HomeIndiaರಸ್ತೆ ಮಾಡದಿದ್ದರೆ ವೋಟ್ ಹಾಕಲ್ಲ ಎಂದ ವ್ಯಕ್ತಿಗೆ ಸಿಂಧಿಯಾ ತರಾಟೆ ; ವಿಡಿಯೋ ವೈರಲ್ ಬೆನ್ನಲ್ಲೇ...

ರಸ್ತೆ ಮಾಡದಿದ್ದರೆ ವೋಟ್ ಹಾಕಲ್ಲ ಎಂದ ವ್ಯಕ್ತಿಗೆ ಸಿಂಧಿಯಾ ತರಾಟೆ ; ವಿಡಿಯೋ ವೈರಲ್ ಬೆನ್ನಲ್ಲೇ ಕಾಮಗಾರಿಗೆ 3 ಕೋಟಿ ರೂ. ಮಂಜೂರು | Watch

ಮಧ್ಯಪ್ರದೇಶದ ಗುಣಾ ಕ್ಷೇತ್ರದಲ್ಲಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಸ್ಥಳೀಯ ನಿವಾಸಿಯೊಬ್ಬರ ನಡುವೆ ನಡೆದ ತೀವ್ರ ವಾಗ್ವಾದದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದ್ದು, ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ತಮ್ಮ ಲೋಕಸಭಾ ಕ್ಷೇತ್ರವಾದ ಗುಣಾ ವ್ಯಾಪ್ತಿಯಲ್ಲಿ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಅವರ ವಾಹನಗಳ ಬೆಂಗಾವಲು ಪಡೆಯನ್ನು ಅಡ್ಡಗಟ್ಟಿದ್ದಾರೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಸ್ತೆ ನಿರ್ಮಾಣ ಹಾಗೂ ರಸ್ತೆಯ ದುಃಸ್ಥಿತಿಯ ಬಗ್ಗೆ ಸಾರ್ವಜನಿಕರು ಸಚಿವರ ಗಮನ ಸೆಳೆದಿದ್ದಾರೆ. ಕೆಟ್ಟ ರಸ್ತೆಯಿಂದಾಗಿ ತಾವು ದಿನನಿತ್ಯ ಅನುಭವಿಸುತ್ತಿರುವ ತೊಂದರೆಗಳನ್ನು ವಿವರಿಸಿದ್ದಾರೆ.

