HomeKarnatakaಕಾವೇರಿ ಜಲ ವಿವಾದ: ಸರ್ವಪಕ್ಷ ಸಭೆಯಲ್ಲಿ ಮುಂದಿನ ನಡೆ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿವಕುಮಾರ್

ಕಾವೇರಿ ಜಲ ವಿವಾದ: ಸರ್ವಪಕ್ಷ ಸಭೆಯಲ್ಲಿ ಮುಂದಿನ ನಡೆ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ಕಾವೇರಿ ನದಿ ನೀರು ವಿಚಾರವಾಗಿ ಸರ್ವಪಕ್ಷ ಸಭೆಯಲ್ಲಿ ತಮಿಳುನಾಡಿಗೆ ನೀರು ಬಿಡುವ ಸಂಬಂಧ ಮುಂದಿನ ನಡೆ ಬಗ್ಗೆ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ಈಗಾಗಲೇ ಕಾವೇರಿ ನೀರಿನ ಬಗ್ಗೆ ತೀರ್ಪನ್ನು ಗಮನಿಸಿದ್ದೀರಿ. ಸಿಡಬ್ಲೂಆರ್​ಸಿ (Cauvery Water Regulation Committee) 15 ದಿನಗಳ ಕಾಲ ನಿತ್ಯ 3,500 ಕ್ಯುಸೆಕ್ ನೀರು ಬಿಡಲು ಆದೇಶ ನೀಡಿತ್ತು. ಅದನ್ನು ಸಿಡಬ್ಲೂಎಂಎ (Cauvery Water Management Authority) ಎತ್ತಿ ಹಿಡಿದಿದೆ.‌ ಇಂತಹ ಸಂಕಷ್ಟ ಕಾಲದಲ್ಲಿ 2016, 2017, 2013, 2018-19ರಲ್ಲೂ ಈತರದ ಆದೇಶ ನೀಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಬಹಳಷ್ಟು ಮಳೆ ಬಂದಿದೆ. ತಮಿಳುನಾಡಿಗೆ 177 ಟಿಎಂಸಿ ನೀರು ಬಿಡುವ ಜಾಗದಲ್ಲಿ 400 ಟಿಎಂಸಿ ಹೆಚ್ಚು ನೀರು ಬಿಡುವ ಅನಿವಾರ್ಯತೆ ಬಂತು. ಆ ನೀರು ಸಮುದ್ರ ಸೇರಿವೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಳಿಗುಂಡ್ಲುಗೆ 3,500 ಕ್ಯುಸೆಕ್ ನೀರು ಬಿಡುಗಡೆ ಮಾಡಲು ಆದೇಶ ನೀಡಿದೆ. ನಿನ್ನೆ ಸಭೆಯಲ್ಲಿ ನಿಮಗೆ ಜಾಸ್ತಿ ನೀರು ಬರುತ್ತಿದೆ ಹಾಗಾಗಿ ನಮಗೆ ನೀರು ಬಿಡುಗಡೆ ಮಾಡುವಂತೆ ತ.ನಾಡು ವಾದ ಮಾಡಿತು. ಜಲಾಶಯದಲ್ಲಿನ ನೀರಿನ ಮಟ್ಟ ಏನಿದೆ ಎಂಬ ವಿವರವನ್ನು ಯಾರಿಗೂ ಮುಚ್ಚಿಡಲು ಆಗಲ್ಲ. ಸದ್ಯ ಹಾರಂಗಿ ಅಣೆಕಟ್ಟಿನಲ್ಲಿ 95%, ಕಬಿನಿಯಲ್ಲಿ 83%, ಕೆಆರ್​ಎಸ್ 36%, ಹೇಮಾವತಿ 67%ರಷ್ಟು ನೀರು ಭರ್ತಿಯಾಗಿದೆ. ಈ ಅಂಕಿ-ಅಂಶ ಎಲ್ಲರ ಬಳಿ ಇದೆ. ಸದ್ಯ ಜಲಾಶಯಗಳಿಗೆ ನಿತ್ಯ 25,000 ಕ್ಯುಸೆಕ್ ನೀರು ಒಳಹರಿವು ಹೆಚ್ಚಾಗಿದೆ. ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ. 36 ಟಿಎಂಸಿ ನೀರು ಕುಡಿಯುವ ನೀರಿಗೆ ಬೇಕಾಗಿದೆ. ಜೂನ್-ಜುಲೈ ತಿಂಗಳಲ್ಲಿ ಕೇವಲ 0.6 ಟಿಎಂಸಿ ನೀರು ಬಿಳಿಗುಂಡ್ಲುಗೆ ಹರಿದಿದೆ. ಇದು 100 ವರ್ಷದ ಇತಿಹಾಸದಲ್ಲಿ ಅತ್ಯಂತ ಕಡಿಮೆ ನೀರು ಬಿಡುಗಡೆಯಾಗಿದೆ ಎಂದರು.

ಈ ವರ್ಷ ಕೂಡ ಶಾಸಕರ ಜೊತೆ ಸಭೆ ನಡೆಸಿದ್ದೇನೆ. ಕುಡಿಯುವ ನೀರಿಗೆ ಏನು ಮಾಡಬೇಕು ಅದನ್ನು ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರಗಳು ಇದ್ದಾಗ ಎಲ್ಲಾ ಸಂದರ್ಭದಲ್ಲಿ ರಾಜ್ಯದ ಹಿತ ಕಾಪಾಡಲು ಬದ್ಧತೆ ವ್ಯಕ್ತಪಡಿಸಿವೆ.‌ ಈಗಲೂ ನಾವು ಬದ್ಧರಿದ್ದೇವೆ. ದೆಹಲಿಯಲ್ಲಿ ಎಲ್ಲಾ ಸಂಸದರ ಜೊತೆ ಸಭೆ ನಡೆಸಿದ್ದೇನೆ. 36 ಸಂಸದರು ಸಭೆಯಲ್ಲಿ ಪಾಲ್ಗೊಂಡಿದ್ದರು. ಮೂರು ಕೇಂದ್ರ ಸಚಿವರು ಆಗಮಿಸಿದ್ದರು. ಪ್ರಾಧಿಕಾರಕ್ಕೆ ಅಪೀಲು ಮಾಡುವ ಮುನ್ನ ಕೇಂದ್ರ ಮಂತ್ರಿಗಳಿಗೆ ಕಾಪಿ ಕೊಟ್ಟಿದ್ದೆ. ಅವರು ಕೂಡ ಪ್ರಾಮಾಣಿಕ ಸಹಕಾರ ಕೊಟ್ಟಿದ್ದಾರೆ. ಆದರೆ, ಪ್ರಾಧಿಕಾರ ತ‌ಮಿಳುನಾಡಿಗೆ ನೀರು ಬಿಡಲು ಹೇಳಿದೆ. ತಮಿಳುನಾಡು 9.94 ಟಿಎಂಸಿ ಸಂಕಷ್ಟ ಸೂತ್ರದಡಿ ನೀರು ಬಿಡುಗಡೆಗೆ ವಾದಿಸಿದ್ದರು ಎಂದರು.

ಈ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆ ನಡೆಸಲು ತೀರ್ಮಾನಿಸಿದ್ದೇವೆ. ಮಾಜಿ ಸಿಎಂಗಳಿಗೆ, ಆ ಭಾಗದ ಸಂಸದರನ್ನು ಸರ್ವಪಕ್ಷ ಸಭೆಗೆ ಬರಲು ಕರೆದಿದ್ದೇನೆ. ಭಾನುವಾರ ಸರ್ವಪಕ್ಷ ಸಭೆ ಕರೆದಿದ್ದೇನೆ. ಈಗಾಗಲೇ ಕಾನೂನು ತಂಡದ ಜೊತೆ ಚರ್ಚೆ ನಡೆಸಿದ್ದೇನೆ. ಸರ್ವಪಕ್ಷ ಸಭೆಯಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ. ಕೆಲವರು ವಿರೋಧ ಮಾಡುತ್ತಿರಬಹುದು. ಅದಕ್ಕೆ ನನ್ನ ತಕರಾರು ಇಲ್ಲ. ಈ ವಿಚಾರದಲ್ಲಿ ಬೆಂಬಲ ನೀಡಲಿದ್ದಾರೆ ಎಂಬ ವಿಶ್ವಾಸ ಇದೆ ಎಂದರು.

ತಮಿಳುನಾಡು ಸಿಎಂ ಜೋಸೆಫ್ ವಿಜಯ್ ರಾಜ್ಯಕ್ಕೆ ಬರುವುದಾಗಿ ಇಂಗಿತ ವ್ಯಕ್ತಪಡಿಸಿದ್ದರು. ನಮ್ಮ ಮುಖ್ಯ ಕಾರ್ಯದರ್ಶಿಗೆ ಪತ್ರ ಬರದಿದ್ದರು. ಆ. 3ಕ್ಕೆ ಬರುವುದಾಗಿ ಹೇಳಿದ್ದಾರೆ. ಅವರ ಜೊತೆ ನಾನೂ ಮಾತನಾಡಿದ್ದೇನೆ. ಅವರ ರಾಜ್ಯದ ಹಿತ ಕಾಪಾಡುವುದು ಅವರ ಕರ್ತವ್ಯ. ನಮ್ಮ ರಾಜ್ಯದ ಹಿತ ಕಾಪಾಡುವುದು ನಮ್ಮ ಕರ್ತವ್ಯ. ನಾವಿಬ್ಬರೂ ಸೌಹಾರ್ದಯುತವಾಗಿ ಸಮಸ್ಯೆ ಪರಿಹರಿಸಲು ಯತ್ನಿಸಲಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ಸಭೆ ಬೇಡ ಹಾಗಾಗಿ ಸಿಎಂ ಜೋಸೆಫ್ ವಿಜಯ್ ಬೇರೊಂದು ದಿನ ರಾಜ್ಯಕ್ಕೆ ಬರುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular