ಬೆಂಗಳೂರು: ರಾಜ್ಯ ವಿಧಾನಮಂಡಲದ ಮಳೆಗಾಲದ ಅಧಿವೇಶನವು ಇಂದಿನಿಂದ ಅಧಿಕೃತವಾಗಿ ಪ್ರಾರಂಭಗೊಂಡಿದೆ. ವಿಧಾನಸಭೆ ಹಾಗೂ ವಿಧಾನಪರಿಷತ್ ಎರಡೂ ಸದನಗಳಲ್ಲಿ ಮೊದಲ ದಿನದ ಕಲಾಪಗಳು ಪ್ರಮುಖ ರಾಜಕೀಯ ಬೆಳವಣಿಗೆಗಳು ಮತ್ತು ನಾಯಕರ ಅಭಿನಂದನೆಗಳೊಂದಿಗೆ ಜರುಗಿದವು.
ಹಂಗಾಮಿ ಸ್ಪೀಕರ್ ಆಗಿ ಹಿರಿಯ ನಾಯಕ ಟಿ.ಬಿ. ಜಯಚಂದ್ರ ಅವರು ವಿಧಾನಸಭೆ ಕಲಾಪವನ್ನು ಆರಂಭಿಸಿದರು. ಸದನಕ್ಕೆ ಹೊಸ ಸಚಿವರನ್ನು ಪರಿಚಯ ಮಾಡಿಕೊಡುವಂತೆ ಸ್ಪೀಕರ್ ಜಯಚಂದ್ರ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸೂಚಿಸಿದರು. ಆದರೆ, ಇಂದು ಮೊದಲು ಸಂತಾಪ ಸೂಚನಾ ಕಲಾಪವನ್ನು ನಡೆಸಿ, ನಾಳೆ ನೂತನ ಸಚಿವರ ಪರಿಚಯ ಮಾಡಿಕೊಡಿ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಮನವಿ ಮಾಡಿದರು.
ಈ ವೇಳೆ ವಿಪಕ್ಷಗಳ ಭಾವನೆಯನ್ನು ಗೌರವಿಸುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮ್ಮತಿಸಿದರು. ಬಳಿಕ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ನಡೆಯಿತು.
ವಿಧಾನಪರಿಷತ್ತಿನ ನೂತನ ಸಭಾನಾಯಕರಾಗಿ ನೇಮಕಗೊಂಡಿರುವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ವಿಪಕ್ಷ ಸದಸ್ಯರ ಬಳಿಗೆ ತೆರಳಿ ಕುಶಲೋಪಚಾರಿ ಮಾತನಾಡಿ ಅಭಿನಂದನೆಗಳನ್ನು ಸ್ವೀಕರಿಸಿದರು. ಪರಿಷತ್ ವಿಪಕ್ಷ ನಾಯಕರ ಪಕ್ಕದಲ್ಲೇ ಬಸವರಾಜ ಹೊರಟ್ಟಿ ಅವರ ಆಸನವನ್ನು ವ್ಯವಸ್ಥೆಗೊಳಿಸಲಾಗಿತ್ತು. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ನೂತನವಾಗಿ ಆಯ್ಕೆಯಾದ ಪರಿಷತ್ ಸದಸ್ಯರಾದ ವಿನಯ್ ಕಾರ್ತಿಕ್, ಮಳವಳ್ಳಿ ಶಿವಣ್ಣ, ರಘು ಕೌಟಿಲ್ಯ, ಲಿಂಗರಾಜ್ ಪಾಟೀಲ್ ಹಾಗೂ ಪಿ.ವಿ. ಮೋಹನ್ ಪರಸ್ಪರ ಶುಭಾಶಯ ಕೋರಿಕೊಂಡರು.

