ಚೆನ್ನೈ- ತಮಿಳುನಾಡು ರಾಜಕೀಯ ವಲಯದಲ್ಲಿ ಮತ್ತೊಮ್ಮೆ ಭಾರೀ ಸಂಚಲನ ಮೂಡುವ ಸಾಧ್ಯತೆಯಿದೆ.
ಆಡಳಿತರೂಢ ದ್ರಾವಿಡ ಮುನ್ನೆಟ್ರ ಕಳಗಂ (ಡಿಎಂಕೆ) ಪಕ್ಷಕ್ಕೆ ಸೇರ್ಪಡೆಗೊಂಡು ಕೇವಲ ಆರು ತಿಂಗಳಷ್ಟೇ ಕಳೆದಿರುವ ಮಾಜಿ ಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ (ಒಪಿಎಸ್) ಅವರು, ಪಕ್ಷದಲ್ಲಿ ತಮಗೆ ಸಿಕ್ಕಿರುವ ಪಾತ್ರ ಹಾಗೂ ಸ್ಥಾನಮಾನದ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದು, ಶೀಘ್ರದಲ್ಲೇ ಪಕ್ಷ ತೊರೆಯುವ ಗಂಭೀರ ಯೋಚನೆಯಲ್ಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಅಣ್ಣಾ ಡಿಎಂಕೆ (ಎಐಎಡಿಎಂಕೆ) ಪಕ್ಷದಲ್ಲಿ ಉಂಟಾದ ತೀವ್ರ ಆಂತರಿಕ ಅಧಿಕಾರ ಹೋರಾಟ ಹಾಗೂ ಎಡಪ್ಪಾಡಿ ಕೆ. ಪಳನಿಸ್ವಾಮಿ (ಇಪಿಎಸ್) ಅವರೊಂದಿಗಿನ ಮುಸುಕಿನ ಗುದ್ದಾಟದಿಂದಾಗಿ ಒಪಿಎಸ್ ಪಕ್ಷದಿಂದ ಹೊರಬಹಾಕಲ್ಪಟ್ಟಿದ್ದರು.
ದೀರ್ಘಕಾಲದವರೆಗೆ ಸ್ವತಂತ್ರವಾಗಿ ಹಾಗೂ ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡಿದ್ದ ಅವರು, 2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಮುನ್ನ ಅಂದರೆ ಫೆಬ್ರವರಿ 27 ರಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ನೇತೃತ್ವದಲ್ಲಿ ಡಿಎಂಕೆ ಸೇರ್ಪಡೆಗೊಂಡಿದ್ದರು.
ಡಿಎಂಕೆ ಸೇರುವ ಸಂದರ್ಭದಲ್ಲಿ ದ್ರಾವಿದ ತತ್ವಸಿದ್ಧಾಂತದಡಿ ಪ್ರಾಮಾಣಿಕ ಕಾರ್ಯಕರ್ತನಾಗಿ ಸೇವೆ ಸಲ್ಲಿಸುವುದಾಗಿ ಅವರು ಘೋಷಿಸಿದ್ದರು. ಆದರೆ, ಪಕ್ಷ ಸೇರಿ ಅರ್ಧ ವರ್ಷ (6 ತಿಂಗಳು) ಕಳೆಯುವುದರೊಳಗೆ ಪಕ್ಷದ ಒಳಗಿನ ಕೆಲವೊಂದು ಬೆಳವಣಿಗೆಗಳು ಮತ್ತು ತಮಗೆ ನೀಡಿರುವ ಜವಾಬ್ದಾರಿಗಳ ಕುರಿತು ಅವರಲ್ಲಿ ಅಸಮಾಧಾನ ಭುಗಿಲೆದ್ದಿದೆ ಎಂದು ಹೇಳಲಾಗಿದೆ.
ಮುಂದಿನ ರಾಜಕೀಯ ನಡೆ ಏನು?
ತಮಿಳುನಾಡು ರಾಜಕೀಯದಲ್ಲಿ ಹಿರಿಯ ನಾಯಕರಾಗಿರುವ ಒಪಿಎಸ್, ದಕ್ಷಿಣ ತಮಿಳುನಾಡಿನಲ್ಲಿ ತಮ್ಮದೇ ಆದ ಬೆಂಬಲಿಗರ ನೆಲೆಯನ್ನು ಹೊಂದಿದ್ದಾರೆ. ಡಿಎಂಕೆ ಪಾಳಯದಲ್ಲಿ ತಮಗೆ ನಿರೀಕ್ಷಿತ ಮಹತ್ವ ಸಿಗುತ್ತಿಲ್ಲ ಎಂಬ ಭಾವನೆ ಅವರ ಬೆಂಬಲಿಗರಲ್ಲಿಯೂ ಮೂಡಿದೆ.
ಒಂದು ವೇಳೆ ಅವರು ಈ ನಿರ್ಧಾರದಂತೆ ಅಧಿಕೃತವಾಗಿ ಹೊರಬಂದರೆ, ಇದು ತಮಿಳುನಾಡು ರಾಜಕೀಯ ಸಮೀಕರಣದಲ್ಲಿ ಮತ್ತೊಂದು ದೊಡ್ಡ ಬದಲಾವಣೆಗೆ ಕಾರಣವಾಗುವ ಸಾಧ್ಯತೆಯಿದೆ. ಈ ಕುರಿತು ಒಪಿಎಸ್ ಅಥವಾ ಡಿಎಂಕೆ ವರಿಷ್ಠರಿಂದ ಅಧಿಕೃತ ಪ್ರತಿಕ್ರಿಯೆಬರಬೇಕಿದೆ.