ಈ ವೇಳೆ ಸಚಿವರ ಕಾರಿನ ಬಳಿ ಬಂದ ವ್ಯಕ್ತಿಯೊಬ್ಬ, ನಿಗದಿತ ಸಮಯಕ್ಕೆ ಸರಿಯಾಗಿ ರಸ್ತೆ ನಿರ್ಮಿಸಿಕೊಟ್ಟರೆ ಒಳ್ಳೆಯದು, ಇಲ್ಲವಾದರೆ ಮುಂಬರುವ ಚುನಾವಣೆಯಲ್ಲಿ ಜನರು ಮತ ಹಾಕುವುದಿಲ್ಲ ಎಂದು ನೇರವಾಗಿ ಹೇಳಿದ್ದಾನೆ. ಈ ಮಾತನ್ನು ಕೇಳುತ್ತಿದ್ದಂತೆ ತೀವ್ರ ಸಿಟ್ಟಿಗೆದ್ದ ಸಿಂಧಿಯಾ, ನನ್ನ ಎದುರು ಈ ರೀತಿಯ ಭಾಷೆಯನ್ನು ಯಾವತ್ತೂ ಬಳಸಬೇಡಿ, ನಿಮ್ಮ ಸಮಸ್ಯೆ ಏನು ಎಂಬುದು ನನಗೆ ಅರ್ಥವಾಗುತ್ತದೆ ಎಂದು ಗದರಿದ್ದಾರೆ. ಆ ವ್ಯಕ್ತಿ ಮತ್ತೆ ವಿವರಣೆ ನೀಡಲು ಮುಂದಾದಾಗ, ನಾನು ಎಲ್ಲರ ಪರವಾಗಿಯೂ ಮಾತನಾಡುತ್ತಿದ್ದೇನೆ, ನೀವು ಬಂದು ಮನವಿ ಸಲ್ಲಿಸಿ, ಆ ಕೆಲಸ ಮಾಡಿಸಿಕೊಡುವುದು ನನ್ನ ಜವಾಬ್ದಾರಿ ಎಂದು ಆತನ ಮಾತನ್ನು ಕಡಿದು ಹೇಳಿದ್ದಾರೆ. ಈ ಸಂಪೂರ್ಣ ಮಾತುಕತೆಯ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿ ಅಂತರ್ಜಾಲದಲ್ಲಿ ವ್ಯಾಪಕವಾಗಿ ಹರಿದಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವಿಡಿಯೋ ಹೊರಬರುತ್ತಿದ್ದಂತೆ ಕಾಂಗ್ರೆಸ್ ಪಕ್ಷವು ಸಿಂಧಿಯಾ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಅಧಿಕಾರದ ಮದದಲ್ಲಿ ಸಚಿವರು ವರ್ತಿಸುತ್ತಿದ್ದಾರೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಘಟಕ ಆರೋಪಿಸಿದೆ. ಜನರು ತಮ್ಮ ಹಕ್ಕಿನ ರಸ್ತೆ ಕೇಳಿದರೆ ಸಚಿವರು ಕೋಪಗೊಳ್ಳುತ್ತಿದ್ದಾರೆ. ಪ್ರಶ್ನೆ ಕೇಳಬೇಕಾದ ನಾಗರಿಕರು ಇವರ ಮುಂದೆ ಅಂಗಲಾಚಿ ಬೇಡಿಕೊಳ್ಳಬೇಕೇ? ಇದು ಯಾವ ರೀತಿಯ ಪ್ರಜಾಪ್ರಭುತ್ವ ಮತ್ತು ಯಾವ ಬಗೆಯ ದುರಹಂಕಾರ? ಸಾರ್ವಜನಿಕರು ಎಲ್ಲವನ್ನೂ ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ಈ ಅಹಂಕಾರಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಕಾಂಗ್ರೆಸ್ ತನ್ನ ಅಧಿಕೃತ ಜಾಲತಾಣ ಖಾತೆಯಲ್ಲಿ ಕಿಡಿಕಾರಿದೆ.

ಈ ಘಟನೆಯ ನಂತರ ರಸ್ತೆ ನಿರ್ಮಾಣದ ವಿಚಾರವು ರಾಜ್ಯ ರಾಜಕೀಯದಲ್ಲಿ ಮುಂಚೂಣಿಗೆ ಬಂದಿದೆ. ವಿವಾದ ಬೆಳೆಯುತ್ತಿದ್ದಂತೆ ಎಚ್ಚೆತ್ತ ಸಿಂಧಿಯಾ, ಸಾರ್ವಜನಿಕ ಸಮಾರಂಭವೊಂದರಲ್ಲಿ ಅದೇ ರಸ್ತೆ ನಿರ್ಮಾಣ ಕಾಮಗಾರಿಗಾಗಿ ತಕ್ಷಣವೇ 3 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಿದ್ದಾರೆ. ಗುಣಾ ವಿಧಾನಸಭಾ ಕ್ಷೇತ್ರದ ಶಾಸಕರ ನಿಧಿಯಿಂದ ಈ ಹಣವನ್ನು ಬಿಡುಗಡೆ ಮಾಡಲು ಸೂಚಿಸಲಾಗಿದ್ದು, ಮಳೆಗಾಲ ಮುಗಿದ ತಕ್ಷಣವೇ ರಸ್ತೆ ಕಾಮಗಾರಿಯನ್ನು ಆರಂಭಿಸುವಂತೆ ಜಿಲ್ಲಾಧಿಕಾರಿಗಳಿಗೆ ಕೇಂದ್ರ ಸಚಿವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular