ಬೆಂಗಳೂರು: ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಆಗಸ್ಟ್ 9ರಂದು ನಾಳೆ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ತಾತ್ಕಾಲಿಕ ವ್ಯತ್ಯಯವಾಗಲಿದೆ ಎಂದು ಬಿ.ಎಂ.ಆರ್.ಸಿ.ಎಲ್ (ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ) ತಿಳಿಸಿದೆ.
ಅಗತ್ಯ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಬೈಯಪ್ಪನಹಳ್ಳಿ ಮತ್ತು ಎಂ.ಜಿ. ರಸ್ತೆ ನಡುವೆ ಬೆಳಗ್ಗೆ 2 ಗಂಟೆಗಳ ಕಾಲ ತಾತ್ಕಾಲಿಕವಾಗಿ ಮೆಟ್ರೋ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತಿದೆ ಟ್ರಿನಿಟಿ, ಎಂ.ಜಿ.ರಸ್ತೆ ಸೇರಿದಂತೆ 6 ನಿಲ್ದಾಣಗಳಲ್ಲಿ ಮೆಟ್ರೋ ಸಂಚಾರ ಇರುವುದಿಲ್ಲ.
ಮೆಟ್ರೋ ನೇರಳೆ ಮಾರ್ಗದ ಸ್ವಾಮಿ ವಿವೇಕಾನಂದ ರಸ್ತೆ ಮತ್ತು ಇಂದಿರಾನಗರ ಮೆಟ್ರೋ ನಿಲ್ದಾಣಗಳ ನಡುವೆ ಅಗತ್ಯ ನಿರ್ವಹಣಾ ಕಾಮಗಾರಿಯನ್ನು ಬಿ.ಎಂ.ಆರ್.ಸಿ.ಎಲ್ ಆಗಸ್ಟ್ 9ರಂದು ಅಂದರೆ ಭಾನುವಾರ ಕೈಗೊಳ್ಳಲಿದೆ. ಈ ಕಾಮಗಾರಿಯನ್ನು ಕೈಗೊಳ್ಳಲು ಅನುಕೂಲವಾಗುವಂತೆ, ಬೈಯಪ್ಪನಹಳ್ಳಿ ಮತ್ತು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣಗಳ ನಡುವಿನ ರೈಲು ಸೇವೆಯನ್ನು ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಅಂದರೆ ಎರಡು ಗಂಟೆಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು.
ಈ ಅವಧಿಯಲ್ಲಿ ಕೆಳಕಂಡ ಮಾರ್ಗಗಳಲ್ಲಿ ಮೆಟ್ರೋ ರೈಲು ಸೇವೆಗಳು ನಿಯಮಿತ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸಲಿವೆ.
ಚಲ್ಲಘಟ್ಟದಿಂದ ಎಂ.ಜಿ. ರಸ್ತೆ
ಬೈಯಪ್ಪನಹಳ್ಳಿಯಿಂದ ವೈಟ್ ಫೀಲ್ಡ್ (ಕಾಡುಗೋಡಿ)
ಮಾದಾವರದಿಂದ ಸಿಲ್ಕ್ ಇನ್ಸ್ಟಿಟ್ಯೂಟ್
ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರ
ಬೈಯಪ್ಪನಹಳ್ಳಿ ಮತ್ತು ಎಂ.ಜಿ. ರಸ್ತೆ ನಡುವಿನ ಮಾರ್ಗವನ್ನು ಒಳಗೊಂಡಂತೆ ಸಂಪೂರ್ಣ ನೇರಳೆ ಮಾರ್ಗದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಮೆಟ್ರೋ ರೈಲು ಸೇವೆಗಳು ಎಂದಿನಂತೆ ಪುನರಾರಂಭಗೊಳ್ಳಲಿವೆ. ಪ್ರಯಾಣಿಕರು ಈ ತಾತ್ಕಾಲಿಕ ಸೇವಾ ಸ್ಥಗಿತವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ಬಿಎಂಆರ್ಸಿಎಲ್ ಕೋರಿದೆ.

