ಸಣ್ಣ ವಿಚಾರಕ್ಕೆ ಆರಂಭವಾದ ಜಗಳವೊಂದು ಕೆಲವೇ ಕ್ಷಣಗಳಲ್ಲಿ ದೈಹಿಕ ಹಲ್ಲೆಗೆ ತಿರುಗಿದ ಘಟನೆ ಗಾಜಿಯಾಬಾದ್‌ನಲ್ಲಿ ನಡೆದಿದೆ. ಸಾಕು ನಾಯಿಯನ್ನು ಲಿಫ್ಟ್‌ನಲ್ಲಿ ಕರೆದೊಯ್ಯುವ ವಿಚಾರಕ್ಕೆ ಇಬ್ಬರು ಮಹಿಳೆಯರ ನಡುವೆ ವಾಗ್ವಾದ ನಡೆದಿದ್ದು, ಬಳಿಕ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ಘಟನೆಯ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಸೆಪ್ಟೆಂಬರ್ 12ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ರಾಜ್ ನಗರ ಎಕ್ಸ್‌ಟೆನ್ಶನ್‌ನ ವಿಂಡ್ಸರ್ ಪ್ಯಾರಡೈಸ್ ವಸತಿ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಶಾಲೆಯಿಂದ ಮನೆಗೆ ಮರಳುತ್ತಿದ್ದ ಹೀನಾ ಎಂಬ ಶಿಕ್ಷಕಿ ಲಿಫ್ಟ್‌ಗೆ ತೆರಳಿದಾಗ, ಶ್ವೇತಾ ಸುಬೆ ಎಂಬ ಮಹಿಳೆ ತನ್ನ ಸಾಕು ನಾಯಿಯೊಂದಿಗೆ ಲಿಫ್ಟ್‌ನಲ್ಲಿದ್ದರು. ಈ ವೇಳೆ ಹೀನಾ ಲಿಫ್ಟ್ ಒಳಗೆ ಬರದಂತೆ ಶ್ವೇತಾ ಸೂಚಿಸಿದ್ದಾರೆ ಎನ್ನಲಾಗಿದೆ. ಇದೇ ವಿಚಾರ ಇಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ.
https://x.com/ndtv/status/2099404318139121762
ವಿವಾದ ತೀವ್ರಗೊಂಡಾಗ ಶ್ವೇತಾ ಕೋಲಿನಿಂದ ಹೀನಾಗೆ ಹೊಡೆದು, ಬಳಿಕ ಕಪಾಳಮೋಕ್ಷ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದಕ್ಕೆ ಹೀನಾ ಕೂಡ ಪ್ರತಿರೋಧ ವ್ಯಕ್ತಪಡಿಸಿದ್ದು, ಇಬ್ಬರ ನಡುವೆ ದೈಹಿಕ ಘರ್ಷಣೆ ನಡೆದಿದೆ. ಪರಿಸ್ಥಿತಿ ಕೈಮೀರಿದ ಹಿನ್ನೆಲೆಯಲ್ಲಿ ಸೊಸೈಟಿಯ ಸೆಕ್ಯುರಿಟಿ ಗಾರ್ಡ್ ಮಧ್ಯಪ್ರವೇಶಿಸಿ ಜಗಳವನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ.
ಜಗಳದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಘಟನೆಯ ದೃಶ್ಯಗಳು ಲಿಫ್ಟ್‌ನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ ಎನ್ನಲಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವಿಡಿಯೋದಲ್ಲಿ ಇಬ್ಬರು ಮಹಿಳೆಯರು ಪರಸ್ಪರ ವಾಗ್ವಾದ ನಡೆಸುತ್ತಿರುವುದು ಹಾಗೂ ಬಳಿಕ ಹೊಡೆದಾಡಿಕೊಳ್ಳುತ್ತಿರುವುದು ಕಾಣಿಸುತ್ತದೆ.
ಘಟನೆ ಬಳಿಕ ಹೀನಾ ನಂದಗ್ರಾಮ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ದೂರು ಸ್ವೀಕರಿಸಿರುವ ಪೊಲೀಸರು ಪ್ರಕರಣದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಘಟನೆಯ ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

