HomeLatest News‘ಇಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ’: ರಾಗಿ ಮುದ್ದೆ ಏಕೆ ಇಷ್ಟು ಶಕ್ತಿಶಾಲಿ?

‘ಇಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ’: ರಾಗಿ ಮುದ್ದೆ ಏಕೆ ಇಷ್ಟು ಶಕ್ತಿಶಾಲಿ?

“ಇಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ” ರಾಗಿ ಮುದ್ದೆಯ ಬಲ ಮತ್ತು ಮಹತ್ವವನ್ನು ಒಂದೇ ಸಾಲಿನಲ್ಲಿ ಸಾರುವ ಜನಪ್ರಿಯ ಗಾದೆ ಮಾತಿಡಿದು. ಕನ್ನಡಿಗರ ದೈನಂದಿನ ಆಹಾರ ಸಂಸ್ಕೃತಿಯಲ್ಲಿ ಮುದ್ದೆಗೆ ಅತ್ಯಂತ ಪ್ರಮುಖ ಸ್ಥಾನವಿದೆ. ವಿಶೇಷವಾಗಿ ದಕ್ಷಿಣ ಕರ್ನಾಟಕದ ಮನೆಗಳಲ್ಲಿ ರಾಗಿ ಮುದ್ದೆಯದ್ದೇ ಕಾರಬಾರು. ಬಿಸಿಬಿಸಿ ಮುದ್ದೆಯು ಸಸ್ಯಾಹಾರ ಹಾಗೂ ಮಾಂಸಾಹಾರ ಎರಡಕ್ಕೂ ಅತ್ಯುತ್ತಮ ಸಾಟಿಯಾಗಿದೆ

ಕರ್ನಾಟಕದ ಒಂದೊಂದು ಭಾಗದಲ್ಲೂ ಒಂದೊಂದು ರೀತಿಯ ಸಾಂಪ್ರದಾಯಿಕ ಅಡುಗೆಗಳು ಅತ್ಯಂತ ಪ್ರಸಿದ್ಧಿ ಪಡೆದಿವೆ. ದಾವಣಗೆರೆಯ ಬೆಣ್ಣೆ ದೋಸೆ, ಬೆಳಗಾವಿಯ ಕುಂದಾ, ಕಲ್ಯಾಣ ಕರ್ನಾಟಕದ ಜೋಳದ ರೊಟ್ಟಿ ಹಾಗೂ ದಕ್ಷಿಣ ಕರ್ನಾಟಕದ ರಾಗಿ ಮುದ್ದೆ ಜನರ ನೆಚ್ಚಿನ ಸಾಂಪ್ರದಾಯಿಕ ಆಹಾರಗಳಾಗಿವೆ.

ನಮ್ಮ ಹಿರಿಯರು ಇಂತಹ ಪೌಷ್ಟಿಕ ಸಾಂಪ್ರದಾಯಿಕ ಆಹಾರಗಳನ್ನು ದಿನನಿತ್ಯದ ಭಾಗವಾಗಿಸಿಕೊಂಡಿದ್ದರಿಂದಲೇ, ಯಾವುದೇ ಆಧುನಿಕ ಕಾಯಿಲೆಗಳಿಲ್ಲದೆ ಬೆಟ್ಟದಷ್ಟು ದೈಹಿಕ ಸಾಮರ್ಥ್ಯದಿಂದ ಬಾಳಲು ಸಾಧ್ಯವಾಗಿತ್ತು. ಮುದ್ದೆ ತಿನ್ನುವುದರಿಂದ ನಮ್ಮ ದೇಹದ ಪ್ರತಿಯೊಂದು ಅಂಗಾಂಗಗಳೂ ಬಲಿಷ್ಠಗೊಳ್ಳುತ್ತವೆ. ಹಾಗಾದರೆ, ರಾಗಿ ಮುದ್ದೆಯಿಂದ ನಮಗೆ ಸಿಗುವ ಅಚ್ಚರಿಯ ಆರೋಗ್ಯ ಪ್ರಯೋಜನಗಳು ಏನೇನು? ಇಲ್ಲಿದೆ ಸಂಪೂರ್ಣ ವಿವರ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

150 ಗ್ರಾಂ ತೂಕದ ರಾಗಿ ಮುದ್ದೆಯಲ್ಲಿ ಏನೆಲ್ಲಾ ಪೋಷಕಾಂಶಗಳಿವೆ?

