HomeKarnatakaಎಲ್ಲಾ ಮಳಿಗೆಗಳಲ್ಲಿ ಗ್ರಾಹಕರಿಗೆ ಉಚಿತ ಕ್ಯಾರಿ ಬ್ಯಾಗ್ ಕಡ್ಡಾಯ: ಶುಲ್ಕ ವಿಧಿಸಿದ ಮಳಿಗೆಗೆ 30 ಸಾವಿರ...

ಎಲ್ಲಾ ಮಳಿಗೆಗಳಲ್ಲಿ ಗ್ರಾಹಕರಿಗೆ ಉಚಿತ ಕ್ಯಾರಿ ಬ್ಯಾಗ್ ಕಡ್ಡಾಯ: ಶುಲ್ಕ ವಿಧಿಸಿದ ಮಳಿಗೆಗೆ 30 ಸಾವಿರ ರೂ. ದಂಡ

ದಾವಣಗೆರೆ: ಕ್ಯಾರಿ ಬ್ಯಾಗ್‌ ಗೆ ಹೆಚ್ಚುವರಿ ಶುಲ್ಕ ವಿಧಿಸಿದ ಜುಡಿಯೊ ಮಳಿಗೆಗೆ 30 ಸಾವಿರ ರೂ. ದಂಡ ವಿಧಿಸಲಾಗಿದ್ದು, ಉಚಿತ ಕ್ಯಾರಿ ಬ್ಯಾಗ್ ನೀಡುವುದು ಕಡ್ಡಾಯ ಎಂದು ಜಿಲ್ಲಾ ಗ್ರಾಹಕರ ಆಯೋಗದ ಆದೇಶ ನೀಡಿದೆ.

ಗ್ರಾಹಕರಿಂದ ಕ್ಯಾರಿ ಬ್ಯಾಗ್‌ ಗೆ ಹೆಚ್ಚುವರಿಯಾಗಿ ದಂಡ ಅಥವಾ ಶುಲ್ಕ ವಸೂಲಿ ಮಾಡುವುದು ಅನ್ಯಾಯದ ವ್ಯಾಪಾರ ಹಾಗೂ ಸೇವೆಯಲ್ಲಾದ ನಿರ್ಲಕ್ಷ್ಯ ಎಂದು ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮಹತ್ವದ ತೀರ್ಪು ನೀಡಿದೆ.

ಪಿ.ಜೆ. ಬಡಾವಣೆಯ ಎವಿಕೆ ರಸ್ತೆಯಲ್ಲಿರುವ ಜುಡಿಯೊ (ತೋಶಾನಿ ಎಂಪೋರಿಯಂ ಅವೆನ್ಯೂ) ಮಳಿಗೆಯಲ್ಲಿ ಬಟ್ಟೆ ಖರೀದಿಸಿದ್ದ ದೂರುದಾರರಾದ ರಾಜೇಂದ್ರ S/o ಎಸ್.ಕೆ. ಬಸವರಾಜ್ ಅವರಿಂದ ಕ್ಯಾರಿ ಬ್ಯಾಗ್‌ ಗಾಗಿ ಹೆಚ್ಚುವರಿಯಾಗಿ ರೂ. 10/- ವಸೂಲಿ ಮಾಡಿದ್ದಕ್ಕಾಗಿ ಆಯೋಗವು ಈ ಆದೇಶ ಹೊರಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಕರಣದ ವಿವರ: ದೂರುದಾರರು ಜುಡಿಯೊ ಮಳಿಗೆಯಲ್ಲಿ ಬಟ್ಟೆಗಳನ್ನು ಖರೀದಿಸಿದಾಗ, ಅವುಗಳನ್ನು ಒಯ್ಯಲು ಕ್ಯಾರಿ ಬ್ಯಾಗ್ ನೀಡಲು ಮಳಿಗೆಯವರು ಹೆಚ್ಚುವರಿಯಾಗಿ ರೂ. 10- ಶುಲ್ಕ ಪಡೆದಿದ್ದರು. ಇದರಿಂದ ನೊಂದ ಗ್ರಾಹಕರು ಅನ್ಯಾಯದ ವ್ಯಾಪಾರ ಪದ್ಧತಿ ಹಾಗೂ ಸೇವೆಯಲ್ಲಿನ ಕೊರತೆಯನ್ನು ಪ್ರಶ್ನಿಸಿ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ದೂರನ್ನು ಕೂಲಂಕುಷವಾಗಿ ಪರಿಶೀಲಿಸಿದ ಆಯೋಗವು, ಗ್ರಾಹಕರಿಂದ ಕ್ಯಾರಿ ಬ್ಯಾಗ್ ಶುಲ್ಕ ವಸೂಲಿ ಮಾಡುವುದು ಕಾನೂನುಬಾಹಿರ ಹಾಗೂ ಸೇವಾ ಲೋಪ ಎಂದು ಸ್ಪಷ್ಟಪಡಿಸಿದೆ.

