಿದರು ಎಂದರು.
ಒಂದು ಕಾಲದಲ್ಲಿ ಕೆಲವು ಸಮುದಾಯಗಳಿಗೆ ಶಿಕ್ಷಣವೇ ನಿಷಿದ್ಧವಾಗಿತ್ತು. ಸಂಸ್ಕೃತ ಕೇಳಿದರೆ, ಅವರ ಕಿವಿಗೆ ಸೀಸ ಬಿಡುತ್ತಿದ್ದರು, ಶಿಕ್ಷಣ ಎಂಬುದು ಮೈಲಿಗಟ್ಟಲೆ ದೂರ ಇತ್ತು. ಶಿಕ್ಷಣ ಕಲಿಯಬಾರದು ಎಂದು ಕಟ್ಟಪ್ಪಣೆ ಮಾಡಲಾಗಿತ್ತು. ಅಂತಹ ಹಿನ್ನೆಲೆಯಿಂದ ಬಂದ ಮಕ್ಕಳು ಇಂದು ಅತಿ ಹೆಚ್ಚು ಅಂಕ ಪಡೆದು ಸಾಧನೆ ಮಾಡುತ್ತಿದ್ದಾರೆ. ಶೇ. 98, ಶೇ 100ರಷ್ಟು ಅಂಕ ಪಡೆಯುತ್ತಿದ್ದಾರೆ. ಇದಕ್ಕೆ ಕಾರಣ ಅವಕಾಶ. ಉತ್ತಮ ಅವಕಾಶ ಮತ್ತು ಪ್ರೋತ್ಸಾಹ ದೊರೆತರೆ ಇನ್ನಷ್ಟು ಸಾಧನೆ ಮಾಡಲು ಸಾಧ್ಯ. ಅಂತಹ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸುವುದು ಸಮಾಜದ ಜವಾಬ್ದಾರಿಯಾಗಿದೆ ಎಂದರು.
ಶಿಕ್ಷಣವಿಲ್ಲದೆ ಬದಲಾವಣೆ ಸಾಧ್ಯವಿಲ್ಲ:
ನೀವು ವಿದ್ಯಾವಂತರಾಗುವವರೆಗೆ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಬದಲಾವಣೆ ಸಾಧ್ಯವಿಲ್ಲ. ಶಿಕ್ಷಣವೇ ವ್ಯಕ್ತಿಗೆ ಆತ್ಮವಿಶ್ವಾಸ, ಗೌರವ ಮತ್ತು ಸಮಾಜದಲ್ಲಿ ಸ್ಥಾನಮಾನ ನೀಡುತ್ತದೆ.
ನನ್ನ ಹಾಗೂ ಡಾ. ಹೆಚ್.ಸಿ. ಮಹದೇವಪ್ಪ ಅವರ ಜೀವನವನ್ನೇ ಈ ವೇಳೆ ಉದಾಹರಿಸಿದೆ. ನಮ್ಮಿಬ್ಬರಿಗೂ ಶಿಕ್ಷಣದ ಮೂಲಕವೇ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಯಿತು. ಆದ್ದರಿಂದ ಸಮುದಾಯದಲ್ಲಿ ವಿದ್ಯಾವಂತರಾಗಿರುವವರು ಹಾಗೂ ಸರ್ಕಾರಿ ಸೇವೆಯಲ್ಲಿ ಇರುವ ಅಧಿಕಾರಿಗಳು ತಲಾ ಒಬ್ಬ ವಿದ್ಯಾರ್ಥಿಯನ್ನು ದತ್ತು ಪಡೆದು ಅವರ ಶಿಕ್ಷಣ ಮತ್ತು ಭವಿಷ್ಯ ರೂಪಿಸಲು ನೆರವಾದರೆ ಅದಕ್ಕಿಂತ ದೊಡ್ಡ ಸೇವೆ ಇನ್ನೊಂದಿಲ್ಲ ಎಂದರು.
ಯುವಜನತೆಗೆ ಜಾತಿ, ಧರ್ಮ ಅಥವಾ ವಿಭಜನೆಯ ಚರ್ಚೆಗಳಿಗಿಂತ ಗುಣಮಟ್ಟದ ಶಿಕ್ಷಣ, ಉದ್ಯೋಗ ಮತ್ತು ಯಶಸ್ವಿ ಜೀವನ ಮುಖ್ಯವಾಗಿದೆ. ಹೊಸ ಪೀಳಿಗೆಗೆ ಭವಿಷ್ಯ ಕಟ್ಟಿಕೊಡುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಬದಲಾವಣೆಯ ಈ ಕಾಲಘಟ್ಟದಲ್ಲೂ ನಾವು ಹಿಂದೆ ಉಳಿದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ ಎಂದರು.
