ಶಿವಮೊಗ್ಗ: ನಾಯಿ ಕಡಿದು ತೀವ್ರವಾಗಿ ಗಾಯಗೊಂಡಿದ್ದ ಎರಡು ವರ್ಷದ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಅಂಡಿಗೆ ಗ್ರಾಮದಲ್ಲಿ ನಡೆದಿದೆ.
ಶಿಕಾರಿಪುರ ತಾಲೂಕಿನ ಉಡುಗಣಿ ಗ್ರಾಮದ ಸಾದಿಕ್ ಮತ್ತು ಆಯಿಷಾ ದಂಪತಿಯ ಪುತ್ರ ಕಲಂದರ್(2) ಮೃತಪಟ್ಟ ಮಗು. ಆಯಿಷಾ ಅವರು ಪತಿ ಮತ್ತು ಮಗುವಿನ ಜೊತೆಗೆ ತವರೂರಾದ ಅಂಡಿಗೆ ಗ್ರಾಮದಲ್ಲಿ ವಾಸವಾಗಿದ್ದರು.
ಕಳೆದ ಜೂನ್ 18ರಂದು ಮಗು ಕಲಂದರ್ ಆಟವಾಡುತ್ತ ರಸ್ತೆಗೆ ಹೋದಾಗ ನಾಯಿಯೊಂದು ದಾಳಿ ಮಾಡಿ ಮುಖ ದೇಹದ ಇನ್ನಿತರ ಕಡೆ ಕಚ್ಚಿ ಗಾಯಗೊಳಿಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಮಗುವಿಗೆ ಸ್ಥಳೀಯ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.
ಮತ್ತೆ ರೋಗಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮಗು ಮೃತಪಟ್ಟಿದೆ.

