ಬಾಲಿವುಡ್‌ನ ಜನಪ್ರಿಯ ಅಭಿನೇತ್ರಿ ಊರ್ಮಿಳಾ ಮಾತೋಂಡ್ಕರ್ ಮತ್ತು ಅವರ ಮಾಜಿ ಪತಿ ಮೊಹ್ಸಿನ್ ಅಖ್ತರ್ ನಡುವಿನ ವೈಯಕ್ತಿಕ ಜೀವನದ ವಿಚಾರಗಳು ಮತ್ತೆ ಸಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿವೆ. ಇತ್ತೀಚೆಗಷ್ಟೇ ಮೊಹ್ಸಿನ್ ಅವರು ತಮ್ಮ ಎರಡನೇ ಪತ್ನಿ ನಿಧಾ ಭಟ್ ಅವರೊಂದಿಗಿನ ಆರತಕ್ಷತೆ ಸಮಾರಂಭದ ಸುಂದರ ಕ್ಷಣಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ತಮ್ಮ ಹೊಸ ಜೀವನದ ಆರಂಭದ ಕುರಿತು ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದ ಅವರು, ನಿಧಾ ತಮ್ಮ ಜೀವನಕ್ಕೆ ಬಂದಿದ್ದಕ್ಕೆ ಧನ್ಯವಾದ ಅರ್ಪಿಸಿದ್ದರು.
ಆದರೆ, ಈ ಫೋಟೋಗಳು ಜಾಲತಾಣಗಳಲ್ಲಿ ಹಲ್ ಚಲ್ ಸೃಷ್ಟಿಸಿದ ಕೆಲವೇ ಗಂಟೆಗಳಲ್ಲಿ ಊರ್ಮಿಳಾ ಮಾತೋಂಡ್ಕರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಒಂದು ಪೋಸ್ಟ್ ಎಲ್ಲರ ಗಮನ ಸೆಳೆದಿದೆ. ಪ್ರೀತಿ, ನಿಷ್ಠೆ ಮತ್ತು ಸಮಯ ಇವೆಲ್ಲವೂ ಅತ್ಯಂತ ಬೆಲೆಬಾಳುವ ವಸ್ತುಗಳು, ಇಂತಹ ಅಪರೂಪದ ವಿಷಯಗಳನ್ನು ನಾನು ಇಷ್ಟಪಡುತ್ತೇನೆ ಎಂದು ಬರೆದುಕೊಳ್ಳುವ ಮೂಲಕ ಅವರು ಪರೋಕ್ಷವಾಗಿ ಯಾರನ್ನೋ ಗುರಿಯಾಗಿಸಿ ಸಂದೇಶ ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಊರ್ಮಿಳಾ ಹಾಗೂ ಮೊಹ್ಸಿನ್ ಅವರ ವೈವಾಹಿಕ ಜೀವನದ ಬಗ್ಗೆ ನೋಡುವುದಾದರೆ, ಇಬ್ಬರೂ 2016ರಲ್ಲಿ ಆತ್ಮೀಯರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಮನೆಯ ಸಮಾರಂಭವೊಂದರಲ್ಲಿ ಭೇಟಿಯಾಗಿದ್ದ ಇವರ ನಡುವೆ ಪ್ರೀತಿ ಚಿಗುರಿ, ನಂತರ ಎರಡು ಸಂಪ್ರದಾಯಗಳಂತೆ ವಿವಾಹ ನೆರವೇರಿತ್ತು. ವಯಸ್ಸಿನ ಅಂತರ ಹಾಗೂ ವಿಭಿನ್ನ ಧರ್ಮದ ಕಾರಣಕ್ಕೆ ಆಗ ಈ ಜೋಡಿಯ ಮದುವೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.
ಆದರೆ ಸುಮಾರು ಎಂಟು ವರ್ಷಗಳ ದಾಂಪತ್ಯದ ನಂತರ, 2024ರಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮೂಡಿ ಮುಂಬೈ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ರಂಗೀಲಾ, ಸತ್ಯ, ಭೂತ್ ಮುಂತಾದ ಸೂಪರ್ ಹಿಟ್ ಸಿನಿಮಾಗಳ ಮೂಲಕ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಊರ್ಮಿಳಾ, ಪ್ರಸ್ತುತ ತಮ್ಮ ವೈಯಕ್ತಿಕ ನಿರ್ಧಾರಗಳಿಂದಲೇ ಸುದ್ದಿಯಲ್ಲಿದ್ದಾರೆ.

