ಅಹಮದಾಬಾದ್: ಗುಜರಾತ್ನಲ್ಲಿ ಚಾಂದೀಪುರ ವೈರಸ್ (Chandipura Virus) ಹರಡುವಿಕೆ ಆತಂಕ ಸೃಷ್ಟಿಸಿದೆ. ಈ ಅಪರೂಪದ ವೈರಸ್ನಿಂದ ಇದುವರೆಗೆ 22 ಮಕ್ಕಳು ಮೃತಪಟ್ಟಿದ್ದು, ಹಲವು ಮಕ್ಕಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈರಸ್ ಹರಡುವಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೈ ಅಲರ್ಟ್ ಘೋಷಿಸಿದೆ.
ರಾಜ್ಯದಲ್ಲಿ ಇದುವರೆಗೆ 184ಕ್ಕೂ ಹೆಚ್ಚು ಶಂಕಿತ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 35 ಪ್ರಕರಣಗಳಲ್ಲಿ ಚಾಂದೀಪುರ ವೈರಸ್ ಸೋಂಕು ದೃಢಪಟ್ಟಿದೆ. ಇನ್ನೂ 11 ಮಾದರಿಗಳ ಪರೀಕ್ಷಾ ವರದಿ ಬಾಕಿಯಿದೆ ಎಂದು ರಾಜ್ಯ ಆರೋಗ್ಯ ಸಚಿವ ಪ್ರಫುಲ್ ಪನ್ಸೇರಿಯಾ ತಿಳಿಸಿದ್ದಾರೆ.
ಪ್ರಸ್ತುತ ಸೋಂಕು ದೃಢಪಟ್ಟಿರುವ ಏಳು ಮಕ್ಕಳು ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಆರು ಮಕ್ಕಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಗಾಂಧಿನಗರ, ಸಬರಕಾಂಠ–ಹಿಮ್ಮತ್ನಗರ, ಪಾಟಣ, ರಾಜ್ಕೋಟ್ ಹಾಗೂ ಭಾವನಗರದ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ. ಈ ವೈರಸ್ ಸೋಂಕಿಗೆ ಒಳಗಾದ ಎಲ್ಲರೂ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಮರಳು ನೊಣಗಳಿಂದ ವೈರಸ್ ಹರಡುವಿಕೆ
ಚಾಂದೀಪುರ ವೈರಸ್ ಹರಡುವಿಕೆಗೆ ಮರಳು ನೊಣಗಳು (Sand Flies) ಪ್ರಮುಖ ವಾಹಕಗಳಾಗಿವೆ. ಆದ್ದರಿಂದ ಪಶುಸಂಗೋಪನೆ ಪ್ರದೇಶಗಳಲ್ಲಿ ವ್ಯಾಪಕವಾಗಿ ಕೀಟನಾಶಕ ಸಿಂಪಡಣೆ ನಡೆಸಲಾಗುತ್ತಿದೆ. ಮಣ್ಣಿನ ಮನೆಗಳ ಗೋಡೆಗಳಲ್ಲಿರುವ ಬಿರುಕುಗಳನ್ನು ಮುಚ್ಚುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ.
ರೋಗಲಕ್ಷಣಗಳು ಕಂಡರೆ ತಕ್ಷಣ ಆಸ್ಪತ್ರೆಗೆ
ಈ ವೈರಸ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ತೀವ್ರ ಜ್ವರ, ವಾಂತಿ, ಪ್ರಜ್ಞಾಹೀನತೆ (ಮೂರ್ಛೆ) ಮೊದಲಾದ ಲಕ್ಷಣಗಳು ಕಂಡುಬಂದರೆ ಕೂಡಲೇ ಆಸ್ಪತ್ರೆಗೆ ದಾಖಲಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಅಗತ್ಯವಿದ್ದರೆ ಆಮ್ಲಜನಕ ಹಾಗೂ ವೆಂಟಿಲೇಟರ್ ಸೌಲಭ್ಯವಿರುವ ಐಸಿಯುವಿನಲ್ಲಿ ಚಿಕಿತ್ಸೆ ನೀಡಲು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ನಿರ್ದೇಶನ ನೀಡಲಾಗಿದೆ. ವೈರಸ್ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ವಿಶೇಷ ಕ್ರಮಗಳನ್ನು ಕೈಗೊಂಡಿದ್ದು, ಜನರು ಎಚ್ಚರಿಕೆಯಿಂದಿರಲು ಮನವಿ ಮಾಡಿದೆ.

