HomeIndiaಇತಿಹಾಸ ಸೃಷ್ಟಿಸಿದ ಕೂಲಿ ಕಾರ್ಮಿಕನ ಪುತ್ರಿ: ಕೇರಳದ ಮೊದಲ ಬುಡಕಟ್ಟು ಸಮುದಾಯದ ಜಿಲ್ಲಾಧಿಕಾರಿಯಾಗಿ ಶ್ರೀಧನ್ಯ ಸುರೇಶ್...

ಇತಿಹಾಸ ಸೃಷ್ಟಿಸಿದ ಕೂಲಿ ಕಾರ್ಮಿಕನ ಪುತ್ರಿ: ಕೇರಳದ ಮೊದಲ ಬುಡಕಟ್ಟು ಸಮುದಾಯದ ಜಿಲ್ಲಾಧಿಕಾರಿಯಾಗಿ ಶ್ರೀಧನ್ಯ ಸುರೇಶ್ ಅಧಿಕಾರ ಸ್ವೀಕಾರ !

ಕಡುಬಡತನ ಹಾಗೂ ಸವಾಲುಗಳನ್ನೇ ಮೆಟ್ಟಿ ನಿಂತು ನಾಗರಿಕ ಸೇವಾ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದ ಶ್ರೀಧನ್ಯ ಸುರೇಶ್ ಅವರು ಕಾಸರಗೋಡು ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ಕೇರಳ ರಾಜ್ಯದ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದಾರೆ. ರಾಜ್ಯದ ಇತಿಹಾಸದಲ್ಲೇ ಜಿಲ್ಲೆಯೊಂದರ ಆಡಳಿತ ಮುಖ್ಯಸ್ಥೆಯಾಗಿ ನೇಮಕಗೊಂಡ ಪ್ರಪ್ರಥಮ ಬುಡಕಟ್ಟು ಸಮುದಾಯದ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.

ಕೇರಳ ಕೇಡರ್‌ನ 2019 ರ ಬ್ಯಾಚ್‌ನ ಅಧಿಕಾರಿಯಾಗಿರುವ ಶ್ರೀಧನ್ಯ ಅವರು ಮೂಲತಃ ವಯನಾಡು ಜಿಲ್ಲೆಯ ಪೊಝುತಾನ ಪಂಚಾಯಿತಿ ವ್ಯಾಪ್ತಿಯ ಗಿರಿಜನ ಹಾಡಿಯ ಕುರಿಚಿಯ ಪಂಗಡಕ್ಕೆ ಸೇರಿದವರು. ಇವರ ತಂದೆ ಸುರೇಶ್ ದಿನಗೂಲಿ ನೌಕರರಾಗಿದ್ದು, ತಾಯಿ ಕಮಲಾ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ದುಡಿಯುತ್ತಿದ್ದರು. ಕಡು ಕಷ್ಟದ ನಡುವೆಯೂ ಶಿಕ್ಷಣವನ್ನು ಮುಂದುವರಿಸಿದ ಇವರು ಮಲಯಾಳಂ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ್ದರು. ಬಳಿಕ ಕೋಝಿಕ್ಕೋಡ್‌ನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಪ್ರಾಣಿಶಾಸ್ತ್ರ ಪದವಿ ಹಾಗೂ ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

ಆರಂಭದಲ್ಲಿ ವಯನಾಡಿನ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ, ಅಂದಿನ ಮಾನಂದವಾಡಿ ಉಪ ಜಿಲ್ಲಾಧಿಕಾರಿಯಾಗಿದ್ದ ಶ್ರೀರಾಮ್ ಸಾಂಬಶಿವ ರಾವ್ ಅವರೊಂದಿಗಿನ ಮಾತುಕತೆ ಇವರಲ್ಲಿ ಆಡಳಿತ ಸೇವೆಗೆ ಸೇರುವ ಮಹತ್ವಾಕಾಂಕ್ಷೆಯನ್ನು ಹುಟ್ಟುಹಾಕಿತ್ತು. ಪರಿಶ್ರಮದಿಂದ ಅಧ್ಯಯನ ನಡೆಸಿದ ಇವರು 2018 ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ದೇಶಕ್ಕೇ 410 ನೇ ರ್‍ಯಾಂಕ್ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತರಬೇತಿಯ ಬಳಿಕ ಕೋಝಿಕ್ಕೋಡ್‌ನಲ್ಲಿ ಸಹಾಯಕ ಜಿಲ್ಲಾಧಿಕಾರಿಯಾಗಿ, ಪೆರಿಂತಲ್‌ಮನ್ನಾದಲ್ಲಿ ಉಪ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಇವರು ನೋಂದಣಿ ಇಲಾಖೆ ಹಾಗೂ ಆಹಾರ ಸುರಕ್ಷತಾ ಆಯುಕ್ತರಾಗಿಯೂ ಜವಾಬ್ದಾರಿ ನಿಭಾಯಿಸಿದ್ದರು. ಈ ಹಿಂದೆ ಕಾಸರಗೋಡು ಜಿಲ್ಲಾಧಿಕಾರಿಯಾಗಿದ್ದ ಅರ್ಜುನ್ ಪಾಂಡಿಯನ್ ಅವರನ್ನು ಕೃಷಿ ಅಭಿವೃದ್ಧಿ ಮತ್ತು ರೈತ ಕಲ್ಯಾಣ ಇಲಾಖೆಯ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ಶ್ರೀಧನ್ಯ ಅವರಿಗೆ ಈ ಮಹತ್ವದ ಹೊಣೆ ಒಲಿದುಬಂದಿದೆ.

ಸೆಪ್ಟೆಂಬರ್ 16 ರಂದು ಕಾಸರಗೋಡು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ ಶ್ರೀಧನ್ಯ ಅವರು, ಜಿಲ್ಲೆಯಲ್ಲಿ ಪ್ರವಾಸೋದ್ಯಮ, ಕೃಷಿ, ಕೃಷಿ ಆಧಾರಿತ ಚಟುವಟಿಕೆಗಳು ಹಾಗೂ ಕೈಗಾರಿಕೆಗಳಿಗೆ ವ್ಯಾಪಕ ಅವಕಾಶಗಳಿವೆ. ಜಿಲ್ಲೆಯ ಭೌಗೋಳಿಕ ಹಿನ್ನೆಲೆ ಮತ್ತು ಲಭ್ಯವಿರುವ ಸರ್ಕಾರಿ ಭೂಮಿಯನ್ನು ಬಳಸಿಕೊಂಡು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದರ ಜೊತೆಗೆ ಕಾಸರಗೋಡಿನಲ್ಲಿ ಏಮ್ಸ್ ಆಸ್ಪತ್ರೆ ಸ್ಥಾಪನೆಯ ಪ್ರಸ್ತಾವನೆಯನ್ನು ಸರ್ಕಾರದೊಂದಿಗೆ ಚರ್ಚಿಸಿ ಪರಿಶೀಲಿಸಲಾಗುವುದು ಎಂದು ತಿಳಿಸಿರುವ ಅವರು, ಜಿಲ್ಲೆಯ ಸಮಗ್ರ ಪ್ರಗತಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಮಾಧ್ಯಮಗಳ ಸಹಕಾರ ಕೋರಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular