ಬೆಂಗಳೂರು: ನಗರದಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಮತ್ತೆ ಆತಂಕ ಮೂಡಿಸುವ ಘಟನೆ ಬೆಳಕಿಗೆ ಬಂದಿದೆ. ಪಾರ್ಸೆಲ್ ವಿತರಿಸಲು ಬಂದಿದ್ದ ಡೆಲಿವರಿ ಬಾಯ್ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿದ್ದಾನೆ ಎಂದು ಯವತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೊ ವೈರಲ್ ಆಗಿದೆ.
ಮಹಿಳೆ ತನ್ನ ಸ್ನೇಹಿತೆಗೆ ಜಾಕೆಟ್ ಕಳುಹಿಸಲು ಪಾರ್ಸೆಲ್ ಬುಕ್ ಮಾಡಿದ್ದರು. ಪಾರ್ಸೆಲ್ ನೀಡಲು ಬಂದಿದ್ದ ಡೆಲಿವರಿ ಏಜೆಂಟ್ ಮದ್ಯದ ಅಮಲಿನಲ್ಲಿದ್ದಂತೆ ಕಾಣುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ. ಪಾರ್ಸೆಲ್ ಪಡೆದುಕೊಂಡ ಬಳಿಕ ಅಲ್ಲಿಂದ ತೆರಳದೆ, ಮೊಬೈಲ್ ಚಾರ್ಜ್ ಹಾಕುವ ನೆಪದಲ್ಲಿ ಮನೆಯೊಳಗೆ ಬರಲು ಯತ್ನಿಸಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಇದಷ್ಟೇ ಅಲ್ಲದೆ, “ಕೇವಲ ಎರಡು ನಿಮಿಷ ಮನೆ ಒಳಗೆ ಬರಲು ಅವಕಾಶ ನೀಡಿ”, “ಸಿಗರೇಟ್ ಸೇದುತ್ತೇನೆ”, “ನಿಮ್ಮ ಮೊಬೈಲ್ ಸಂಖ್ಯೆ ನೀಡಿ” ಎಂದು ಪದೇ ಪದೇ ಒತ್ತಾಯಿಸಿದ್ದಾನೆ ಎಂದು ಮಹಿಳೆ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಹಲವು ಬಾರಿ ನಿರಾಕರಿಸಿದರೂ ಆತ ಒತ್ತಾಯ ಮುಂದುವರಿಸಿದ್ದರಿಂದ ತಾನು ಭಯಭೀತಳಾಗಿದ್ದಾಗಿ ತಿಳಿಸಿದ್ದಾರೆ.
ಈ ಘಟನೆಯ ಸಂಪೂರ್ಣ ವಿಡಿಯೊವನ್ನು ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಡೆಲಿವರಿ ಸಿಬ್ಬಂದಿ ವಿರುದ್ಧ ಮಹಿಳೆಯರಿಂದ ಇಂತಹ ಆರೋಪಗಳು ಹೆಚ್ಚುತ್ತಿರುವುದು ಮಹಿಳೆಯರ ಸುರಕ್ಷತೆ ಕುರಿತು ಮತ್ತೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಿಬ್ಬಂದಿಯ ಹಿನ್ನೆಲೆ ಪರಿಶೀಲನೆ, ತರಬೇತಿ ಹಾಗೂ ಸುರಕ್ಷತಾ ಕ್ರಮಗಳನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

