ಕಾಕ್ರೋಚ್ ಜನತಾ ಪಾರ್ಟಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಆರಂಭಿಸಿದ ದಿನದಿಂದಲೇ ಬಿಜೆಪಿಯ ಕೆಲ ನಾಯಕರು ಹಾಗೂ ನಾಯಕಿಯರು ಸಿಜೆಪಿ ವಿರುದ್ಧ ಕೆಂಡಕಾರುತ್ತಲೇ ಬರುತ್ತಿದ್ದು, ಈ ಪೈಕಿ ಕಂಗನಾ ರಣಾವತ್ ಸಹ ಒಬ್ಬರು.
ಸಾಮಾನ್ಯವಾಗಿಯೇ ತನ್ನ ಹೇಳಿಕೆಗಳಿಂದ ಅನೇಕ ಬಾರಿ ಯುವ ಜನತೆ ಕೈಗೆ ಸಿಕ್ಕು ಟ್ರೋಲ್ ಆಗಿರುವ ಕಂಗನಾ ರಣಾವತ್ ಇತ್ತೀಚೆಗಷ್ಟೆ ಜೆನ್ಝೀಗಳನ್ನು ಜನರೇಷನ್ ಗಟ್ಟರ್ ಎಂದು ಖಂಡಿಸಿ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗ ಟ್ರೋಲ್ ಆಗಿದ್ದರು.
ಹೀಗೆ ಕಂಗನಾ ಜೆನ್ಝೀಗಳ ವಿರುದ್ಧ ನಾಲಿಗೆಹರಿಬಿಟ್ಟಿದ್ದನ್ನು ಯಾರೂ ಸಹ ಗಂಭೀರವಾಗಿ ತೆಗೆದುಕೊಳ್ಳಬೇಡಿ, ಆಕೆಯ ಮಾತನ್ನು ಅವರ ಪಕ್ಷದ ನಾಯಕರೇ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಟಾಂಗ್ ನೀಡುವ ಮೂಲಕ ಸಿಜೆಪಿ ವಕ್ತಾರ ಸೌರವ್ ದಾಸ್ ಟೀಕಿಸಿದ್ದರು.
ಈ ಹೇಳಿಕೆಯ ವಿರುದ್ಧವೂ ಕಿಡಿಕಾರಿರುವ ಕಂಗನಾ ರಣಾವತ್ ಸೌರವ್ ದಾಸ್ ಮಾತನಾಡಿರುವ ವಿಡಿಯೊವನ್ನು ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ನಾನು ಈ ವ್ಯಕ್ತಿ ಬಗ್ಗೆ ಗೂಗಲ್ ಮಾಡಿದೆ, ಆತನ ವಯಸ್ಸು 28 ವರ್ಷವಾಗಿದ್ದು, ಆತ ಹೇಗೆ ವಿದ್ಯಾರ್ಥಿ ಎಂದು ಹೇಳಿಕೊಳ್ಳುತ್ತಾನೋ ಅರ್ಥವಾಗುತ್ತಿಲ್ಲ. ನಾನು ಎರಡು ವರ್ಷಗಳಿಂದ ರಾಜಕೀಯದಲ್ಲಿದ್ದರೂ, ಇಪ್ಪತ್ತು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ. ಈತನ ವಯಸ್ಸಿನಲ್ಲಿ ನಾನು ಎರಡು ರಾಷ್ಟ್ರ ಪ್ರಶಸ್ತಿಗಳನ್ನು ಹೊಂದಿದ್ದೆ. ನಾನು ಸದ್ಯ ನಟಿ, ರಾಜಕಾರಣ, ನಿರ್ಮಾಣ, ಉದ್ಯಮಿಯಾಗಿ ಕೆಲಸ ಮಾಡುತ್ತಿದ್ದೇನೆ. ಆದರೆ ಈತನ ರೀತಿಯ ಉಪಯೋಗಕ್ಕೆ ಬಾರದ ನಿರುದ್ಯೋಗಿಗೆ ಇದೆಲ್ಲ ಅರ್ಥವಾಗುವುದಿಲ್ಲ. ಸೌರವ್ ನೀನೊಬ್ಬ ನಿರುದ್ಯೋಗಿ, ವಿದ್ಯಾರ್ಥಿಯಲ್ಲ, ನಿನ್ನ ಸಮಸ್ಯೆಗಳು ವೈಯಕ್ತಿಕವಷ್ಟೇ. ಮೊದಲು ಏನಾದರೂ ಕೌಶಲ್ಯ ಕಲಿ’ ಎಂದು ಸ್ಟೋರಿ ಬರೆದುಕೊಂಡು ತಿರುಗೇಟು ಕೊಟ್ಟಿದ್ದಾರೆ.

