ಇತ್ತಿಚೆಗಷ್ಟೆ ನೀಟ್ ಅಕ್ರಮದ ವಿರುದ್ಧ ಯುವ ಜನತೆ ಹೋರಾಟ ನಡೆಸಿ ಯಶಸ್ವಿಯಾದ ಬಳಿಕ ಸದ್ಯ ಮತ್ತೊಂದು ಹೋರಾಟದ ಕುರಿತು ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಜಾತಿ ಆಧಾರಿತ ಮೀಸಲಾತಿಯನ್ನು ತೆಗೆದುಹಾಕಿಸಲೇಬೇಕು ಎಂದು ಗುಂಪೊಂದು ಹುಟ್ಟಿಕೊಂಡಿದ್ದು, ‘ರಿಸರ್ವೇಶನ್ ಹಠಾವೋ ಆಂದೋಲನ’ ಎಂಬ ಪೇಜ್ ಸೃಷ್ಟಿಸಲಾಗಿದೆ.
ಈ ಪೇಜ್‌ಗೆ ಐವತ್ತು ಲಕ್ಷಕ್ಕೂ ಹೆಚ್ಚು ಅನುಯಾಯಿಗಳಿದ್ದು, ಮುಂದೊಂದು ದಿನ ದೊಡ್ಡ ಹೋರಾಟ ನಡೆಸಿ ಮೀಸಲಾತಿ ತೆರವು ಮಾಡಿಸಲೇಬೇಕು ಎಂದು ವಿಡಿಯೊಗಳನ್ನು ಹರಿಬಿಡಲಾಗುತ್ತಿದೆ.
ಮೀಸಲಾತಿಯಿಂದ ಎಸ್‌ಸಿ ಹಾಗೂ ಎಸ್‌ಟಿ ಜಾತಿಯವರಿಗೆ ಅನುಕೂಲವಾಗುತ್ತಿದೆ ಹಾಗೂ ತಮಗೆ ಅನ್ಯಾಯವಾಗುತ್ತಿದೆ ಎಂದು ವಾದ ಮಾಡುತ್ತಿರುವ ಈ ಗುಂಪಿಗೆ ಎಸ್‌ಸಿ ಹಾಗೂ ಎಸ್‌ಟಿ ಸಮುದಾಯದ ಜನ ಹಾಗೂ ಜಾತಿ ವಿರೋಧಿಗಳು ರಿಪ್ಲೈ ಕೊಟ್ಟಿದ್ದು, ಮೀಸಲಾತಿ ಜಾರಿಗೆ ಬಂದಿದ್ದೇ ಜಾತಿಯಿಂದ, ಹೀಗಾಗಿ ಜಾತಿ ತೆಗೆದುಹಾಕಿದರೆ ಮೀಸಲಾತಿ ತಾನಾಗಿಯೇ ತೊಲಗಲಿದೆ ಎಂದು ಕೌಂಟರ್ ನೀಡಿದ್ದಾರೆ.
ಈ ಕುರಿತು ಕನ್ನಡದ ಜನಪ್ರಿಯ ಕಂಟೆಂಟ್ ಕ್ರಿಯೇಟರ್ ಮಿನಿ ರೇಡಿಯೊ ಹರೀಶ್ ಸಹ ವಿಡಿಯೊ ಮಾಡಿದ್ದು, ಮೀಸಲಾತಿ ತೆಗೆದುಹಾಕಿ ಎನ್ನುವವರಿಗೆ ಜಾತಿ ನಿಂದನೆ ಈಗಲೂ ಇದೆ ಎಂಬುದರ ಕುರಿತು ಪಾಠ ಮಾಡಿದ್ದಾರೆ. ಮೊದಲಿಗೆ ತಾನು ಎಸ್‌ಸಿ ಬೋವಿ ಜನಾಂಗಕ್ಕೆ ಸೇರುವವ ತಾನೂ ಸಹ ಜಾತಿ ಮೀಸಲಾತಿ ತೆಗೆದುಹಾಕಬೇಕು ಎಂಬುದನ್ನು ಬೆಂಬಲಿಸುತ್ತೇನೆ ಎಂದು ಹೇಳಿದ ಹರೀಶ್ ಜಾತಿ ಮೀಸಲಾತಿ ಹೋಗಬೇಕು ಎಂದರೆ ನೀವೆಲ್ಲ ಅಂತರ್ಜಾತಿ ವಿವಾಹವನ್ನು ಮಾಡಿಸಬೇಕು, ನಿಮ್ಮ ಮನೆಯಲ್ಲಿ ಯಾರಾದರೂ ಎಸ್‌ಸಿ ಅಥವಾ ಎಸ್‌ಟಿ ಹುಡುಗ, ಹುಡುಗಿಯನ್ನು ಇಷ್ಟಪಡುತ್ತಿದ್ದರೆ ಅವರಿಗೆ ಮದುವೆ ಮಾಡಿಸಿ, ಆಗ ಹಿಂದೂಗಳು ಇನ್ನು ಒಗ್ಗಟ್ಟಾಗುತ್ತಾರೆ ಅಲ್ವಾ? ನಾವೆಲ್ಲ ಎಸ್‌ಸಿ, ಎಸ್‌ಟಿಗಳ ಜತೆ ಮದುವೆ ಮಾಡಿಸುವುದಿಲ್ಲ ಎಂದರೆ ನೆನಪಿಟ್ಟುಕೊಳ್ಳಿ ಜಾತಿ ಮೀಸಲಾತಿ ಯಾವತ್ತೂ ಹೋಗುವುದಿಲ್ಲ ಎಂದು ಖಡಕ್ ಕೌಂಟರ್ ಕೊಟ್ಟಿದ್ದಾರೆ.
ಇನ್ನು ಅಂಬೇಡ್ಕರ್ ವಿರುದ್ಧ ನಾಲಿಗೆಹರಿಬಿಡುವ ಯುವತಿಯರನ್ನೂ ಸಹ ಉಲ್ಲೇಖಿಸಿದ ಇವರು ತುಂಬಾ ವರ್ಷಗಳ ಹಿಂದೆ ಹೆಣ್ಣುಮಕ್ಕಳಿಗೆ ಹೆಚ್ಚು ಓದುವ ಹಕ್ಕು ಇರಲಿಲ್ಲ, ಇಷ್ಟಬಂದಂತೆ ಬದುಕುವ ಹಕ್ಕು ಇರಲಿಲ್ಲ, ಇದನ್ನೆಲ್ಲ ಹೋಗಲಾಡಿಸಿ ಮಹಿಳೆಯರಿಗೆ ಒಳ್ಳೆಯ ಜೀವನ ಸಿಗುವ ಹಾಗೆ ಮಾಡಿದ್ದು ಇದೇ ಅಂಬೇಡ್ಕರ್ ಎಂದರು.
ಈ ದೇಶದಲ್ಲಿ ಮೀಸಲಾತಿಯನ್ನು ತಂದಿದ್ದೇ ಎಸ್‌ಸಿ ಹಾಗೂ ಎಸ್‌ಟಿ ಜಾತಿಯವರ ಮೇಲೆ ಜರುಗುತ್ತಿರುವ ಅನ್ಯಾಯವನ್ನು ತಡೆಯುವುದಕ್ಕಾಗಿ, ಹಲವಾರು ಮಂದಿ ಆ ಥರ ಏನೂ ಇಲ್ಲ ಎಂದು ಹೇಳಬಹುದು, ಆದರೆ ಈಗಲೂ ಸಹ ಹಲವಾರು ಕಡೆ ಎಸ್‌ಸಿ ಹಾಗೂ ಎಸ್‌ಟಿ ಜನರ ಮೇಲೆ ಶೋಷಣೆ ನಡೆಯುತ್ತಲೇ ಇದೆ, ದೇವಸ್ಥಾನಗಳಿಗೆ ಪ್ರವೇಶ ನೀಡುತ್ತಿಲ್ಲ, ಎಸ್‌ಸಿ, ಎಸ್‌ಟಿಯವರು ಸಾಮಾನ್ಯ ಕೆಟಗರಿಯವರನ್ನು ಇಷ್ಟಪಟ್ಟರೆ ಹಲ್ಲೆ ಮಾಡುವ ಕೆಲಸಗಳೂ ಸಹ ನಡೆಯುತ್ತಿವೆ, ಹೀಗಿರುವಾಗ ಮೀಸಲಾತಿ ತೆಗೆದರೆ ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳಿಗೂ ಸಹ ಪ್ರವೇಶ ನೀಡಲ್ಲ ಎನ್ನುವ ಮುಂದಾಲೋಚನೆಯಿಂದಲೇ ಇನ್ನೂ ಸಹ ಮೀಸಲಾತಿ ಜೀವಂತವಾಗಿದೆ, ಎಲ್ಲಿಯವರೆಗೆ ನಿಮ್ಮ ಹೆಸರಿನ ಪಕ್ಕ ನಿಮ್ಮ ಜಾತಿ ಹೆಸರು ಇರುತ್ತೋ, ಅಲ್ಲಿಯವರೆಗೂ ಮೀಸಲಾತಿ ಇದ್ದೇ ಇರುತ್ತೆ ಎಂದು ಹರೀಶ್ ವಾಸ್ತವತೆಯ ಕರಾಳತೆಯನ್ನು ಬಿಚ್ಚಿಟ್ಟರು.
https://www.instagram.com/reel/DbXeo98T5ao

