ಬೆಂಗಳೂರು: ಮಂಗಳೂರಿನಲ್ಲಿ ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟ ಸಭೆ ಹಾಗೂ ಇನ್ನೂ 10-12 ಜಿಲ್ಲೆಗಳಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗುವುದು ಎಂಬ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಕಿಡಿಕಾರಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಜಿಲ್ಲೆಗೊಂದು, ಊರಿಗೊಂದು ಕ್ಯಾಬಿನೆಟ್ ಮೀಟಿಂಗ್ ಮಾಡಲು ಅದೇನು ಟೂರಿಂಗ್ ಟಾಕೀಸಾ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಜಿಲ್ಲೆ ಜಿಲ್ಲೆಗಳಲ್ಲಿ ಸಚಿವ ಸಂಪುಟ ಸಭೆ ನಡೆಸುವುದಾದರೆ ವಿಧನಾಸೌಧ ಕಟ್ಟಡ ಕಟ್ಟಿರುವುದು ಯಾತಕ್ಕಾಗಿ ಎಂಬುದನ್ನು ತಿಳಿದುಕೊಳ್ಳಬೇಕು. ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸಲು ಕೆಂಗಲ್ ಹನುಮಂತಯ್ಯ ಅವರು ಆ ಕಟ್ಟಡವನ್ನು ನಿರ್ಮಿಸಿದ್ದರು. ಈಗ ಜಿಲ್ಲೆಗಳಿಗೆ ದಂಡು ದಂಡಾಗಿ ಹೋಗಿ ದುಂದುವೆಚ್ಚ ಮಾಡಿಕೊಂಡು ಸಂಪುಟ ಸಭೆ ಮಾಡುತ್ತಿದ್ದಾರೆ. ಇದು ಪ್ರಚಾರದ ಸ್ಟಂಟ್ ಬಿಟ್ಟರೆ ಬೇರೇನೂ ಅಲ್ಲ ಎಂದು ಕಿಡಿಕಾರಿದರು.
ಕೊನೇಪಕ್ಷ ಹೊರಗೆ ಕ್ಯಾಬಿನೆಟ್ ಸಭೆ ಮಾಡುವುದಕ್ಕೆ ಇವರು ಖರ್ಚು ಮಾಡುತ್ತಿರುವ ಹಣವನ್ನು ರೈತರಿಗಾದರೂ ಕೊಟ್ಟಿದ್ದಿದ್ದರೆ ಅವರಿಗೆ ಸಹಾಯ ಆಗುತ್ತಿತ್ತು ಎಂದರು. ಮೊದಲೇ ರಾಜ್ಯದ ಬೊಕ್ಕಸಕ್ಕೆ ಭಾರ ಹೆಚ್ಚಾಗಿದೆ. ಅದರ ಜತೆಗೆ ಇಂಥ ದುಂದುವೆಚ್ಚ ಬೇರೆ. ಇಂತಹ ಪ್ರವಾಸಗಳು ಸರ್ಕಾರಕ್ಕೆ ಹೊರೆಯೇ ಹೊರತು ಬೇರೆ ಏನೂ ಅನುಕೂಲವಾಗುವುದಿಲ್ಲ. ಜನರ ತೆರಿಗೆ ಹಣವನ್ನು ಪೋಲು ಮಾಡಲಾಗುತ್ತಿದೆ. ಇಂತಹ ಸಭೆಗಳಿಂದ ರಾಜ್ಯ ಉದ್ಧಾರ ಆಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಯಾವ ಸ್ಥಿತಿಯಲ್ಲಿದೆ ಎಂಬುದು ಈ ಮುಖ್ಯಮಂತ್ರಿಗೆ ಗೊತ್ತಿಲ್ಲವೇ?. ಜನ – ಜಾನುವಾರುಗಳಿಗೆ ನೀರಿಲ್ಲ, ದನ ಕರುಗಳಿಗೆ ಮೇವು ಸಿಗುತ್ತಿಲ್ಲ. ಏನೋ ಕುಮಾರಸ್ವಾಮಿ ಅವರು ಸಾಲಮನ್ನಾ ಮಾಡಿದ್ದಾರೆ, ಸಿದ್ದರಾಮಯ್ಯ ಸಾಲಮನ್ನಾ ಮಾಡಿದ್ದಾರೆ. ಹೀಗಾಗಿ ನಾನು ಕೂಡ ಸಾಲಮನ್ನಾ ಮಾಡಬೇಕು ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರಂತೆ. ಬೆಂಗಳೂರು ಸುತ್ತಮುತ್ತ ಬೇಕಾದಷ್ಟು ಲೂಟಿ ಹೊಡೆಯಲು ಹೊರಟಿದ್ದರಲ್ಲಾ? ಡಿಎಲ್ಎಫ್ ತಾವರೆಕೆರೆಯ ಡಿವೈನಿಟಿ, ನೈಸ್ ವಿಚಾರದಲ್ಲಿ ಸಾವಿರಾರು ಕೋಟಿ ಲೂಟಿ ಹೊಡೆಯಲು ಹೊರಟೀದಾರಲ್ಲಾ?. ಮನಸ್ಸು ಮಾಡಿದರೆ ಮುಖ್ಯಮಂತ್ರಿಗಳೇ ತಮ್ಮ ಕೈಯಿಂದಲೇ ಸಾಲಮನ್ನಾ ಮಾಡಬಹುದು. ಸರ್ಕಾರದ ಆರ್ಥಿಕ ಇಲಾಖೆ ಯಾಕೆ? ಅವರ ಕೈಯಿಂದಲೇ, ವೈಯಕ್ತಿಕವಾಗೇ ಸಾಲಮನ್ನಾ ಮಾಡಬಹುದು ಎಂದು ಟೀಕಿಸಿದರು.
ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳ ನಿಲುವು ಒಂದೇ ಆಗಿದೆ. ಯಾವುದೇ ಕಾರಣಕ್ಕೂ ಈ ವರದಿಯನ್ನು ಅನುಷ್ಠಾನಕ್ಕೆ ತರಬಾರದು. ಈ ವರದಿಯಿಂದ ರೈತರಿಗೆ ಧಕ್ಕೆ ಆಗಲಿದೆ ಎಂಬ ಅಭಿಪ್ರಾಯ ವ್ಯಾಪಕವಾಗಿದೆ. ಕಸ್ತೂರಿ ರಂಗನ್ ವರದಿಯ ಬಗ್ಗೆ ಚರ್ಚೆ ನಡೆಯುತ್ತಿರುವುದು ಸಂತೋಷದ ವಿಚಾರವೇ. ಆದರೆ, ಈ ಸರ್ಕಾರ ಅದೆಷ್ಟು ದೃಢವಾಗಿ ರೈತರ ಪರ ನಿಲ್ಲುತ್ತದೆ ಎಂಬುದನ್ನು ನಾವು ಗಮನಿಸಬೇಕಾಗಿದೆ ಎಂದು ವಾಗ್ದಾಳಿ ನಡೆಸಿದರು.
ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇವಂತಿಯೇ ವಿವಿಧ ಜಿಲ್ಲೆಗಳ ಜನರು ಮತ್ತು ಬಹುಮುಖ್ಯವಾಗಿ ರೈತರು ಈ ವರದಿಯನ್ನು ಕಠಿಣವಾಗಿ ವಿರೋಧ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಜನಾಭಿಪ್ರಾಯಕ್ಕೆ ಅನುಗುಣವಾಗಿ ನಡೆಯಬೇಕಾಗುತ್ತದೆ. ವಿಚಿತ್ರ ಎಂದರೆ ತಕ್ಷಣವೇ ಈ ಬಗ್ಗೆ ಸ್ಪಂದಿಸುವುದನ್ನು ಬಿಟ್ಟು ಮುಖ್ಯಮಂತ್ರಿಯ ಬರಗಾಲ ಮತ್ತು ಕಸ್ತೂರಿ ರಂಗನ್ ವರದಿಗಳ ಬಗೆಯೇ ಹಲವು ದಿನಗಳಿಂದ ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ. ಜೆಡಿಎಸ್ ಪಕ್ಷದ ನಿಲುವು ರೈತರ ನಿಲುವೇ ಆಗಿದೆ. ನಾವು ರೈತರ ಪರ ಗಟ್ಟಿಯಾಗಿ ನಿಲ್ಲುತ್ತೇವೆ. ಎಲ್ಲಾ ಪಕ್ಷಗಳು ಈ ವಿಷಯದಲ್ಲಿ ಒಗ್ಗಟ್ಟಾಗಿ ಹೋರಾಟ ನಡೆಸಬೇಕಾಗುತ್ತದೆ ಎಂದರು.
ಜನರ ಹಿತವನ್ನು ಬದಿಗೊತ್ತಿ ಬೇರೆ ಬೇರೆ ವಿಷಯಗಳನ್ನು ಮಗ್ನವಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ರೈತರನ್ನು ಮತ್ತು ರಾಜ್ಯದ ಜನರ ಹಿತವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಬರದ ಬಗ್ಗೆ ಚರ್ಚೆ ಮಾಡಲು ಇವರಿಗೆ ಸಮಯ ಎಲ್ಲಿದೆ?. ಬರೀ ಪ್ರಚಾರ ಗಿಟ್ಟಿಸುವುದರಲ್ಲಿಯೇ ಇವರು ಸಮಯ ವ್ಯರ್ಥ ಮಾಡಿಸುತ್ತಿದ್ದಾರೆ. ಇದುವರೆಗೂ ರೈತರ ಕಷ್ಟವನ್ನು ಆಲಿಸಿಲ್ಲ. ಅವರಿಗೆ ಪರಿಹಾರವನ್ನು ಕೊಡುವ ಸಣ್ಣ ಪ್ರಯತ್ನವನ್ನು ಸಹ ಮಾಡಿಲ್ಲ. ಬೆಳೆಯು ಮೊಳಕೆ ಹಂತದಲ್ಲಿ ಸುಟ್ಟು ಭಸ್ಮವಾಗಿದೆ. ರೈತರ ದುಡಿಮೆ ದುಡ್ಡು ಮಣ್ಣುಪಾಲಾಗಿದೆ. ಸರ್ಕಾರ ಇಷ್ಟೊತ್ತುಗಾಗಲೇ ಪರಿಹಾರ ನೀಡಬೇಕಾಗಿತ್ತು, ಅಲ್ಲವೇ? ಎಂದು ಪ್ರಶ್ನಿಸಿದರು.
ಸದ್ಯಕ್ಕೆ ರೈತರ ಸಾಲ ವಸೂಲಿ ಮಾಡಬೇಡಿ ಎಂದು ಮುಖ್ಯ ಕಾರ್ಯದರ್ಶಿ ಸಭೆ ಮಾಡಿ ಬ್ಯಾಂಕ್ಗಳಿಗೆ ಸೂಚನೆ ನೀಡಿರುವುದು ಒಂದೇ ಸಮಾಧಾನ. ನಾನು ಮಂಡ್ಯ ಮತ್ತು ಮೈಸೂರು ಲೋಕಸಭಾ ಕ್ಷೇತ್ರಗಳ ದ್ವಿಶಾ ಸಭೆಗಳಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ರೈತರ ಸಾಲ ವಸೂಲಿಗೆ ಕಿರುಕುಳ ನೀಡಬಾರದು ಎಂದು ಕಟ್ಟುನಿಟ್ಟಾಗಿ ಅಧಿಕಾರಿಗಳಿಗೆ ಸೂಚಿಸಿದ್ದೆ. ರೈತರ ನೆರವಿಗೆ ಬರುವುದಕ್ಕೆ ಈ ಸರ್ಕಾರಕ್ಕೆ ದುಡ್ಡಿಲ್ಲವಂತೆ. ಆದರೆ, ಅನಗತ್ಯ ವಿಚಾರಗಳಿಗೆ ದುಂದು ವೆಚ್ಚ ಮಾಡುವುದಕ್ಕೆ ಹಣವಿದೆ ಎಂದು ಕಿಡಿಕಾರಿದರು.

