ಚಿಕ್ಕಮಗಳೂರು: ಹಾಲಿನ ದರ ಹೆಚ್ಚಳದ ಬಗ್ಗೆ ಶೀಘ್ರವೇ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಶನಿವಾರ ಬಾಳೆಹೊನ್ನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ತಮಿಳುನಾಡಿನಲ್ಲಿ ಹಾಲಿನ ದರ ಹೆಚ್ಚಳವಾಗಿದೆ. ರಾಜ್ಯದ ರೈತರು ಕೂಡ ಹಾಲಿನ ದರ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದಾರೆ. ಈ ಕುರಿತು ಶೀಘ್ರವೇ ಅಧಿಕಾರಿಗಳ ಸಭೆ ನಡೆಸಿ ತೀರ್ಮಾನ ಮಾಡಿ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ತಮಿಳುನಾಡಿನಲ್ಲಿ ಹಾಲಿನ ದರವನ್ನು ಲೀಟರ್ ಗೆ 9 – 10 ರೂ. ನಷ್ಟು ಹೆಚ್ಚಳ ಮಾಡಲಾಗಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಹಾಲು ಉತ್ಪಾದನೆ ವೆಚ್ಚ ಹೆಚ್ಚಾಗಿದೆ. ಹುಲ್ಲು, ಹಿಂಡಿ, ಬೂಸಾ ದರ ಕೂಡ ಹೆಚ್ಚಳವಾಗಿದ್ದು, ಹಾಲು ಉತ್ಪಾದನಾ ವೆಚ್ಚ ಏರಿಕೆಯಾಗಿದೆ. ರಾಜ್ಯದ ಹಾಲು ಉತ್ಪಾದಕರ ಸಂಘಗಳಿಗೂ ಲೀಟರ್ ಗೆ 6-7 ರೂ. ನಷ್ಟು ನಷ್ಟವಾಗುತ್ತಿದೆ. ಕನಿಷ್ಠ ತಮಿಳುನಾಡಿನ ಮಾದರಿಯಲ್ಲಿ ಹಾಲಿನ ದರ ಹೆಚ್ಚಳ ಮಾಡಬೇಕೆಂಬ ಒತ್ತಾಯವಿದ್ದು ಈ ಕುರಿತಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದರು.
ಗಡಿಭಾಗದ ರೈತರು ಹೆಚ್ಚಿನ ದರ ಸಿಗುತ್ತಿರುವ ಕಾರಣ ತಮಿಳುನಾಡಿನ ಡೈರಿಗಳಿಗೆ ಹಾಲು ಪೂರೈಕೆ ಮಾಡುತ್ತಿದ್ದಾರೆ. ರಾಜ್ಯದಲ್ಲಿಯೂ ಹಾಲಿನ ದರ ಹೆಚ್ಚಳ ಬಗ್ಗೆ ಶೀಘ್ರವೇ ತೀರ್ಮಾನಿಸುವುದಾಗಿ ಸಿಎಂ ಹೇಳಿದ್ದಾರೆ.
ರೈತರ ಸಮಸ್ಯೆಗಳಿಗೆ ಪರಿಹಾರ ನೀಡಲು ಕಾನೂನು ತಿದ್ದುಪಡಿ: ಸಿಎಂ ಡಿ.ಕೆ. ಶಿವಕುಮಾರ್
ಚಿಕ್ಕಮಗಳೂರು: ಪರಿಸರ ಸೂಕ್ಷ್ಮ ವಲಯ ಸೇರಿದಂತೆ ರೈತರ ಸಮಸ್ಯೆಗಳಿಗೆ ಪರಿಹಾರ ನೀಡಲು, ರಾಜ್ಯದ ಹಿತಕ್ಕಾಗಿ ಅಗತ್ಯವಿರುವ ಕಾನೂನು ತಿದ್ದುಪಡಿ ಮಾಡಲು ನಮ್ಮ ಸರ್ಕಾರ ಕೆಲಸ ಮಾಡಲಿದೆ; ಈ ಕುರಿತು ಅಂತಿಮ ತೀರ್ಮಾನಕ್ಕೆ ಬರುವ ಮುನ್ನ ಜನರ ಅಭಿಪ್ರಾಯ ಸಂಗ್ರಹಿಸಲು ಬಂದಿರುವೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ನಡೆದ ಕಸ್ತೂರಿ ರಂಗನ್ ವರದಿ ಕುರಿತ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ಕಸ್ತೂರಿ ರಂಗನ್ ಸಮಿತಿಯು ಉಪಗ್ರಹಗಳ ಮೂಲಕ ಜಿಪಿಎಸ್ ಸಮೀಕ್ಷೆ ಮಾಡಿದ್ದು, ಕಾಫಿ, ಅಡಿಕೆ, ರಬ್ಬರ್ ತೋಟವನ್ನು ಕಾಡು ಎಂದು ಪರಿಗಣಿಸಿದೆ; ಈ ವರದಿಯಿಂದ ಜಿಲ್ಲೆಯಲ್ಲಿ 138 ಹಳ್ಳಿಗಳು ಹಾಗೂ ರಾಜ್ಯದಲ್ಲಿ 1,449 ಹಳ್ಳಿಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಅಧಿಸೂಚನೆ ಮಾಡಿದ್ದು, ರೈತರು ತೀವ್ರ ಆತಂಕದಲ್ಲಿದ್ದಾರೆ ಎಂದರು.
