HomeEntertainmentಆಸ್ಕರ್ ಅಂಗಳಕ್ಕೆ ಮರಾಠಿ ಸಿನಿಮಾ ‘ಗೊಂಡಾಳ್’; ಭಾರತವನ್ನು ಪ್ರತಿನಿಧಿಸಲಿದೆ ಥ್ರಿಲ್ಲರ್ ಚಿತ್ರ.!

ಆಸ್ಕರ್ ಅಂಗಳಕ್ಕೆ ಮರಾಠಿ ಸಿನಿಮಾ ‘ಗೊಂಡಾಳ್’; ಭಾರತವನ್ನು ಪ್ರತಿನಿಧಿಸಲಿದೆ ಥ್ರಿಲ್ಲರ್ ಚಿತ್ರ.!

ನವದೆಹಲಿ/ಮುಂಬೈ: ಮರಾಠಿ ಭಾಷೆಯ ಥ್ರಿಲ್ಲರ್ ಸಿನಿಮಾ ‘ಗೊಂಡಾಳ್’ ಆಸ್ಕರ್‌ 2027ಕ್ಕೆ ಭಾರತದ ಅಧಿಕೃತ ಪ್ರವೇಶ ಚಿತ್ರವಾಗಿ ಆಯ್ಕೆಯಾಗಿದೆ ಎಂದು ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ (FFI) ಶುಕ್ರವಾರ ಮುಂಬೈನಲ್ಲಿ ಘೋಷಿಸಿದೆ.

ಕನ್ನಡ ಚಿತ್ರ ನಿರ್ದೇಶಕ ಪಟ್ಟಾಭಿರಾಮಯ್ಯ ಶೇಷಾದ್ರಿ ಅವರ ಅಧ್ಯಕ್ಷತೆಯ 14 ಸದಸ್ಯರ ತೀರ್ಪುಗಾರರ ತಂಡವು ಒಟ್ಟು 33 ಚಿತ್ರಗಳ ಪೈಕಿ ‘ಗೊಂಡಾಳ್’ ಚಿತ್ರವನ್ನು ಆಯ್ಕೆ ಮಾಡಿದೆ.ವಿವಿಧ ಹಂತಗಳಲ್ಲಿ ಚರ್ಚೆ ಹಾಗೂ ಪರಿಶೀಲನೆ ನಡೆಸಿದ ಬಳಿಕ ಚಿತ್ರವನ್ನು ಆಯ್ಕೆ ಮಾಡಲಾಗಿದೆ ಎಂದು FFI ತಿಳಿಸಿದೆ. ಭಾರತದಲ್ಲಿನ ಚಲನಚಿತ್ರ ನಿರ್ಮಾಪಕರು, ವಿತರಕರು, ಪ್ರದರ್ಶಕರು ಮತ್ತು ಸ್ಟುಡಿಯೋ ಮಾಲೀಕರನ್ನು ಪ್ರತಿನಿಧಿಸುವ ಪ್ರಮುಖ ಸಂಸ್ಥೆಯಾಗಿದೆ FFI.

“‘ಗೊಂಡಾಳ್’ 99ನೇ ಅಕಾಡೆಮಿ ಅವಾರ್ಡ್ಸ್ (ಆಸ್ಕರ್‌ 2027)ಗೆ ಭಾರತದ ಅಧಿಕೃತ ಪ್ರವೇಶ ಚಿತ್ರವಾಗಲಿದೆ. ಇದು ಸರ್ವಾನುಮತದ ಆಯ್ಕೆಯಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಅತಿದೊಡ್ಡ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಇದು ಸೂಕ್ತ ಚಿತ್ರ ಎಂದು ತೀರ್ಪುಗಾರರ ತಂಡ ಭಾವಿಸಿದೆ” ಎಂದು ಪಿ. ಶೇಷಾದ್ರಿ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂತೋಷ್ ದವಾಖರ್ ಅವರು ಬರೆದು ನಿರ್ದೇಶಿಸಿರುವ ‘ಗೊಂಡಾಳ್’ ಚಿತ್ರವು ಗ್ರಾಮೀಣ ಮಹಾರಾಷ್ಟ್ರದ ಹಿನ್ನೆಲೆಯಲ್ಲಿದೆ. ಹೊಸದಾಗಿ ಮದುವೆಯಾದ ಜೋಡಿಯನ್ನು ಕೇಂದ್ರವಾಗಿಟ್ಟುಕೊಂಡ ಸಾಂಪ್ರದಾಯಿಕ ಆಚರಣೆಯ ಸಂದರ್ಭದಲ್ಲಿ ಒಂದೇ ರಾತ್ರಿಯಲ್ಲಿ ನಡೆಯುವ ಘಟನೆಗಳ ಸುತ್ತ ಕಥೆ ಸಾಗುತ್ತದೆ.

“ಇದು ಸರ್ವಾನುಮತದ ನಿರ್ಧಾರವಾಗಿತ್ತು. ಸೆಪ್ಟೆಂಬರ್ 9ರಿಂದ ಚಿತ್ರಗಳ ಪ್ರದರ್ಶನ ಆರಂಭವಾಗಿತ್ತು. ಹಂತ ಹಂತವಾಗಿ ಚಿತ್ರಗಳನ್ನು ಕೈಬಿಡುವ ಮೂಲಕ ಅಂತಿಮವಾಗಿ ವಿಜೇತ ಚಿತ್ರವನ್ನು ಆಯ್ಕೆ ಮಾಡಲಾಯಿತು” ಎಂದು ತೀರ್ಪುಗಾರರ ಸದಸ್ಯ ಹಾಗೂ ಕೋಲ್ಕತ್ತಾ ಮೂಲದ ಚಿತ್ರ ನಿರ್ಮಾಪಕ ಫಿರ್ದೌಸುಲ್ ಹಸನ್ ತಿಳಿಸಿದ್ದಾರೆ.

ಆಸ್ಕರ್‌ ಪ್ರವೇಶಕ್ಕಾಗಿ ಸಲ್ಲಿಕೆಯಾಗಿದ್ದ 33 ಚಿತ್ರಗಳಲ್ಲಿ 14 ಹಿಂದಿ, ತಲಾ 4 ಮರಾಠಿ, ತೆಲುಗು ಮತ್ತು ಗುಜರಾತಿ, 3 ತಮಿಳು, ತಲಾ 1 ಮಲಯಾಳಂ, ಕೊನ್ಯಾಕ್ ಮತ್ತು ನೇಪಾಳಿ ಚಿತ್ರಗಳಿದ್ದವು. ಒಂದು ಮೂಕಿ ಚಿತ್ರವೂ ಸ್ಪರ್ಧೆಯಲ್ಲಿತ್ತು.

ಸ್ಪರ್ಧೆಯಲ್ಲಿದ್ದ 33 ಚಿತ್ರಗಳಲ್ಲಿ ‘ಮೈನ್ ವಾಪಸ್ ಆವಂಗಾ’, ‘ಬಾರ್ಡರ್ 2’ ಮತ್ತು ‘ಧುರಂಧರ್’ ಚಿತ್ರಗಳೂ ಸೇರಿದ್ದವು.

‘ಗೊಂಡಾಳ್’ ಸಿನಿಮಾ 2025ರ ನವೆಂಬರ್ 14ರಂದು ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಕಿಶೋರ್ ಕದಮ್, ಇಶಿತಾ ದೇಶಮುಖ್, ಯೋಗೇಶ್ ಸೋಹೋನಿ, ನಿಶಾದ್ ಭೋಯಿರ್, ಅನುಜ್ ಪ್ರಭು ಸೇರಿದಂತೆ ಹಲವರು ನಟಿಸಿದ್ದಾರೆ. ಹಿರಿಯ ಸಂಗೀತ ನಿರ್ದೇಶಕ ಇಳಯರಾಜಾ ಅವರು ಚಿತ್ರದ ಸಂಗೀತ ಸಂಯೋಜಿಸಿದ್ದಾರೆ.

99ನೇ ಅಕಾಡೆಮಿ ಅವಾರ್ಡ್ಸ್ (ಆಸ್ಕರ್‌ 2027) ಸಮಾರಂಭವು 2027ರ ಮಾರ್ಚ್ 14ರಂದು ಅಮೆರಿಕದ ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ.

ಸಿನಿಮಾವು ಮಹಾರಾಷ್ಟ್ರದ ಗ್ರಾಮೀಣ ಭಾಗದ ಸಾಂಪ್ರದಾಯಿಕ ಮತ್ತು ಧಾರ್ಮಿಕ ಆಚರಣೆಯಾದ ‘ಗೊಂಡಾಳ್’ ಮತ್ತು ಜಾನಪದ ಕಲೆಯ ಹಿನ್ನೆಲೆಯಲ್ಲಿ ಸಾಗುತ್ತದೆ. ಇದು ‘ಸುಮನ್’ ಎಂಬ ವಿವಾಹಿತ ಮಹಿಳೆಯ ಸುತ್ತ ಸುತ್ತುವ ಕಥೆಯಾಗಿದೆ. ಆಕೆಯ ದೈನಂದಿನ ಜೀವನ, ಸಂಬಂಧಗಳು, ಅಸೂಯೆ ಮತ್ತು ವಂಚನೆಗಳು ಹೇಗೆ ಒಂದು ಭೀಕರ ಸಾಂಸ್ಕೃತಿಕ ಥ್ರಿಲ್ಲರ್ ಆಗಿ ಬದಲಾಗುತ್ತವೆ ಎಂಬುದನ್ನು ರಾತ್ರಿ ಪೂರ್ತಿ ನಡೆಯುವ ಧಾರ್ಮಿಕ ಆಚರಣೆಯ ಹಿನ್ನೆಲೆಯಲ್ಲಿ ಅತ್ಯಂತ ರೋಮಾಂಚಕವಾಗಿ ಚಿತ್ರಿಸಲಾಗಿದೆ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular