HomeKarnatakaBidadi ರೆಡ್ ಜೋನ್‌ನಿಂದ ಮುಕ್ತಿ ಬೇಕು: ರೈತರ ನಿಯೋಗ ಸಿಎಂ ಡಿಕೆಶಿ ಭೇಟಿ

Bidadi ರೆಡ್ ಜೋನ್‌ನಿಂದ ಮುಕ್ತಿ ಬೇಕು: ರೈತರ ನಿಯೋಗ ಸಿಎಂ ಡಿಕೆಶಿ ಭೇಟಿ

ಬೆಂಗಳೂರು: ನಮಗೆ ರೆಡ್ ಜೋನ್ ನಿಂದ ಮುಕ್ತಿ ಬೇಕು. ಬಿಡದಿ ಟೌನ್ ಶಿಪ್ ಗೆ ನಮ್ಮ ಭೂಮಿ ನೀಡಲು ಸಿದ್ಧರಿದ್ದೇವೆ. ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ವ್ಯಾಪ್ತಿಯಲ್ಲಿ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿ ನಮ್ಮ ಸಂಕಷ್ಟಕ್ಕೆ ನೆರವಾಗಬೇಕು ಎಂದು ಬಿಡದಿಯ ಸುತ್ತಮುತ್ತಲ ರೈತರ ನಿಯೋಗ ಇಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ನಿಯೋಗವು ರೆಡ್ ಜೋನ್ ನಿಂದ ತಮಗಾಗಿರುವ ಕಷ್ಟ ವಿವರಿಸಿದರು. ತಕ್ಷಣವೇ ಅದನ್ನು ತೆಗೆದು ಹಾಕಿ ಎಂದು ಒತ್ತಾಯಿಸಿದರು.

ಯಾರದೋ ರಾಜಕೀಯ ಆಟಕ್ಕೆ ನಾವು ಬಲಿ ಆಗುತ್ತಿದ್ದೇವೆ. ನಾವು ಜಮೀನು ಕೊಡಲು ಸಿದ್ಧ. ತಕ್ಷಣವೇ ಪರಿಹಾರ ಕೊಡಿ ಎಂದು ಮನವಿ ಮಾಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಅವರು ಸ್ಪಂದಿಸಲಿಲ್ಲ. ನೀವಾದರೂ ನಮ್ಮ ಕಷ್ಟ ಬಗೆಹರಿಸಿ ಎಂದು ಮನವಿ ಮಾಡಿದರು.

ಬೈರಮಂಗಲ ಗ್ರಾಮದ ಸುನೀಲ್ ಎಂಬುವವರು ಮಾತನಾಡಿ, “ಕಳೆದ 20 ವರ್ಷಗಳಿಂದ ನಾವು ರೆಡ್ ಜೋನ್ ನಿಂದ ಸಂಕಷ್ಟ ಅನುಭವಿಸಿದ್ದೇವೆ. ಅಲ್ಲಿ ವೃಷಭಾವತಿ ಕೊಳಚೆ ನೀರಿನಿಂದ ವ್ಯವಸಾಯ ಕಷ್ಟವಾಗಿದೆ. ಅಲ್ಲಿ ಕೆಲವು ಭಾಗದಲ್ಲಿ ತೆಂಗಿನ ತೋಟ ಮೇಲುನೋಟಕ್ಕೆ ಹಸಿರಾಗಿ ಕಾಣಬಹುದು ಆದರೆ, ಇಳುವರಿ ಬರುತ್ತಿಲ್ಲ. ಕುಡಿಯುವ ಹಾಲು ಕೂಡ ಕಲುಷಿತಗೊಂಡಿದೆ. ರೆಡ್ ಜೋನ್ ಮಾಡಿರುವುದರಿಂದ ಅಭಿವೃದ್ಧಿ ಮಾಡಲು ಆಗುತ್ತಿಲ್ಲ. ಆಸ್ಪತ್ರೆ, ಕಲ್ಯಾಣಮಂಟಪ ನಿರ್ಮಾಣ ಸಾಧ್ಯವಿಲ್ಲ. ನಮ್ಮ ಪಕ್ಕದ ಊರುಗಳಲ್ಲಿ ಬ್ಯಾಂಕ್ ನಲ್ಲಿ ಜಮೀನಿಗೆ 1 ಕೋಟಿವರೆಗೆ ಸಾಲವ ಕೊಟ್ಟರೆ ನಮಗೆ 1ಲಕ್ಷರೂಪಾಯಿ ಕೂಡ ಸಾಲ ಸಿಗುತ್ತಿಲ್ಲ. ನಮಗೆ ಮದುವೆ ಹಾಗೂ ಕಷ್ಟಕಾಲದಲ್ಲಿ ನಮ್ಮ ಜಮೀನು ಮಾರಲು ಆಗುತ್ತಿಲ್ಲ. ಇವೆಲ್ಲವೂ ಅಂದಿನ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿ ಅವರ ಕೊಡುಗೆ. ಹೀಗಾಗಿ ನಮಗೆ ಈ ಸಮಸ್ಯೆಗಳಿಂದ ಮುಕ್ತಿ ದೊರಕಿಸಬೇಕು” ಎಂದು ಮನವಿ ಮಾಡಿದರು.

