ಮಡಿಕೇರಿ: ಗೇಟ್ ಸಮೇತ ಶಾಲಾ ಕಾಂಪೌಂಡ್ ಕುಸಿದು ಬಿದ್ದು 4 ವರ್ಷದ ಮಗು ಮೃತಪಟ್ಟ ಘಟನೆ ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಬಸವನಹಳ್ಳಿ ಹಾಡಿಯಲ್ಲಿ ನಡೆದಿದೆ.
ಸತೀಶ ಮತ್ತು ಪವಿತ್ರಾ ದಂಪತಿಯ ಪುತ್ರಿ ಅಪೂರ್ವ(4) ಮೃತಪಟ್ಟ ಮಗು. ಮಗುವಿನ ಸಹೋದರಿ ಮನೆಯ ಸಮೀಪ ಇರುವ ಗಿರಿಜನ ಆಶ್ರಮ ಶಾಲೆಯಲ್ಲಿ ಓದುತ್ತಿದ್ದು, ಪ್ರತಿದಿನ ಮಗು ಕೂಡ ಸಹೋದರಿಯ ಶಾಲೆಯ ಗೇಟ್ ಬಳಿ ಬಂದು ಆಟವಾಡುತ್ತಿದ್ದಳು.
ಇದೇ ರೀತಿ ಶುಕ್ರವಾರ ಸಂಜೆ ಗೇಟ್ ಬಳಿ ಬಂದಾಗ ಶಿಥಿಲವಾಗಿದ್ದ ಕಾಂಪೌಂಡ್ ಗೇಟ್ ಸಹಿತ ಬಿದ್ದಿದೆ. ಮಗುವಿನ ತಲೆಯ ಮೇಲೆ ಗೇಟ್ ಬಿದ್ದು ತೀವ್ರವಾಗಿ ಗಾಯಗೊಂಡ ಅಪೂರ್ವ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಶಾಸಕ ಡಾ. ಮಂತರ್ ಗೌಡ ದೂರವಾಣಿ ಮೂಲಕ ಮಗುವಿನ ಪೋಷಕರನ್ನು ಸಂಪರ್ಕಿಸಿ ಸಾಂತ್ವನ ಹೇಳಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.

