ಮುಂಬೈ: ಮುಂಬೈನ ವಿಲೇ ಪಾರ್ಲೆ ವೆಸ್ಟ್‌ನಲ್ಲಿರುವ ಶಾಂತ ಭವನ ವಸತಿ ಸಮುಚ್ಚಯದ ೧೧ನೇ ಮಹಡಿಯಲ್ಲಿ ಮಂಗಳವಾರ (ಆಗಸ್ಟ್ 11) ತಡರಾತ್ರಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಎರಡೂವರೆ ವರ್ಷದ ಕಂದಮ್ಮ ಹಾಗೂ ಯುವತಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಆರು ಜನರು ಗಾಯಗೊಂಡಿದ್ದು, ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.
ಬ್ಯಾಪ್ಟಿಸ್ಟಾ ರಸ್ತೆಯಲ್ಲಿರುವ 12 ಮಹಡಿಯ ಈ ಕಟ್ಟಡದ ಫ್ಲ್ಯಾಟ್ ಸಂಖ್ಯೆ 1101 ಮತ್ತು 1102ರಲ್ಲಿ ರಾತ್ರಿ ಸುಮಾರು 10,08ರ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಬೆಂಕಿಯ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ ಇದನ್ನು ‘ಲೆವೆಲ್2’ ಅವಘಡ ಎಂದು ಘೋಷಿಸಿತು. ಮುಂಬೈ ಅಗ್ನಿಶಾಮಕ ದಳ, ಪೊಲೀಸರು, ವಿದ್ಯುತ್ ಇಲಾಖೆ ಹಾಗೂ ೧೦೮ ಆಂಬ್ಯುಲೆನ್ಸ್ ಸಿಬ್ಬಂದಿ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದರು.
https://x.com/diiivvvaaaaa310/status/2087237567947358490
11ನೇ ಮಹಡಿಯ ಸುಮಾರು 4,000 ಚದರ ಅಡಿ ವಿಸ್ತೀರ್ಣದಲ್ಲಿದ್ದ ವಿದ್ಯುತ್ ವೈರಿಂಗ್, ಎಸಿ ಘಟಕ, ಸೋಫಾ, ಬೆಡ್ ಸೇರಿದಂತೆ ಬೃಹತ್ ಪ್ರಮಾಣದ ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿಯಾಗಿವೆ. ಕಾರ್ಯಾಚರಣೆ ವೇಳೆ ಟೆರೇಸ್‌ನಲ್ಲಿ ಸಿಲುಕಿದ್ದ 15 ಜನರನ್ನು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಮೃತರ ಹಾಗೂ ಗಾಯಾಳುಗಳ ವಿವರ:
ಮೃತಪಟ್ಟವರು: ನಾನಾವತಿ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲೇ ಅಬೀರ್ (2.5 ವರ್ಷ) ಎಂಬ ಮಗು ಹಾಗೂ ಅಂಕಿತಾ (23) ಎಂಬ ಯುವತಿ ಕೊನೆಯುಸಿರೆಳೆದಿದ್ದಾರೆ.
ಗಾಯಗೊಂಡವರು: ಗಾಯಗೊಂಡ ಅಗ್ನಿಶಾಮಕ ಸಿಬ್ಬಂದಿ ಮನೋಜ್ ಸೋನಾವಾನೆ (30) ಮತ್ತು ಶಿವಂ ದ್ವಿವೇದಿ (29) ಅವರಿಗೆ ಕೂಪರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ.
ಇನ್ನು ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾರ್ಥ್ (32) ಮತ್ತು ಹಿರೇನ್ (64) ಅವರ ಸ್ಥಿತಿ ಸ್ಥಿರವಾಗಿದ್ದು, ಯಶಸ್ವಿ (33) ಹಾಗೂ ಅಭಿಷೇಕ್ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.
ಸ್ಥಳದಲ್ಲಿ ೮ ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆ ನಡೆಸಿದ್ದು, ಮಧ್ಯರಾತ್ರಿ 1 ಗಂಟೆಯ ವೇಳೆಗೆ ಬೆಂಕಿ ಸಂಪೂರ್ಣವಾಗಿ ಹತೋಟಿಗೆ ಬಂದಿದೆ. ದುರಂತಕ್ಕೆ ನಿಖರ ಕಾರಣ ಏನೆಂಬುದು ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ ಎಂದು ಅಗ್ನಿಶಾಮಕ ಅಧಿಕಾರಿ ವಿ. ಭೋಸಲೆ ತಿಳಿಸಿದ್ದಾರೆ.