ನಮ್ಮಲ್ಲಿ ಕೊಳಚೆ ನೀರಿನ ವಾಸನೆ, ಸೊಳ್ಳೆಗಳ ಕಾಟದಿಂದ ನೆಮ್ಮದಿ ಜೀವನ ನಡೆಸಲು ಆಗುತ್ತಿಲ್ಲ. ನಮಗೆ ಹಣ ಬೇಡ, ನಾವು ಈ ಯೋಜನೆಯಲ್ಲಿ ಅಭಿವೃದ್ಧಿಪಡಿಸಿದ ಭೂಮಿ ಪಡೆದು, ಯೋಜನೆಯ ಪಾಲುದಾರರಾಗುತ್ತೇವೆ ಎಂದು ತಿಳಿಸಿದರು.

ನಾವು ಜೆಡಿಎಸ್ ಕಾರ್ಯಕರ್ತರೆ, ಅಭಿವೃದ್ಧಿ ಮೊದಲು, ಪಕ್ಷ ಆಮೇಲೆ. ನಮಗೆ ಟೌನ್ ಶಿಪ್ ಯೋಜನೆ ಬೇಕು. ಅಲ್ಲಿ ಹೋರಾಟ ಮಾಡುತ್ತಿರುವವರು ಬೇರೆ ಕ್ಷೇತ್ರಗಳಿಂದ ಕರೆ ತಂದಿರುವ ಪಕ್ಷದ ಕಾರ್ಯಕರ್ತರು. ನಮ್ಮಲ್ಲಿ ಬಹುತೇಕ ಜನರು ಟೌನ್ ಶಿಪ್ ಯೋಜನೆಗೆ ಭೂಮಿ ನೀಡಲು ಸಿದ್ಧರಿದ್ದಾರೆ ಎಂದು ವಿವರಿಸಿದರು.

ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ಅಧಿಸೂಚನೆ ಪ್ರಕಟ

ಬಿಡದಿಯ ನೂರಾರು ರೈತರು ಇಂದು ನನ್ನನ್ನು ಭೇಟಿ ಮಾಡಿದ್ದಾರೆ. ಅಂತಿಮ ಅಧಿಸೂಚನೆ ನೀಡಿ, ನಮಗೆ ಸಮಸ್ಯೆಗಳಿದ್ದು, ಜಮೀನು ನೀಡಲು ಸಿದ್ಧರಿದ್ದೇವೆ ಎಂದು ಹೇಳಿದರು. ನಾವು ಸ್ವಲ್ಪ ಹಣ ಪರಿಹಾರ ಹಾಗೂ ಸ್ವಲ್ಪ ಭೂ ಪರಿಹಾರವನ್ನು ಪಡೆಯುತ್ತೇವೆ ಎಂದು ಹೇಳಿದ್ದಾರೆ. ನಾನು ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿ ಬಾಕಿ ಇರುವ ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸುತ್ತೇವೆ. ಯಾರು ಸ್ವಇಚ್ಛೆಯಿಂದ ಜಮೀನು ನೀಡುತ್ತಾರೋ ಅವರಿಂದ ಪಡೆಯುತ್ತೇವೆ ಯಾರಿಗೂ ಬಲವಂತ ಮಾಡುವುದಿಲ್ಲ ಎಂದು ಹೇಳಿದರು.

ಜೆಡಿಎಸ್ ಪಾದಯಾತ್ರೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ನಾನು ನೋಡಿದೆ. ಅಲ್ಲಿ ಕೆಲವು ರೈತರು ಮಾತ್ರ ಇದ್ದರು. ಉಳಿದವರು ಮಂಡ್ಯ, ಮೈಸೂರು, ತುಮಕೂರು ಭಾಗದ ಕ್ಷೇತ್ರಗಳಿಂದ ಜನರನ್ನು ಕರೆ ತಂದಿದ್ದರು. ರಾಜಕೀಯಕ್ಕಾಗಿ ಹೋರಾಟ ಮಾಡುವವರನ್ನು ಬೇಡ ಎನ್ನಲು ಸಾಧ್ಯವೇ? ಅವರು ಇವತ್ತು ಪಾದಯಾತ್ರೆ ಮಾಡಿದ್ದರೂ ನಾವು ಬೇಡ ಎನ್ನುತ್ತಿರಲಿಲ್ಲ. ದಿನಾ ಪಾದಯಾತ್ರೆ ಮಾಡಲಿ. ಅವರು ಎಷ್ಟಾದರೂ ನಡೆಯಲಿ ಅವರನ್ನು ತಡೆಯಬೇಡಿ ಎಂದು ಪೊಲೀಸರಿಗೆ ಹೇಳಿದ್ದೇನೆ” ಎಂದು ಹೇಳಿದರು.

ವಿಜಯೇಂದ್ರ ಹೇಳಿಕೆ ವಿಚಾರವಾಗಿ, ಅವರು ಹೇಳಿರುವುದು ಸತ್ಯ. ಈಗಲೂ ರೈತರು ನಾವು ಭೂಮಿ ಕೊಡುತ್ತೇವೆ ನಮಗೆ ಪರಿಹಾರ ಬೇಕು ಎಂದು ಕೇಳುತ್ತಿದ್ದಾರೆ. ಬಿಜೆಪಿ ಆಡಳಿತದಲ್ಲಿ ಒಂದು ಸಾವಿರ ಎಕರೆಯನ್ನು ಸ್ವಾಧೀನಪಡಿಸಿಕೊಂಡಾಗ ರೈತರು 80-90 ಲಕ್ಷ ಪರಿಹಾರ ತೆಗೆದುಕೊಂಡರು. ಆಗ ಕುಮಾರಸ್ವಾಮಿ ಅವರು ಯಾಕೆ ಹೋರಾಟ ಮಾಡಲಿಲ್ಲ? ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಿ” ಎಂದು ಪ್ರಶ್ನಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular