ಬೆಂಗಳೂರು-ರಾಜಕೀಯ ಲಾಭಕ್ಕಾಗಿ ವಿರೋಧ ಪಕ್ಷಗಳ ನಾಯಕರ ತೇಜೋವಧೆ ಮಾಡಲು ಬಳಸುವ ವಾಮಮಾರ್ಗಗಳು ಮತ್ತು ಸೃಷ್ಟಿಸುವ ಸುಳ್ಳುಗಳು ಹೆಚ್ಚು ದಿನ ಉಳಿಯುವುದಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ ಎಂಬುದು ಇತಿಹಾಸದ ಅದೆಷ್ಟೋ ಘಟನೆಗಳಿಂದ ದೃಢಪಟ್ಟಿದೆ. ಇದಕ್ಕೆ ತಾಜಾ ನಿದರ್ಶನವೆಂಬಂತೆ, ದೇಶ ಕಂಡ ಅತ್ಯಂತ ಪ್ರಾಮಾಣಿಕ, ಸಭ್ಯ ಹಾಗೂ ಮೇಧಾವಿ ಆಡಳಿತಗಾರ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಮೇಲಿನ ಆರೋಪಗಳು ಸುಳ್ಳು ಎಂಬುದು ಕಾನೂನು ಹಾಗೂ ನ್ಯಾಯಾಲಯದ ಮೂಲಕವೇ ಜಗತ್ತಿಗೆೆ ಮುಕ್ತವಾಗಿ ಅನಾವರಣಗೊಂಡಿದೆ.
ಈ ಕುರಿತು ರಾಜ್ಯದ ಗೃಹ ಸಚಿವರಾದ ಪ್ರಿಯಾಂಕ ಖರ್ಗೆ ಅವರು ತಮ್ಮ ಅಧಿಕೃತ ‘ಎಕ್ಸ್’ (X) ಸಾಮಾಜಿಕ ಜಾಲತಾಣದ ಖಾತೆಯ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೇಂದ್ರದ ದುಷ್ಟ ರಾಜಕಾರಣವನ್ನು ಕಟುವಾಗಿ ಟೀಕಿಸಿದ್ದಾರೆ.
2ಜಿ ಯಿಂದ ಕಲ್ಲಿದ್ದಲು ತನಕ: ಆರೋಪಗಳ ಪತನ
ಕಾಂಗ್ರೆಸ್ ಪಕ್ಷ ಹಾಗೂ ನಾಯಕರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ನಾಯಕರು ಹೂಡಿದ ಕುತಂತ್ರಗಳು ಮತ್ತು 2ಜಿ ಸ್ಪೆಕ್ಟ್ರಂ ಹಗರಣದ ಕಾಲದಲ್ಲಿ ಮಾಡಿದ ಆಧಾರರಹಿತ ಆರೋಪಗಳು ಈಗಾಗಲೇ ನ್ಯಾಯಾಲಯದಲ್ಲಿ ಸುಳ್ಳೆಂದು ಸಾಬೀತಾಗಿ ಇತಿಹಾಸ ಸೇರಿವೆ. ಇದೀಗ ಕಲ್ಲಿದ್ದಲು ಹಂಚಿಕೆ (Coal Block Allocation) ಪ್ರಕರಣದಲ್ಲೂ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಮೇಲಿದ್ದ ಕಪ್ಪುಚುಕ್ಕೆ ಮಾಸಿ, ಅವರ ಪ್ರಾಮಾಣಿಕತೆಗೆ ಸಂಪೂರ್ಣ ಮುಕ್ತಿ ಸಿಕ್ಕಿದೆ.
