ಬೆಂಗಳೂರು: ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗಾಗಿ ಬೆಂಗಳೂರು ಪೊಲೀಸರು ಆಪರೇಷನ್ ಮುಕ್ತ ಕಾರ್ಯಾಚರಣೆ ನಡೆಸಿದ್ದು, ವೈಟ್ಫೀಲ್ಡ್ ವಿಭಾಗದಲ್ಲಿ 30 ಕಡೆ ದಾಳಿ ನಡೆಸಿದ್ದಾರೆ.
ವೈಟ್ ಫೀಲ್ಡ್ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು, ಆರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು 30 ಕಡೆ ದಾಳಿ ನಡೆಸಿ, ಅನುಮಾನಾಸ್ಪದವಾಗಿ ಕಂಡುಬಂದ ಸುಮಾರು 40 ಮಂದಿಯನ್ನು ವಶಕ್ಕೆ ಪಡೆದು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ವರ್ತೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿರುವ ಶೆಡ್ಗಳಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ನೂರಕ್ಕೂ ಹೆಚ್ಚು ಶೆಡ್ಗಳಿರುವ ಪ್ರದೇಶಗಳಲ್ಲೂ ಕಾರ್ಯಾಚರಣೆ ಕೈಗೊಂಡಿದ್ದು, ಅಲ್ಲಿರುವ ಪ್ರತಿಯೊಬ್ಬ ವ್ಯಕ್ತಿ ಹಾಗೂ ಮಹಿಳೆಯರ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.
ವಶಕ್ಕೆ ಪಡೆದವರ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ ಸೇರಿದಂತೆ ವಿವಿಧ ದಾಖಲೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ದಾಖಲೆಗಳಲ್ಲಿ ಅಥವಾ ಮಾಹಿತಿ ನೀಡುವಲ್ಲಿ ಗೊಂದಲ ಕಂಡುಬಂದಿರುವವರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ.
ಮುಖ್ಯವಾಗಿ ಎಸ್ಐಆರ್ (SIR) ಮಾಹಿತಿ ಸೇರಿದಂತೆ ಅವರ ಸ್ವಂತ ಊರು, ಪೋಸ್ಟ್ ಆಫೀಸ್ ಹಾಗೂ ಸ್ಥಳೀಯ ಪೊಲೀಸ್ ಠಾಣೆಯ ವಿವರಗಳನ್ನು ಪೊಲೀಸರು ಕೇಳುತ್ತಿದ್ದಾರೆ. ದಾಖಲೆಗಳಲ್ಲಿರುವ ಮಾಹಿತಿಗೂ ವ್ಯಕ್ತಿಗಳು ನೀಡುವ ಮಾಹಿತಿಗೂ ಹೊಂದಾಣಿಕೆ ಇದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.
ಪೊಲೀಸ್ ಕಮಿಷನರ್ ಸೂಚನೆ ಮೇರೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ವೈಟ್ಫೀಲ್ಡ್ ವಿಭಾಗದ ಡಿಸಿಪಿ ಸೈದುಲು ಅಡಾವತ್ ತಿಳಿಸಿದ್ದಾರೆ. ಕಾರ್ಯಾಚರಣೆ ವೇಳೆ ವಿದೇಶಿ ಪ್ರಜೆಗಳು ಪತ್ತೆಯಾದರೆ ಅವರ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ದಾಖಲೆಗಳಲ್ಲಿ ಅನುಮಾನ ಕಂಡುಬಂದಲ್ಲಿ ಹೆಚ್ಚಿನ ಪರಿಶೀಲನೆ ನಡೆಸಿ, ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (Foreigners Regional Registration Office/FRRO) ಮುಂದೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಅಗತ್ಯ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಕ್ರಮವಾಗಿ ನೆಲೆಸಿರುವುದು ದೃಢಪಟ್ಟ ವಿದೇಶಿ ಪ್ರಜೆಗಳನ್ನು ಅವರ ದೇಶಕ್ಕೆ ವಾಪಸ್ ಕಳುಹಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