ಸಮಾಜ ಕಲ್ಯಾಣ ಸಚಿವರಾಗಿ ಡಾ. ಹೆಚ್.ಸಿ. ಮಹದೇವಪ್ಪ ಅವರು ಹಾಸ್ಟೆಲ್‌ಗಳ ನಿರ್ಮಾಣ, ವಿದೇಶದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಪೈಲಟ್ ತರಬೇತಿಗೆ ನೆರವು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಇವೆಲ್ಲದರ ಜೊತೆಗೆ ಸಂವಿಧಾನದ ಪೂರ್ವಪೀಠಿಕೆಯನ್ನು ಶಾಲೆಗಳು ಹಾಗೂ ಮನೆಮನೆಗೆ ತಲುಪಿಸುವ ಕಾರ್ಯ ಅತ್ಯಂತ ಮಹತ್ವದ್ದು ಎಂದರು.
ಸಂವಿಧಾನದ ಮೂಲಕ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಾನತೆ, ನ್ಯಾಯ ಮತ್ತು ಸಹೋದರತ್ವದ ಆಶಯಗಳನ್ನು ಸಮಾಜಕ್ಕೆ ಪರಿಚಯಿಸುವ ಕೆಲಸ ನಡೆದಿದೆ. ಇದರಿಂದ ಸಮಾಜದ ಒಂದು ಭಾಗದಲ್ಲಾದರೂ ಚಿಂತನೆಯ ಬದಲಾವಣೆ ಉಂಟಾದರೆ ಅದೇ ದೊಡ್ಡ ಸಾಧನೆ ಎಂದು ಹೇಳಿದ್ದಾರೆ.
ನಾವೆಲ್ಲ ಅಣ್ಣತಮ್ಮಂದಿರಂತೆ ಒಗ್ಗಟ್ಟಿನಿಂದ ಇರಬೇಕು. ನಮಗೆ ದೊರೆಯುವ ಅವಕಾಶಗಳನ್ನು ನ್ಯಾಯಯುತವಾಗಿ ಹಂಚಿಕೊಂಡು ಮುಂದೆ ಸಾಗಬೇಕು. ಆಧುನಿಕ ಜಗತ್ತಿನಲ್ಲಿ ವಿಭಜನೆಯಿಂದ ಯಾರಿಗೂ ಲಾಭವಿಲ್ಲ. ಸಮುದಾಯದ ವಿದ್ಯಾರ್ಥಿಗಳು ಚೆನ್ನಾಗಿ ಓದಿ, ಹೆತ್ತವರಿಗೆ ಮತ್ತು ಸಮಾಜಕ್ಕೆ ಕೀರ್ತಿ ತರಬೇಕು. ವೈದ್ಯರು, ಇಂಜಿನಿಯರ್‌ಗಳು ಅಥವಾ ಬೇರೆ ಯಾವ ಕ್ಷೇತ್ರದಲ್ಲೇ ಮುಂದುವರಿದರೂ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲಾ ಛಲವಾದಿ ಮಹಾಸಭಾ ಕಳೆದ ಮೂರು ವರ್ಷಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉತ್ತಮ ಕಾರ್ಯ ಮಾಡುತ್ತಿದೆ. ಇಂತಹ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಪ್ರತಿವರ್ಷ ಮುಂದುವರಿಸಬೇಕು. ನಿಮ್ಮೊಂದಿಗೆ ನಾವು ಸದಾ ಇರುತ್ತೇವೆ ಎಂದರು.
ಶೋಷಿತ ಸಮುದಾಯಗಳ ಪರ ಧ್ವನಿ ಎತ್ತುವುದು ನನ್ನ ಜವಾಬ್ದಾರಿ : 1952ರಿಂದ ರಾಜ್ಯದಲ್ಲಿ ಹಲವು ಚುನಾವಣೆಗಳು ನಡೆದಿವೆ, ಅನೇಕ ನಾಯಕರು ಮುಖ್ಯಮಂತ್ರಿ ಸೇರಿದಂತೆ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ನಾನು ಉಪ ಮುಖ್ಯಮಂತ್ರಿಯಾಗಿದ್ದು 2018ರಲ್ಲಿ. ನಮ್ಮ ಸಮುದಾಯಕ್ಕೆ ಉಪಮುಖ್ಯಮಂತ್ರಿ ಹುದ್ದೆಯಂತಹ ಉನ್ನತ ರಾಜಕೀಯ ಪ್ರಾತಿನಿಧ್ಯ ದೊರಕಲು ಅಷ್ಟು ವರ್ಷ ಕಾಯಬೇಕಾಯಿತು ಎಂದರು.