ಸೇವೆಯಲ್ಲಾದ ನಿರ್ಲಕ್ಷ್ಯ, ಅನ್ಯಾಯದ ವ್ಯಾಪಾರ ಮತ್ತು ದೂರಿನ ಖರ್ಚು ಸೇರಿ ದೂರುದಾರರಿಗೆ ಒಟ್ಟು ರೂ. 10,000/- ಗಳ ಪರಿಹಾರ ಹಾಗೂ ಪಾವತಿಸಿದ್ದ ರೂ. 10/- ಅನ್ನು ಹಿಂತಿರುಗಿಸುವಂತೆ ಜುಡಿಯೊ ಸಂಸ್ಥೆಗೆ ಆದೇಶಿಸಲಾಗಿದೆ. ಇದರೊಂದಿಗೆ, ಗ್ರಾಹಕ ಕಾನೂನು ನೆರವು ಖಾತೆಗೆ ರೂ. 20,000/- ಜಮಾ ಮಾಡಲು ಸೂಚಿಸಲಾಗಿದ್ದು, ಒಟ್ಟು ರೂ. 30,000 ಮೊತ್ತವನ್ನು ಆದೇಶದ ದಿನಾಂಕದಿಂದ ಒಂದು ತಿಂಗಳೊಳಗೆ ಪಾವತಿಸಲು ಆದೇಶಿಸಲಾಗಿದೆ.

ಎಲ್ಲಾ ಮಳಿಗೆಗಳಿಗೂ ಆದೇಶ ಅನ್ವಯ:

ಉತ್ಪನ್ನಗಳನ್ನು ಖರೀದಿಸುವ ಎಲ್ಲಾ ಗ್ರಾಹಕರಿಗೆ ಉಚಿತವಾಗಿ ಕ್ಯಾರಿ ಬ್ಯಾಗ್‌ ಗಳನ್ನು ಒದಗಿಸುವುದು ಕಡ್ಡಾಯವಾಗಿದೆ. ಈ ಆದೇಶವು ಕೇವಲ ಸದರಿ ಮಳಿಗೆಗೆ ಮಾತ್ರವಲ್ಲದೆ ಎಲ್ಲಾ ಸಗಟು ವ್ಯಾಪಾರಿಗಳು, ರಿಟೇಲ್ ಮಾರಾಟಗಾರರು, ದೊಡ್ಡ ಮಾಲ್‌ಗಳು, ಮೋರ್, ರಿಲಯನ್ಸ್, ಟ್ರೆಂಡ್ಸ್ ಹಾಗೂ ಇನ್ನಿತರ ಎಲ್ಲಾ ಮಾರಾಟ ಮಳಿಗೆಗಳಿಗೂ ಅನ್ವಯಿಸುತ್ತದೆ ಎಂದು ಆಯೋಗ ತಿಳಿಸಿದೆ.

ಈ ಮಹತ್ವದ ಆದೇಶವನ್ನು ದಾವಣಗೆರೆ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಹೆಚ್.ಎನ್. ಮೀನಾ ಹಾಗೂ ಸದಸ್ಯ ಸಿ.ಎಸ್. ತ್ಯಾಗರಾಜನ್ ಅವರನ್ನೊಳಗೊಂಡ ಪೀಠವು ಹೊರಡಿಸಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್ ಹಾಗೂ ಸಹಾಯಕ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular