ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದ್ದರೂ ಇನ್ನೂ ಖಾತೆ ಹಂಚಿಕೆಯಾಗಿಲ್ಲ. ವಿಧಾನಮಂಡಲ ಮಳೆಗಾಲದ ಅಧಿವೇಶನ ಆರಂಭಕ್ಕೆ ಇನ್ನೆರಡು ದಿನ ಬಾಕಿ ಇರುವ ಹಿನ್ನೆಲೆಯಲ್ಲಿ, ಅಧಿವೇಶನದೊಳಗೆ ಖಾತೆ ಹಂಚಿಕೆ ಪೂರ್ಣಗೊಳಿಸುವುದಾಗಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಅಧಿವೇಶನಕ್ಕೆ ಎರಡು ದಿನ ಮಾತ್ರ ಬಾಕಿ ಇರುವುದರಿಂದ ಇಂದಾದರೂ ಖಾತೆ ಹಂಚಿಕೆ ಪಟ್ಟಿ ಹೊರಬೀಳಬಹುದು ಎಂಬ ನಿರೀಕ್ಷೆ ಇದೆ. ಸಿಎಂ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ಹೈಕಮಾಂಡ್ ನಾಯಕರೊಂದಿಗೆ ಸರಣಿ ಮಾತುಕತೆ ನಡೆಸಿದ ಬಳಿಕ ಖಾತೆ ಹಂಚಿಕೆ ಪಟ್ಟಿ ಬಹುತೇಕ ಅಂತಿಮಗೊಂಡಿದೆ ಎನ್ನಲಾಗುತ್ತಿದೆ. ಆದರೆ ಕೇವಲ ಖಾತೆಗಳನ್ನು ಹಂಚಿಕೆ ಮಾಡಲಾಗುತ್ತದೆಯೇ ಅಥವಾ ಕೆಲವು ಸಚಿವರ ಖಾತೆಗಳನ್ನು ಅದಲುಬದಲು ಮಾಡಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಇತ್ತ ಸ್ಥಾನ ಕೈತಪ್ಪಿದ್ದಕ್ಕೆ ಹಿರಿಯ ಶಾಸಕರ ಅಸಮಾಧಾನವೂ ಮುಂದುವರಿದಿದೆ. ಹೀಗಾಗಿ ಕೆಲ ಸಚಿವರ ಬದಲಾವಣೆ, ಹೊಸಬರಿಗೆ ಅವಕಾಶ ಹಾಗೂ ಹೆಚ್ಚುವರಿ ಡಿಸಿಎಂ ಹುದ್ದೆಗಳ ಸೃಷ್ಟಿ ಸೇರಿದಂತೆ ಹಲವು ವಿಚಾರಗಳು ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಿವೆ ಎನ್ನಲಾಗುತ್ತಿದೆ.
ಶುಕ್ರವಾರದಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ನಾಳೆ ಆಗಸ್ಟ್ 12 ನಡೆಯಬೇಕಿದ್ದ ಸಚಿವ ಸಂಪುಟ ಸಭೆಯನ್ನು ಗುರುವಾರಕ್ಕೆ ಮುಂದೂಡಲಾಗಿದೆ. ಖಾತೆ ಹಂಚಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಬಳಿಕವೇ ಪೂರ್ಣ ಪ್ರಮಾಣದ ಸಂಪುಟ ಸಭೆ ನಡೆಸಲು ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಅಧಿವೇಶನದೊಳಗೆ ಸಚಿವರಿಗೆ ಖಾತೆ ಹಂಚಿಕೆಯಾಗಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಹೀಗಾಗಿ ಇಂದು ಅಥವಾ ನಾಳೆ ಖಾತೆ ಹಂಚಿಕೆ ಕಸರತ್ತು ಅಂತಿಮಗೊಂಡು ನೂತನ ಸಚಿವರಿಗೆ ಖಾತೆ ಹಂಚಿಕೆಯಾಗುವ ಸಾಧ್ಯತೆ ಇದೆ.