ಸಮಾಜದ ವ್ಯವಸ್ಥೆ ಹೇಗಿದೆ ಎಂದರೆ, ಶೋಷಿತ ಸಮುದಾಯ ಮುಂದೆ ಬರಬೇಕು. ಆ ಸಮುದಾಯಕ್ಕೆ ಉತ್ತೇಜನ ಕೊಡಬೇಕು ಎಂದು ಭಾಷಣಗಳನ್ನು ಮಾಡುತ್ತೇವೆ. ಆದರೆ, ಆ ಸಮುದಾಯಕ್ಕೆ ಡಿಸಿಎಂ ಕೊಡೋದಿಕ್ಕೆ ಇಷ್ಟು ವರ್ಷ ಆಯ್ತು? ಯೋಚನೆ ಮಾಡಿ. ರಾಜ್ಯದ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಶೋಷಿತ ಸಮುದಾಯಗಳಿಗೆ ಸಮರ್ಪಕ ಅವಕಾಶ ದೊರೆಯುವ ಅಗತ್ಯವಿದೆ ಎಂದರು.
ಬಸವಲಿಂಗಪ್ಪ ಅವರಿಗಿಂತ ಸಾಮರ್ಥ್ಯ ಇರುವವರಿದ್ದಾರ?, ಕೆ.ಹೆಚ್.ರಂಗನಾಥ್ ಅವರಿಗಿಂತ ಬುದ್ಧಿವಂತರು ಯಾರು ಇದ್ದಾರೆ?, ಮಲ್ಲಿಕಾರ್ಜುನ ಖರ್ಗೆ ಅವರು ಯಾವ ಖಾತೆಯನ್ನು ನಿಭಾಯಿಸಲಿಲ್ಲ ಹೇಳಿ. ಅವರ ಮೇಲೆ ಯಾವುದಾದರು ಆಪಾದನೆ ಇತ್ತೇ? ನನಗೆ ಯಾವುದೋ ಕಾರಣಕ್ಕೆ ಡಿಸಿಎಂ ಆಯ್ತು. ಕಾಂಗ್ರೆಸ್ ಪಕ್ಷ ನನ್ನನ್ನು ಮತ್ತೇ ಉಪಮುಖ್ಯಮಂತ್ರಿಯನ್ನಾಗಿ ಮಾಡಿದೆ. ನಾನು ಉಪಮುಖ್ಯಮಂತ್ರಿಯಾಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದೇನೆ. ಈ ರಾಜ್ಯದ ಶೋಷಿತ ಸಮುದಾಯಗಳು, ನೊಂದವರು, ತುಳಿತಕ್ಕೊಳಗಾದವರು ಹಾಗೂ ಸಮಾಜದಲ್ಲಿ ನಿರ್ಲಕ್ಷ್ಯಕ್ಕೊಳಗಾದವರ ಪರವಾಗಿ ಧ್ವನಿ ಎತ್ತಲು ನಾನು ಈ ಸ್ಥಾನದಲ್ಲಿದ್ದೇನೆ ಎಂದು ಹೇಳಿದ್ದಾರೆ.
ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಮಹಾಸ್ವಾಮೀಜಿ ಅವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.
ಸಚಿವರಾದ ಕೆ.ಎಸ್.ಬಸವಂತಪ್ಪ, ಮಾಜಿ ಸಚಿವರು ಹಾಗೂ ಶಾಸಕರಾದ ಡಾ. ಹೆಚ್.ಸಿ.ಮಹದೇವಪ್ಪ, ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಸಕರಾದ ಪ್ರಸಾದ್ ಅಬ್ಬಯ್ಯ, ಬಿ.ಪಿ.ಹರೀಶ್, ಸಮರ್ಥ ಶಾಮನೂರು, ವಿಧಾನ ಪರಿಷತ್ ಸದಸ್ಯರಾದ ಎಫ್.ಹೆಚ್.ಜಕ್ಕಪ್ಪನವರ್, ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಸಿ.ನರೇಂದ್ರ, ದಾವಣಗೆರೆ ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷರಾದ ಎನ್.ರುದ್ರಮುನಿ ಮುಂತಾದವರು ಇದ್ದರು.