ಕೇರಳದಲ್ಲಿ ಉಮರ್ ಸಮಿತಿ ಎಂಬ ಉನ್ನತ ಮಟ್ಟದ ಅಧಿಕಾರಿ ಸಮಿತಿ ಮೂಲಕ ಭೌತಿಕ ಸಮೀಕ್ಷೆ ನಡೆಸಿ, ನಾಡು-ಕಾಡನ್ನು ಬೇರ್ಪಡಿಸಿ 5,000 ಚ.ಕಿ.ಮೀ ಪ್ರದೇಶವನ್ನು ವರದಿಯಿಂದ ಮುಕ್ತಗೊಳಿಸಲಾಗಿದೆ; ಅದೇ ಮಾದರಿಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸುವಂತೆ ರೈತ ಮುಖಂಡರು ಸಲಹೆ ನೀಡಿದ್ದಾರೆ ಎಂದರು.
2022ರಲ್ಲಿ ಸಂಜಯ್ ಕುಮಾರ್ ಎಂಬ ಅಧಿಕಾರಿಯಿಂದ ವರದಿ ನೀಡಲು 2027ರವರೆಗೆ ಕಾಲಾವಕಾಶ ನೀಡಿರುವ ವಿಚಾರ ಗಮನಕ್ಕೆ ಬಂದಿದ್ದು, ಈ ಬಗ್ಗೆ ಕೇಂದ್ರ ಸಚಿವರ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು; ಅಗತ್ಯ ಬಿದ್ದರೆ ಕೇಂದ್ರಕ್ಕೆ ಪ್ರತ್ಯೇಕ ನಿಯೋಗ ಕರೆದೊಯ್ಯಲಾಗುವುದು ಎಂದರು.
ಈ ವರದಿಗೆ ಸಂಬಂಧಿಸಿದಂತೆ ಈಗ 7ನೇ ಬಾರಿಗೆ ಅಧಿಸೂಚನೆ ಹೊರಡಿಸಿದ್ದು, ಇದು ಸಾಡೇಸಾತಿಯಂತಾಗಿದೆ; ಮಲೆನಾಡು ಹಾಗೂ ಕರಾವಳಿ ಭಾಗವನ್ನು ವಿಶೇಷ ಕೃಷಿ ವಲಯ ಎಂದು ಘೋಷಿಸಬೇಕು ಮತ್ತು ಮೀಸಲು ಜಲ ಪ್ರಮಾಣ ಘೋಷಣೆ ಮಾಡಬೇಕು ಎಂಬ ಬೇಡಿಕೆಗಳಿದ್ದು, ಈ ಸಮಸ್ಯೆಗಳನ್ನು ನಿವಾರಣೆ ಮಾಡುವ ವಿಶ್ವಾಸವಿದೆ ಎಂದರು.
ಸರ್ಕಾರದ ಮುಂದಿನ ನಡೆ ಹಾಗೂ ಅಧಿವೇಶನದ ತೀರ್ಮಾನ:
ಪರಿಸರ ಸೂಕ್ಷ್ಮ ವಲಯ ಸೇರಿದಂತೆ ರೈತರ ಸಮಸ್ಯೆಗಳಿಗೆ ಪರಿಹಾರ ನೀಡಲು, ರಾಜ್ಯದ ಹಿತಕ್ಕಾಗಿ ಅಗತ್ಯವಿರುವ ಕಾನೂನು ತಿದ್ದುಪಡಿ ಮಾಡಲು ನಮ್ಮ ಸರ್ಕಾರ ಕೆಲಸ ಮಾಡಲಿದೆ; ಈ ಕುರಿತು ಅಂತಿಮ ತೀರ್ಮಾನಕ್ಕೆ ಬರುವ ಮುನ್ನ ಜನರ ಅಭಿಪ್ರಾಯ ಸಂಗ್ರಹಿಸಲು ಬಂದಿರುವೆ ಎಂದರು.
ವಿರೋಧ ಪಕ್ಷದವರು ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡದ ಕಾರಣ ಶಾಸಕರ ಜೊತೆ ಚರ್ಚಿಸಲಾಗಿದ್ದು, ಕಸ್ತೂರಿ ರಂಗನ್ ವರದಿ ಬಗ್ಗೆ ಪ್ರಸ್ತಾಪವಾದ ಹಿನ್ನೆಲೆಯಲ್ಲಿ ಜನರ ಅಭಿಪ್ರಾಯ ಪಡೆದು ರೈತರ ಬದುಕು ಉಳಿಸಲು ವಿಶೇಷ ಅಧಿವೇಶನ ಕರೆಯಲಾಗಿದೆ ಎಂದರು.
ಈ ಸಂವಾದ ಕಾರ್ಯಕ್ರಮದಲ್ಲಿ ಸಚಿವರಾದ ಕೆ. ಜೆ. ಜಾರ್ಜ್, ರಾಮಲಿಂಗಾರೆಡ್ಡಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಟಿ. ಡಿ. ರಾಜೇಗೌಡ, ಹೆಚ್. ಡಿ. ತಮ್ಮಯ್ಯ, ನಯನಾ ಮೋಟಮ್ಮ, ಪರಿಷತ್ ಸದಸ್ಯರಾದ ಗಾಯತ್ರಿ ಶಾಂತೇಗೌಡ, ಆರತಿ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

