ಬೀದರ್: ಬೀದರ್ ಜಿಲ್ಲೆ ಔರಾದ ತಾಲೂಕಿನ ವಡಗಾಂವ(ದೇ) ಗ್ರಾಮದಲ್ಲಿ ಎರಡು ತಿಂಗಳ ಮಗುವನ್ನು ಬಾವಿಗೆ ಎಸೆದು ಕೊಲೆ ಮಾಡಲಾಗಿದೆ.
ಹೆತ್ತ ತಾಯಿ, ಸೋದರ ಮಾವ, ಅಜ್ಜ ಮತ್ತು ಅಜ್ಜಿ ಸೇರಿ ಎರಡು ತಿಂಗಳ ಶಿಶುವನ್ನು ಬಾವಿಗೆ ಎಸೆದು ಕೊಲೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮಗು ನಾಪತ್ತೆಯಾಗಿರುವುದಾಗಿ ಹೇಳಿದ್ದ ಕುಟುಂಬದವರು ನಂತರ ದೇವರು ಮಗುವನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು ಕತೆ ಕಟ್ಟಿದ್ದರು.
ಈ ಬಗ್ಗೆ ಅನುಮಾನದ ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆ ವಿಚಾರ ಬಹಿರಂಗವಾಗಿದೆ. ಮಗುವಿನ ತಾಯಿ ವಾಣಿಶ್ರೀ(32), ಸೋದರಮಾವ ಸಂತೋಷ್ ಮಸ್ಕಲೆ(35), ಅಜ್ಜ ಬಸಪ್ಪ(70), ಅಜ್ಜಿ ರತ್ನಮ್ಮ(65) ಅವರನ್ನು ಸಂತಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ವಿಚಾರ ಗೊತ್ತಾಗಿದೆ.
ಯಾವ ಕಾರಣಕ್ಕೆ ಮಗುವನ್ನು ಕೊಲೆ ಮಾಡಿದ್ದಾರೆ ಎನ್ನುವುದು ತನಿಖೆಯಲ್ಲಿ ಗೊತ್ತಾಗಬೇಕಿದೆ. ವಾಣಿಶ್ರಿಯನ್ನು ಮಹಾರಾಷ್ಟ್ರದ ಕವಳಗಡ ಗ್ರಾಮದ ಸಂಜಯ್ ಜೊತೆಗೆ ಮದುವೆ ಮಾಡಿಕೊಡಲಾಗಿದ್ದು, ಹೆರಿಗೆಯ ಬಳಿಕ ತವರು ಮನೆಯಲ್ಲಿದ್ದರು.

