ಕಿರುತೆರೆ ನಟಿ ಆಕಾಂಕ್ಷ ಚಮೋಲ ಹಾಗೂ ‘ಅನುಪಮಾ’ ಧಾರಾವಾಹಿ ಖ್ಯಾತಿಯ ನಟ ಗೌರವ್ ಖನ್ನಾ ಅವರ ವಿಚ್ಛೇದನದ ಸುದ್ದಿ ಸದ್ಯ ಸಾಕಷ್ಟು ಚರ್ಚೆಯಲ್ಲಿದೆ. ಇದು ಪ್ರಚಾರಕ್ಕಾಗಿ ಅಥವಾ ರಿಯಾಲಿಟಿ ಶೋ ಟಿಆರ್ಪಿ ಹೆಚ್ಚಿಸಲು ಮಾಡುತ್ತಿರುವ ಸನ್ನಿವೇಶ ಎಂಬ ನೆಟ್ಟಿಗರ ಅನುಮಾನಗಳಿಗೆ ನಟಿ ಆಕಾಂಕ್ಷ ಸ್ಪಷ್ಟನೆ ನೀಡಿದ್ದು, ತಾವು ಕಾನೂನುಬದ್ಧವಾಗಿ ಬೇರೆಯಾಗುತ್ತಿರುವುದು ನಿಜ ಎಂದು ಸ್ಪಷ್ಟಪಡಿಸಿದ್ದಾರೆ.
ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ತಾವು ಲಾಕ್ ಅಪ್ ಶೋಗೆ ಪ್ರವೇಶಿಸುವ ಹಾಗೂ ಗೌರವ್ ಖಾಸಗಿ ಸಾಹಸಮಯ ಶೋನಲ್ಲಿ ಭಾಗವಹಿಸುವ ಮುಂಚೆಯೇ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ. ಕಳೆದ 18 ತಿಂಗಳುಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ನಾವು, ಸುಮಾರು ಎರಡು ತಿಂಗಳ ಹಿಂದೆ ಕಾನೂನುಬದ್ಧವಾಗಿ ವಿಚ್ಛೇದನ ಪಡೆಯಲು ನಿರ್ಧರಿಸಿದೆವು. ಆದರೆ ಇಬ್ಬರ ಕೆಲಸದ ಒತ್ತಡ ಮತ್ತು ವಿಭಿನ್ನ ಸಮಯದ ವೇಳಾಪಟ್ಟಿಯಿಂದಾಗಿ ದಾಖಲೆಗಳಿಗೆ ಸಹಿ ಮಾಡಲು ಕಾಲಾವಕಾಶ ಸಿಕ್ಕಿಲ್ಲ ಎಂದಿದ್ದಾರೆ.
ಕಲಾವಿದರ ಜೀವನ ಹೊರಗೆ ಕಾಣುವಷ್ಟು ಸರಳವಾಗಿರುವುದಿಲ್ಲ. ಇಬ್ಬರೂ ತಮ್ಮ ವೃತ್ತಿಜೀವನದಲ್ಲಿ ನಿರತರಾಗಿದ್ದಾಗ ಅಂದುಕೊಂಡಂತೆ ಎಲ್ಲವೂ ನಡೆಯುವುದಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. 2016 ರಲ್ಲಿ ಕಾನ್ಪುರದಲ್ಲಿ ವಿಜೃಂಭಣೆಯಿಂದ ವಿವಾಹವಾಗಿದ್ದ ಈ ಜೋಡಿ, ಈಗ ತಮ್ಮ 8 ವರ್ಷಗಳ ದಾಂಪತ್ಯ ಜೀವನಕ್ಕೆ ಪೂರ್ಣವಿರಾಮ ಇಡಲು ಮುಂದಾಗಿದೆ.