ಭಾರತೀಯ ರಾಜಕಾರಣದಲ್ಲಿ ಸುಶಿಕ್ಷಿತ ಹಾಗೂ ಸೌಮ್ಯ ಸ್ವಭಾವದ ನಾಯಕರೆಂದೇ ಹೆಸರಾVದ ಡಾ. ಮನಮೋಹನ್ ಸಿಂಗ್ ಅವರನ್ನು ರಾಜಕೀಯ ದುರುದ್ದೇಶಕ್ಕಾಗಿ ಹೇಗೆಲ್ಲಾ ಅಪಪ್ರಚಾರ ಮಾಡಲಾಗಿತ್ತು ಎಂಬುದು ಎಲ್ಲರಿಗೂ ತಿಳಿದಿದೆ. ಅಂತಹ ಮೇಧಾವಿ ನಾಯಕನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸಿದವರಿಗೆ ನ್ಯಾಯಾಲಯದ ತೀರ್ಪುಗಳು ತಕ್ಕೇಟು ನೀಡಿವೆ. ಆದರೆ, ಅಂತಹ ಅನುಭವಿ ಮತ್ತು ದಕ್ಷ ಆಡಳಿತಗಾರರನ್ನು ಕಳೆದುಕೊಂಡಿರುವ ಇಂದಿನ ದೇಶದ ರಾಜಕೀಯ ವ್ಯವಸ್ಥೆಯು ದುಷ್ಟ ರಾಜಕಾರಣದ ಗಂಭೀರ ಪರಿಣಾಮಗಳನ್ನು ಎದುರಿಸುತ್ತಿದೆ ಎಂದು ಪ್ರಿಯಾಂಕ ಖರ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಲಾಭಕ್ಕಾಗಿ ಇಲ್ಲಸಲ್ಲದ ಸುಳ್ಳುಗಳ ಗೋಪುರಗಳನ್ನು ನಿರ್ಮಿಸುವ ಬಿಜೆಪಿಯ ತಂತ್ರಗಾರಿಕೆಗಳು ದೀರ್ಘಕಾಲ ನಿಲ್ಲುವುದಿಲ್ಲ ಎಂಬುದು ಕಾಲದಿಂದ ಕಾಲಕ್ಕೆ ಸಾಬೀತಾಗುತ್ತಲೇ ಬಂದಿದೆ. ಸತ್ಯ ಯಾವಾಗಲೂ ನಿಧಾನವಾಗಿ ಆದರೂ ದೃಢವಾಗಿ ಗೆಲ್ಲುತ್ತದೆ ಎಂಬುದಕ್ಕೆ ಮನಮೋಹನ್ ಸಿಂಗ್ ಅವರ ಮೇಲಿನ ಪ್ರಕರಣಗಳ ವಿಲೇವಾರಿಯೇ ಸಾಕ್ಷಿಯಾಗಿದೆ ಎಂದು ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಳಿ ನಡೆಸಿದ್ದಾರೆ.
ಅಪಪ್ರಚಾರದ ಮುಖವಾಡ ಕಳಚಿಕೊಂಡ ಬಿಜೆಪಿ
ಸತ್ಯಕ್ಕೆ ದೂರವಾದ ಸುಳ್ಳು ಆರೋಪಗಳ ಮೂಲಕ ವಿರೋಧ ಪಕ್ಷಗಳ ನಾಯಕರ ನೈತಿಕ ಸ್ಥೈರ್ಯ ಕುಗ್ಗಿಸಲು ಯತ್ನಿಸುವ ಧೋರಣೆ ಇಂದಿನ ರಾಜಕೀಯದಲ್ಲಿ ಬದಲಾಗಬೇಕಿದೆ. ಡಾ. ಮನಮೋಹನ್ ಸಿಂಗ್ ಅವರ ಮೇಲಿನ ದಳದ ಕಳಂಕ ಕಳಚಿರುವುದರೊಂದಿಗೆ, ಬಿಜೆಪಿಯ ರಾಜಕೀಯ ಪ್ರೇರಿತ ಅಪಪ್ರಚಾರದ ಮುಖವಾಡ ಕಳಚಿಕೊಂಡಂತಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