150 ಗ್ರಾಂ ತೂಕದ ಒಂದು ರಾಗಿ ಮುದ್ದೆಯಲ್ಲಿ ದೇಹಕ್ಕೆ ಅಗತ್ಯವಿರುವ ಅಪಾರ ಪ್ರಮಾಣದ ಪೋಷಕಾಂಶಗಳು ಅಡಗಿವೆ. ಇದರಲ್ಲಿರುವ ಸುಮಾರು 220 ಕ್ಯಾಲೋರಿ ಶಕ್ತಿಯು ದಿನವಿಡೀ ನಿಮ್ಮನ್ನು ಚುರುಕಾಗಿ ಮತ್ತು ಉತ್ಸಾಹದಿಂದಿರಲು ನೆರವಾಗುತ್ತದೆ.

ಪೋಷಕಾಂಶಗಳ ಪ್ರಮಾಣ ಮತ್ತು ಪ್ರಯೋಜನಗಳು:

ಸಂಕೀರ್ಣ ಕಾರ್ಬೋಹೈಡ್ರೇಟ್ : ಇದು ದೈಹಿಕ ಹಾಗೂ ಮಾನಸಿಕ ಆಯಾಸವನ್ನು ಕಡಿಮೆ ಮಾಡಿ ತತ್‌ಕ್ಷಣದ ಶಕ್ತಿ ನೀಡುತ್ತದೆ. ಅಲ್ಲದೆ, ಹಾರ್ಮೋನ್ ಸಮತೋಲನ ಮತ್ತು ಚಯಾಪಚಯ ಕ್ರಿಯೆಯನ್ನು ಚುರುಕುಗೊಳಿಸಲು ಸಹಕಾರಿಯಾಗಿದೆ.

ನಾರಿನಂಶ (Fiber – 4 ರಿಂದ 6 ಗ್ರಾಂ): ಸಮೃದ್ಧ ನಾರಿನಂಶವು ಸುಲಭ ಜೀರ್ಣಕ್ರಿಯೆಗೆ ನೆರವಾಗುವುದರ ಜೊತೆಗೆ ಮಲಬದ್ಧತೆ ಸಮಸ್ಯೆಯನ್ನು ತಡೆಯುತ್ತದೆ.

ಕ್ಯಾಲ್ಸಿಯಂ (100 ರಿಂದ 200 ಮಿ.ಗ್ರಾಂ): ದಿನನಿತ್ಯದ ಅಗತ್ಯತೆಯ ಶೇ. 15 ರಿಂದ 20 ರಷ್ಟು ಕ್ಯಾಲ್ಸಿಯಂ ಒದಗಿಸುವ ಮೂಲಕ ಮೂಳೆ ಹಾಗೂ ಹಲ್ಲುಗಳ ಬಲವರ್ಧನೆಗೆ ಬೆಂಬಲ ನೀಡುತ್ತದೆ.

ಕಬ್ಬಿಣಾಂಶ ( 3 ರಿಂದ 5 ಮಿ.ಗ್ರಾಂ): ದೇಹದಲ್ಲಿ ರಕ್ತಹೀನತೆ ನಿವಾರಿಸಿ, ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸಮತೋಲನದಲ್ಲಿಡುವುದರಿಂದ ಮಧುಮೇಹಿಗಳಿಗೆ ರಾಗಿ ಮುದ್ದೆ ಅತ್ಯುತ್ತಮ ಮತ್ತು ಸುರಕ್ಷಿತ ಆಹಾರವಾಗಿದೆ.

1. ತೂಕ ಇಳಿಕೆಗೆ ಸಹಕಾರಿ:

ಉತ್ತಮ ಜೀವನಶೈಲಿ, ವ್ಯಾಯಾಮ ಹಾಗೂ ಕಡಿಮೆ ಕ್ಯಾಲೋರಿ ಹೊಂದಿರುವ ಆಹಾರವು ದೇಹದ ತೂಕ ಇಳಿಸಲು ಅತ್ಯಗತ್ಯ. ರಾಗಿಯಲ್ಲಿ ಅತ್ಯಂತ ಕಡಿಮೆ ಕ್ಯಾಲೋರಿ ಇರುವುದರ ಜೊತೆಗೆ ‘ಟ್ರಿಪ್ಟೊಫಾನ್’ ಎಂಬ ಅಮೈನೋ ಆಮ್ಲವಿದೆ. ಇದು ಅತಿಯಾದ ಹಸಿವನ್ನು ನಿಯಂತ್ರಿಸಿ, ದೇಹದ ತೂಕ ಶೀಘ್ರವಾಗಿ ಕರಗಲು ಸಹಾಯ ಮಾಡುತ್ತದೆ ಎಂದು ದೆಹಲಿಯ ಪೌಷ್ಟಿಕ ತಜ್ಞರಾದ ಡಾ. ಆರುಷಿ ಅಗರ್ವಾಲ್ ತಿಳಿಸಿದ್ದಾರೆ.

2. ಮೂಳೆಗಳ ಬಲವರ್ಧನೆ:

ರಾಗಿಯಲ್ಲಿ ಧಾನ್ಯಗಳಲ್ಲೇ ಗರಿಷ್ಠ ಪ್ರಮಾಣದ ಕ್ಯಾಲ್ಸಿಯಂ ಹಾಗೂ ವಿಟಮಿನ್ ಡಿ ಅಂಶಗಳಿವೆ. ಇವು ನಮ್ಮ ಮೂಳೆಗಳನ್ನು ಗಟ್ಟಿಮುಟ್ಟಾಗಿಸಲು ನೆರವಾಗುತ್ತವೆ. ದೈನಂದಿನ ಊಟದಲ್ಲಿ ರಾಗಿ ಮುದ್ದೆ ಸೇರಿಸಿಕೊಳ್ಳುವುದರಿಂದ ವಯಸ್ಸಾದ ಮೇಲೆ ಕಾಡುವ ಆಸ್ಟಿಯೋಪೋರೋಸಿಸ್ (ಮೂಳೆ ಸವೆತ) ಸಮಸ್ಯೆಯಿಂದ ಸಂಪೂರ್ಣ ದೂರವಿರಬಹುದು.

3. ಮಧುಮೇಹ ನಿಯಂತ್ರಣ:

ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ರಾಗಿ ಮುದ್ದೆ ಅತ್ಯುತ್ತಮ ಸಂಜೀವಿನಿ ಇದ್ದಂತೆ. ಇದರಲ್ಲಿರುವ ಸಮೃದ್ಧ ನಾರಿನಂಶ (Fiber) ಹಾಗೂ ಪಾಲಿಫಿನಾಲ್ ಅಂಶಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ದಿಢೀರ್ ಏರಿಕೆಯಾಗದಂತೆ ತಡೆಯುತ್ತವೆ. ಜೊತೆಗೆ ಇದು ಜೀರ್ಣಾಂಗ ವ್ಯವಸ್ಥೆಯ ಕಾರ್ಯಕ್ಷಮತೆಯನ್ನೂ ಹೆಚ್ಚಿಸುತ್ತದೆ.

4. ಕೆಟ್ಟ ಕೊಲೆಸ್ಟ್ರಾಲ್ ಶಮನ:

ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದರೆ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿರುತ್ತದೆ. ರಾಗಿಯಲ್ಲಿರುವ ‘ಲೆಸಿಥಿನ್’ ಮತ್ತು ‘ಮೆಥಿಯೋನಿನ್’ ಎಂಬ ಪೋಷಕಾಂಶಗಳು ಯಕೃತ್ತಿನಲ್ಲಿ ಸಂಗ್ರಹವಾಗಿರುವ ಅಧಿಕ ಕೊಬ್ಬನ್ನು ಕರಗಿಸಿ, ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಶೇಖರಣೆಯಾಗದಂತೆ ರಕ್ಷಿಸುತ್ತವೆ.

5. ರಕ್ತಹೀನತೆ ನಿವಾರಣೆ:

ದೇಹದಲ್ಲಿ ಕಬ್ಬಿಣಾಂಶದ (Iron) ಕೊರತೆಯಾದಾಗ ರಕ್ತಹೀನತೆ ಅಥವಾ ಅನೀಮಿಯಾ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ರಾಗಿ ಮುದ್ದೆಯನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹಕ್ಕೆ ಅಗತ್ಯವಿರುವ ಕಬ್ಬಿಣಾಂಶ ದೊರೆತು, ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಸುಧಾರಣೆಯಾಗುತ್ತದೆ.

ನಮ್ಮ ದಿನನಿತ್ಯದ ಆಹಾರದಲ್ಲಿ ರಾಗಿ ಮುದ್ದೆಯನ್ನು ಸೇರಿಸಿಕೊಳ್ಳುವ ಮೂಲಕ ಯಾವುದೇ ಅಡ್ಡಪರಿಣಾಮಗಳಿಲ್ಲದೆ ನೈಸರ್ಗಿಕವಾಗಿಯೇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular